ಮೋದಿಗೆ ಸಲಹೆ ನೀಡಿದವರು ಯಾರು?

ನವದೆಹಲಿ: ಇಲ್ಲಿಯವರೆಗೂ ದೇಶದಲ್ಲಿ ಚಲಾವಣೆಯಲ್ಲಿದ್ದ 500, 100 ಮುಖಬೆಲೆಯ ನೋಟು ರದ್ದು ಮಾಡಿ ಮಂಗಳವಾರ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ ಕ್ಷಣದಿಂ ದೇಶಾದ್ಯಂತ ಪ್ರತಿಯೊಬ್ಬರು ಈ ಕುರಿತು ಚರ್ಚಿಸಲು ಆರಂಭಿಸಿದ್ದಾರೆ. ಹಲವು ಜೋಕುಗಳೂ ಹುಟ್ಟಿಕೊಂಡು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಅಸಲಿಗೆ ಈ ನೋಟುಗಳನ್ನು ರದ್ದು ಪಡಿಸುವಂತೆ ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ್ದು ಯಾರು?

ಈ ಐತಿಹಾಸಿಕ ತೀರ್ಮಾನ ರಾತ್ರೋ ರಾತ್ರಿ ಕೈಗೊಂಡಿದ್ದಲ್ಲ. ಔರಂಗಾಬಾದಿನ ಅರ್ಕಿಟೆಕ್ಟ್, ಚಾರ್ಟರ್ಡ್ ಅಕೌಂಟೆಂಟ್ ಅನಿಲ್ ಬೊಕಿಲ್ ಮೊದಲು ಈ ಉಪಾಯವನ್ನು ಪ್ರಧಾನಿಯವರ ಬಳಿ ಹಂಚಿಕೊಂಡರು. ಅವರು ಆರಂಭಿಸಿದ ‘ಅರ್ಥ ಕ್ರಾಂತಿ’ ಸಿದ್ಧಾಂತಗಳಲ್ಲಿ ಈ ಸಲಹೆಯೂ ಒಂದು. ಇದೇ ವರ್ಷ ಜುಲೈನಲ್ಲಿ ಅನಿಲ್ ಬೊಕಿಲ್ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿ ಮಾಡಿ ಕಪ್ಪುಹಣವನ್ನು ನಿಯಂತ್ರಿಸಲು ತಮ್ಮ ಬಳಿ ಇದ್ದ ಆಲೋಚನೆಗಳನ್ನು ಹಂಚಿಕೊಂಡರು. ಮೊದಲು ನರೇಂದ್ರಮೋದಿಯವರು ಬೊಕಿಲ್ ಗೆ ನೀಡಿದ್ದು ಕೇವಲ 8 ನಿಮಿಷಗಳ ಅಪಾಯಿಂಟ್ಮೆಂಟ್ ಅಷ್ಟೇ. ಆದರೆ ಚರ್ಚೆ ಒಂದು ಬಾರಿ ಆರಂಭವಾದ ನಂತರ ದೇಶವನ್ನು ವಿಶ್ವಗುರುವನ್ನಾಗಿ ಕಾಣುವ ಮಹತ್ಮಾಕಾಂಕ್ಷೆ ಹೊಂದಿರುವ ಪ್ರಧಾನಿ, ಬೊಕಿಲ್ ರವರ ವಿಚಾರಗಳನ್ನು ಆಸಕ್ತಿಯಿಂದ ಎರಡು ಗಂಟೆಗಳ ಕಾಲ ಕೇಳಿಸಿಕೊಂಡರು.

ಲೆಕ್ಕ ತೋರಿಸದೆ ನಗದು ರೂಪದಲ್ಲಿ ದೊಡ್ಡ ಮೊತ್ತದ ಹಣ ಅಡಗಿಸಿಕೊಂಡಿರುವುದರಿಂದಲೇ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರುತ್ತಿವೆ. ಇದರಿಂದ ಕ್ರಮೇಣ ಹಣ ತನ್ನ ಬೆಲೆ ಕಳೆದುಕೊಳ್ಳುತ್ತದೆ, ಸಾಧ್ಯವಾದಷ್ಟು ಬೇಗ ಇದಕ್ಕೆ ಅಂತ್ಯ ಹಾಡಬೇಕು ಎಂದು ಇದಕ್ಕೂ ಮುನ್ನ ಅನಿಲ್ ಬೊಕಿಲ್ ಒಂದು ವೀಡಿಯೋದಲ್ಲಿ ಹೇಳಿದ್ದರು. ಅವರು ಕೇವಲ ದೊಡ್ಡ ನೋಟು ರದ್ದು ಮಾತ್ರವಲ್ಲದೆ ಇನ್ನೂ ಹಲವು ವಿಷಯಗಳನ್ನು ಹೇಳಿದ್ದರು. ಸದ್ಯ ಇರುವ ತೆರಿಗೆ ಪದ್ದತಿಯನ್ನು ಬದಲಿಸಬೇಕು. ಆಮದು ತೆರಿಗೆ ಹೊರತುಪಡಿಸಿ ಉಳಿದೆಲ್ಲಾ ವ್ಯವಹಾರಗಳಿಗೆ ಒಂದೇ ಕಡೆ ಟ್ರಾನ್ಸಾಕ್ಷನ್ ತೆರಿಗೆ ವಿಧಿಸಬೇಕು ಎಂದು ಹೇಳಿದ್ದರು. ನಗದು ರೂಪದಲ್ಲಿ 2 ಸಾವಿರಕ್ಕೂ ಮೇಲಿನ ವ್ಯವಹಾರ ನಡೆಯಬಾರದಂತೆ ನೋಡಬೇಕು ಎಂದು ಸಲಹೆ ನೀಡಿದ್ದರು.

ಅರ್ಥ ಕ್ರಾಂತಿ ತಂಡ ರಚನೆಯಾದಾಗಿನಿಂದ ಇಲ್ಲಿಯವರೆಗೂ ಹಲವರು ಆರ್ಥಿಕ ತಜ್ಞರು, ರಾಜಕೀಯ ನಾಯಕರು ಸೇರಿ ತಮ್ಮ ಚಿಂತನೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಲೇ ಇದೆ. ಮೂಲಗಳ ಪ್ರಕಾರ ಒಂದೂವರೆ ವರ್ಷದ ಹಿಂದೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಅರ್ಥ ಕ್ರಾಂತಿ ತಂಡಕ್ಕೆ ರಾಹುಲ್ ನೀಡಿದ್ದು ಕೇವಲ 15 ಸೆಕೆಂಡುಗಳು ಮಾತ್ರ.