9 ವರ್ಷದ ಬಾಲಕನನ್ನು ಕೊಂದ ಅಪ್ರಾಪ್ತ ಯುವಕ, ರಕ್ತ ಕುಡಿದು ಮಾಂಸವನ್ನೂ ತಿಂದ!

ಲೂಧಿಯಾನಾ: 9 ವರ್ಷದ ಬಾಲಕನನ್ನು ಕೊಂದು ಆತನ ರಕ್ತ ಕುಡಿದ 8 ನೇ ತರಗತಿಯ ಅಪ್ರಾಪ್ತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಬಾಲಕನನ್ನು ದೀಪು ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದವನ ದೂರದ ಸಂಬಂಧಿ ಎನ್ನಲಾಗಿದೆ. ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಅಪ್ರಾಪ್ತ ಯುವಕ, ಕೊಲೆ ಮಾಡಿದ ನಂತರ ಆತನ ತೊಡೆಯ ಭಾಗದ ಮಾಂಸವನ್ನೂ ತಿಂದಿದ್ದಾಗಿ ಹೇಳಿದ್ದಾನೆ.

ಪೊಲೀಸ್ ಮೂಲಗಳ‌ ಪ್ರಕಾರ, ಗಾಳಿ ಪಟದ ಆಸೆ ತೋರಿಸಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮನೆಗೆ ದೀಪುವನ್ನು ಕರೆದೊಯ್ದ ಆರೋಪಿ ಕೊಲೆ ಮಾಡಿದ್ದಾನೆ. ನಂತರ ದೇಹವನ್ನು ತುಂಡು ತುಂಡು ಮಾಡಿ ಚೀಲದಲ್ಲಿ ತುಂಬಿಸಿ ಸ್ವಲ್ಪ ದೂರದಲ್ಲಿ ಬಿಸಾಡಿದ್ದ. ಕೊಲೆ ಮಾಡಿದ ನಂತರ ದೀಪುವಿನ ಹೃದಯವನ್ನು ಕಿತ್ತು ತಾನು ಓದುತ್ತಿದ್ದ ಶಾಲೆಯ ಬಳಿ ಬಿಸಾಡಿದ್ದ. ಪೊಲೀಸರು ಶಾಲೆಯ ಬಳಿ ಬಿಸಾಡಿದ್ದ ಹೃದಯವನ್ನು ವಶಪಡಿಸಿಕೊಂಡಿದ್ದಾರೆ.

ಕೊಲೆ ಮಾಡಿದ ಯುವಕನಿಗೆ ಮೊದಲಿನಿಂದಲೂ ಹಸಿ ಮಾಂಸ ತಿನ್ನುವುದೆಂದರೆ ಇಷ್ಟವಂತೆ. ಆಗಾಗ ತನ್ನ ಕೈಯನ್ನು ತಾನೇ ಕಚ್ಚುವುದು ಮಾಡುತ್ತಿದ್ದ ಎಂದು ಅವನ ಪೋಷಕರು ಹೇಳಿದ್ದಾರೆ. ಆತನಿಗೆ ಮಾನಸಿಕ ಸಮಸ್ಯೆಯಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ.