ಕನ್ನ ಹಾಕಲು ಹೋದ ಕಳ್ಳ, ಬ್ಯಾಂಕಿನಲ್ಲೇ ಆತ್ಮಹತ್ಯೆ

ಸಾತ್ನಾ: ಮಧ್ಯರಾತ್ರಿ ಬ್ಯಾಂಕ್ ಗೆ ಕನ್ನ ಹಾಕಲು ಹೋದ ಕಳ್ಳನೊಬ್ಬ, ಸಿಕ್ಕಿಹಾಕಿಕೊಳ್ಳುವ ಭಯದಿಂದ ಸಿಸಿಟಿವಿಯಿಂದ ಬಚಾವಾಗಲು ಮುಖಕ್ಕೆ ಸುತ್ತಿಕೊಂಡಿದ್ದ ಟವೆಲ್ ನಿಂದಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದ ಘಟನೆ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ನಡೆದಿದೆ.

ಸಾತ್ನಾ ಜಿಲ್ಲೆಯ ಬೇಲಾ ಗ್ರಾಮದ ಲ್ಲಿ ಶುಕ್ರವಾರ ಮಧ್ಯರಾತ್ರಿ ಅಲಹಾಬಾದ್ ಬ್ಯಾಂಕ್ ನ ಶಟರ್ ಮುರಿದು ಧರ್ಮೇಂದ್ರ ಪಟೇಲ್(22) ಎಂಬ ಕಳ್ಳ ನುಗ್ಗಿದ್ದಾನೆ. ಸಿಸಿಟಿವಿಯಿಂದ ಮುಖ ಕಾಣದಂತೆ ಟವೆಲ್ ಸುತ್ತಿಕೊಂಡು ಲಾಕರ್ ಒಡೆಯಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರೊಳಗೆ ಬ್ಯಾಂಕ್ ನಲ್ಲಿ ಅಳವಡಿಸಿದ್ದ ಅಲಾರಂ ಮೊಳಗಿದೆ. ಅಲಾರಂ ಸದ್ದಿಗೆ ಬ್ಯಾಂಕ್ ಮೇಲಿನ ಅಂತಸ್ತಿನಲ್ಲಿ ವಾಸವಿದ್ದ ಕಟ್ಟಡದ ಮಾಲೀಕನಿಗೆ ಎಚ್ಚರವಾಗಿದ್ದು, ಮಾಲೀಕ ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ, ಗ್ರಾಮಸ್ಥರೆಲ್ಲಾ ದೊಣ್ಣೆ ಹಿಡಿದು ಬ್ಯಾಂಕ್ ಮುಂದೆ ಜಮಾಯಿಸಿ ಬ್ಯಾಂಕ್ ಮುಂದೆ ಕಾದು ನಿಂತಿದ್ದಾರೆ. ನಂತರ ಮಾಹಿತಿ ಪಡೆದ ಪೊಲೀಸರು ರಾತ್ರಿ 3:25 ರ ವೇಳೆಗೆ ಪೊಲೀಸರು ಅಲ್ಲಿಗೆ ತಲುಪಿದರು.

ಬ್ಯಾಂಕ್ ಒಳಹೊಕ್ಕು ನೋಡಿದ ಪೊಲೀಸರಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಳ್ಳ ಪತ್ತೆಯಾದ. ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಕಳ್ಳ ತನ್ನ ಮುಖಕ್ಕೆ ಕಟ್ಟಿಕೊಂಡಿದ್ದ ಟವೆಲ್ ನಿಂದಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.