ಮರಳಿ ಟಾಟಾ ತೆಕ್ಕೆಗೆ ನಷ್ಟದಲ್ಲಿರುವ ಏರ್ ಇಂಡಿಯಾ? – News Mirchi

ಮರಳಿ ಟಾಟಾ ತೆಕ್ಕೆಗೆ ನಷ್ಟದಲ್ಲಿರುವ ಏರ್ ಇಂಡಿಯಾ?

ನಷ್ಟದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖರೀದಿಸಲು ಟಾಟಾ ಗ್ರೂಪ್ ಸಿದ್ಧವಾಗಿದ್ದು, ಖರೀದಿ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಏರ್ ಇಂಡಿಯಾವನ್ನು ಖರೀದಿಸಲು ಕೆಲವು ಆಸಕ್ತರಾಗಿದ್ದಾರೆ. ಆದರೆ ಅದರಲ್ಲಿ ಟಾಟಾ ಗ್ರೂಪ್ ಮಾತ್ರ ಗರಿಷ್ಟ ಶೇರುಗಳನ್ನು ಖರೀದಿಸಲು ಉತ್ಸುಕವಾಗಿದೆ.


ಇದೇ ಟಾಟಾ ಗ್ರೂಪ್ 1932ರಲ್ಲಿ ಟಾಟಾ ಏರ್ ಲೈನ್ಸ್ ಹೆಸರಿನಲ್ಲಿ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದ್ದು, ಸ್ವಾತಂತ್ರ್ಯ ಬಂದ ನಂತರ 1948ರಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದ ಸಂಸ್ಥೆ, 5 ವರ್ಷಗಳ ನಂತರ ಸಂಪೂರ್ಣ ರಾಷ್ಟ್ರೀಕೃತಗೊಂಡು ಏರ್ ಇಂಡಿಯಾ ಆಗಿ ಬದಲಾಗಿತ್ತು. ಹೀಗಾಗಿ ಏರ್ ಇಂಡಿಯಾ ಮೇಲಿನ ಮಮಕಾರ ಟಾಟಾ ಗ್ರೂಪ್ ಹೆಚ್ಚಾಗಿದ್ದು, ಅದು ತಮ್ಮದೇ ಎಂದು ಭಾವಿಸಿ ಖರೀದಿ ಪ್ರಕ್ರಿಯೆಯಲ್ಲಿ ಉನ್ನತ ಸಚಿವರೊಂದಿಗೆ ಮಾತುಕತೆ ನಡೆಸಿದೆ. ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಭಾಗಶಃ ಅಥವಾ ಸಂಪೂರ್ಣ ಖಾಸಗೀಕರಣಗೊಳಿಸುವ ಆಯ್ಕೆಗಳ ಕುರಿತು ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ ಸೆಪ್ಟೆಂಬರ್ ಒಳಗೆ ಏರ್ ಇಂಡಿಯಾ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ತೀರ್ಮನಿಸಿದೆ. ಇದರಿಂದಾಗಿ ಹಣಕಾಸು ವರ್ಷ ಮುಗಿಯುವ ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಲು 6 ತಿಂಗಳ ಸಮಯ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿದೆ ಕೇಂದ್ರ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ಹಣಕಾಸು ವರ್ಷದಿಂದ ಏರ್ ಇಂಡಿಯಾ ಖಾಸಗಿ ಒಡೆತನದಲ್ಲಿ ಹಾರುತ್ತದೆ.

Loading...