ಹೊಸ ನೋಟಿನ ಹಿಂದಿನ ಕಥೆ ನಿಮಗೆ ಗೊತ್ತೇ – News Mirchi

ಹೊಸ ನೋಟಿನ ಹಿಂದಿನ ಕಥೆ ನಿಮಗೆ ಗೊತ್ತೇ

ಇತ್ತೀಚೆಗೆ ದೇಶಾದ್ಯಂತ ವಯಸ್ಸಿನ ಮಿತಿಯಿಲ್ಲದೆ, ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಂದಲೂ ಚರ್ಚೆಗೊಳಗಾಗಿರುವ ಭಾರತದ ಗರಿಷ್ಠ ಮುಖ ಬೆಲೆಯ ನೋಟು ರದ್ದಾಗಿರುವ ವಿಷಯದ ಹಿಂದೆ ಕುತೂಹಲಕರ ಹಿನ್ನೆಲೆಯಿದೆ.

ಬ್ರಿಟೀಷರ ಕಾಲದಿಂದ ನರೇಂದ್ರ ಮೋದಿಯವರ ಕಾಲದ ನಡುವಿನ ನೋಟಿನ ಇತಿಹಾಸದಲ್ಲಿ ಹಲವು ತಿರುವುಗಳಿವೆ. ಬ್ರಿಟೀಷರ ಕಾಲದಲ್ಲಿ ಜನ್ಮ ತಾಳಿದ ನಮ್ಮ ನೋಟುಗಳ ಮೇಲೆ ‘ಮೇಕ್ ಇನ್ ಇಂಡಿಯಾ’ ಮುದ್ರೆಯೊತ್ತಿದ್ದು ಮಾತ್ರ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ. ನೋಟು ಮುದ್ರಣಕ್ಕೆ ಸೂಕ್ತ ಕಾಗದ, ಇಂಕು, ಭದ್ರತಾ ವೈಶಿಷ್ಟ್ಯಗಳ ಅವಶ್ಯಕತೆ ಇರುವುದರಿಂದ ನೋಟು ಮುದ್ರಣ ತುಂಬಾ ಖರ್ಚಿನ ವಿಷಯ. ಇಂದು ಡೆನ್ಮಾರ್ಕ್ ನಿಂದ ಕುವೈತ್ ವರೆಗೂ ಹಲವು ದೇಶಗಳು ನೋಟು ಮುದ್ರಣಕ್ಕಾಗಿ ಈಗಲೂ ವಿದೇಶಗಳನ್ನೇ ಅವಲಂಬಿಸಿವೆ.

ನಮ್ಮ ದೇಶವೂ ಮೊನ್ನೆಯವರೆಗೂ ಕರೆನ್ಸಿ ಮುದ್ರಣಕ್ಕಾಗಿ ವಿದೇಶಗಳನ್ನೇ ಅವಲಂಬಿಸಿತ್ತು. ಇವುಗಳ ಮುದ್ರಣಕ್ಕೆ ಬೇಕಾದ ಕಾಗದದಲ್ಲಿ ಶೇ.95 ರಷ್ಟು ಬ್ರಿಟನ್ ನ ‘ಥಾಮಸ್ ಡೀ ಲಾ ರೂ’, ಜರ್ಮನಿಯ ‘ಗಿನೆಕ್ ಡೆವ್ರಿಯಂಟ್’, ಕೆನಡಾದ ಮತ್ತೊಂದು ಪೇಪರ್ ಮಿಲ್ ನಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಅಂತರಾಷ್ಟ್ರೀಯ ಕಂಪನಿಗಳನ್ನು ಬಂಡವಾಳ ಹೂಡುವಂತೆ ಸೆಳೆಯಲು ‘ಮೇಕ್ ಇನ್ ಇಂಡಿಯಾ’ ಘೋಷಣೆ ಮಾಡಿದ್ದು ನಮಗೆ ಗೊತ್ತೇ ಇದೆ. 2015 ರಲ್ಲಿ ಆರ್‌ಬಿಐ ಅಧಿಕಾರಿಗಳನ್ನು ಕರೆಸಿದ ಮೋದಿ, ‘ಮೇಕ್ ಇನ್ ಇಂಡಿಯಾ ಎಂದು ನಾವು ಕರೆ ನೀಡುತ್ತಿದ್ದೇವೆ, ಆದರೆ ಮತ್ತೊಂದು ಕಡೆ ದೇಶದ ನೋಟು ಮುದ್ರಣಕ್ಕೆ ವಿದೇಶಿ ಕಂಪನಿಗಳಿಂದ ಕಾಗದ ಆಮದು ಮಾಡಿಕೊಳ್ಳುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಕರೆನ್ಸಿಗೆ ಬೇಕಾದ ಕಾಗದವನ್ನು ನಮ್ಮ ದೇಶದಲ್ಲಿಯೇ ತಯಾರಿಸಲು ಕ್ರಮ ಕೈಗೊಳ್ಳುವಂತೆ ಆಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.

ಇದರ ಫಲಿತಾಂಶ ಎಂಬಂತೆ ಕರೆನ್ಸಿ ನೋಟು ಮುದ್ರಿಸುತ್ತಿದ್ದ ನಮ್ಮ ಮೈಸೂರು ಪ್ರೆಸ್ ಸಮೀಪದಲ್ಲಿಯೇ ಕಾಗದ ಉತ್ಪಾದಿಸಲು ಮೈಸೂರು ಮಿಲ್ ಅನ್ನು ನಿರ್ಮಾಣ ಮಾಡಿದರು. 22 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಈ ಮಿಲ್ ಉತ್ಪಾದನೆಯನ್ನೂ ಆರಂಭಿಸಿತು. ಇದುವರೆಗೂ ದೇಶದಲ್ಲಿ ನೋಟಿಗೆ ಬೇಕಾದ ಕಾಗದವನ್ನು ತಯಾರಿಸುವ ಸರ್ಕಾರಿ ಸೆಕ್ಯೂರಿಟಿ ಪ್ರೆಸ್ ಮಧ್ಯಪ್ರದೇಶದಲ್ಲಿನ ಹೋಶಾಂಗಬಾದ್ ನಲ್ಲಿ ಕೇವಲ ಒಂದೇ ಇತ್ತು. 2,800 ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಆ ಮಿಲ್ ಉತ್ಪಾದಿಸುತ್ತಿದ್ದ ಕಾಗದ ನಮ್ಮ ಕರೆನ್ಸಿ ಅಗತ್ಯಗಳಿಗೆ ಸಾಕಾಗದೆ ವಿದೇಶಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ತರಿಸುತ್ತಿದ್ದೆವು.

1968 ರಲ್ಲಿ ಈ ಮಿಲ್ಲನ್ನು ನಿರ್ಮಿಸಲಾಗಿತ್ತು. ಸುಮಾರು 50 ವರ್ಷಗಳ ನಂತರ, ಮೋದಿ ಆಡಳಿತದಲ್ಲಿ ಎರಡನೇ ಸೆಕ್ಯೂರಿಟಿ ಪೇಪರ್ ಮಿಲ್ ನಿರ್ಮಾಣವಾಯಿತು. ಈಗ ಈ ಎರಡು ಮಿಲ್ಲುಗಳಿಂದ ಉತ್ಪಾದನೆಯಾಗುವ ಕಾಗದ ನಮ್ಮ ನೋಟು ಮುದ್ರಣ ಅಗತ್ಯಗಳಿಗೆ ಸಾಕಾಗುತ್ತದೆ. ಸರ್ಕಾರ ಹೊಸದಾಗಿ ಮುದ್ರಿಸಿದ 2000, 500 ರೂಪಾಯಿ ನೋಟುಗಳ ಮುದ್ರಣದಲ್ಲಿ ನಮ್ಮ ಕಾಗದದ್ದೇ ಸಿಂಹ ಪಾಲು. ಇದರಿಂದಾಗಿ ಪ್ರತಿ ವರ್ಷ ವಿದೇಶಗಳಿಂದ ಆಮದು ಮಾಡಿಕೊಳ್ಳಲು ಆಗುತ್ತಿದ್ದ ವೆಚ್ಚ 1500 ಕೋಟಿ ರೂಪಾಯಿ ಉಳಿತಾಯವಾಗುತ್ತದೆ ಎಂದು ಹೇಳಲಾಗುತ್ತಿದೆ.

ಆರಂಭದಲ್ಲಿ ವಿದೇಶಗಳಿಗೇ ನಮ್ಮ ನೋಟುಗಳನ್ನು ಮುದ್ರಿಸಲು ಹೊರಗುತ್ತಿಗೆ ನೀಡಲಾಗುತ್ತಿತ್ತು. ಅದರೆ ಅದು ಹೆಚ್ಚು ಖರ್ಚಿನಿಂದ ಕೂಡಿದ್ದರಿಂದ ಕ್ರಮೇಣ ಕಾಗದವನ್ನು ಮಾತ್ರ ಖರೀದಿಸಿ ನಮ್ಮಲ್ಲೇ ಪ್ರಿಂಟ್ ಮಾಡಲಾಗುತ್ತಿತ್ತು. ಇದೀಗ ಮುದ್ರಣದ ಜೊತೆಗೆ ಕಾಗದದ ಉತ್ಪಾದನೆಯೂ ಇಲ್ಲೇ ನಡೆಯುತ್ತಿದೆ.

 

Click for More Interesting News

Loading...

Leave a Reply

Your email address will not be published.

error: Content is protected !!