ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಏಕಾಂಗಿ ಹೋರಾಟ

ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್.ಡಿ.ಕುಮಾರಸ್ವಾಮಿ ಅವರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ದೇವೇಗೌಡರು, 224 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಕರಾವಳಿ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಜೆಡಿಎಸ್ ಗೆ ಹೆಚ್ಚು ಬಲವಿಲ್ಲ, ಹೀಗಾಗಿ ಇಲ್ಲಿ ಪಕ್ಷ ಸಂಘಟಿಸುತ್ತಿದ್ದು, ಇದರ ಭಾಗವಾಗಿ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ಬೃಹತ್ ಜೆಡಿಎಸ್ ಸಮಾವೇಶ ಆಯೋಜಿಸುವುದಾಗಿ ಹೇಳಿದರು.

ಈ ಬಾರಿಯ ಚುನಾವಣೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ನಡುವಿನ ಹಣಾಹಣಿಯಾಗಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್, ಬಿಜೆಪಿ ನಡುವಿನ ಹಣಾಹಣಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಿ ವೋಟರ್ ಸಮೀಕ್ಷೆ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುತ್ತದೆ ಎಂದು ಹೇಳಲಾಗಿದೆ. ಅಂದರೆ ಸಿ ವೋಟರ್ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರವಹಿಸುವುದಂತೂ ಸತ್ಯ.

Get Latest updates on WhatsApp. Send ‘Subscribe’ to 8550851559