ರಾಷ್ಟ್ರಪತಿ ಆಯ್ಕೆ ನಡೆಯೋದು ಹೀಗೆ

223 ರಾಜ್ಯ ಸಭೆ ಸದಸ್ಯರು, 543 ಲೋಕಸಭಾ ಸದಸ್ಯರು ಮತ್ತು 4,120 ಎಲ್ಲಾ ರಾಜ್ಯಗಳ ಶಾಸಕರು ಹೊಸ ರಾಷ್ಟ್ರಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮತದಾನ ಇಂದು(ಸೋಮವಾರ) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯುತ್ತದೆ. ದೇಶಾದ್ಯಂತ 32 ವಿವಿಧ ಮತದಾನ ಕೇಂದ್ರಗಳಿಂದ ಮತದಾನ ನಡೆಯುತ್ತದೆ. ಸಂಸತ್ ಸದಸ್ಯರು ಮಾತ್ರ ನವದೆಹಲಿಯಲ್ಲಿಯೇ ಮತದಾನ ಮಾಡುತ್ತಾರೆ. ಚುನಾವಣೆಯ ಮೇಲ್ವಿಚಾರಣೆಗೆ 33 ವೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದೆ. ಅವರಲ್ಲಿ ಇಬ್ಬರನ್ನು ಸಂಸತ್ ಭವನದಲ್ಲಿ ನಿಯೋಜಿಸಿದ್ದರೆ, ಉಳಿದವರನ್ನು ಆಯಾ ರಾಜ್ಯಗಳಲ್ಲಿ ನಿಯೋಜಿಸಲಾಗಿದೆ.

ರಾಷ್ಟ್ರಪತಿ ಚುನಾವಣೆ ಮತದಾನ ಬ್ಯಾಲೆಟ್ ಪೇಪರ್ ಮೇಲೆ ನಡೆಯಲಿದೆ. ಪೇಪರ್ ಮೇಲೆ ಒಂದು ಕಡೆ ಅಭ್ಯರ್ಥಿಗಳ ಹೆಸರು, ಮತ್ತೊಂದು ಕಡೆ ಆದ್ಯತೆಯ ಕ್ರಮವಿರುತ್ತದೆ. ಯಾವುದೇ ಚುನಾವಣೆ ಚಿಹ್ನೆಯಿರುವುದಿಲ್ಲ. ಮತದಾರರು ತಮ್ಮ ಅಭ್ಯರ್ಥಿಗಳ ಹೆಸರುಗಳ ಮುಂದೆ ಇರುವ ಪ್ರಾಶಸ್ತ್ಯ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆಯೋ ಅಷ್ಟು ಪ್ರಾಶಸ್ತ್ಯ ಸಂಖ್ಯೆಗಳನ್ನು ನೀಡಬಹುದು.

ಅಭ್ಯರ್ಥಿ ಗೆಲುವು ಸಾಧಿಸಲು ಒಟ್ಟು ಮತದಾನದ, ಅರ್ಹ ಮತಗಳ ಸಂಖ್ಯೆಯ ಶೇ.50 + 1 ಬರಬೇಕು. ಮೊದಲು ಪ್ರಥಮ ಪ್ರಾಶಸ್ತ್ಯ ಮತಗಳನ್ನು ಎಣಿಸಿ, ಅದಕ್ಕೆ ಅನುಗುಣವಾಗಿ ಆಯಾ ಅಭ್ಯರ್ಥಿಗಳು ಗಳಿಸಿದ ಮತಗಳ ಮೌಲ್ಯವನ್ನು ಹೇಳುತ್ತಾರೆ. ಯಾರಾದರೂ ಶೇ.50 +1 ಗಳಿಸಿದ್ದರೆ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸುತ್ತಾರೆ.

ಮೊದಲ ಪ್ರಾಶಸ್ತ್ಯ ಮತಗಳಿಂದ ಯಾರಿಗೂ ಗೆಲುವು ದಕ್ಕದೇ ಹೋದಲ್ಲಿ, ಎಲಿಮಿನೇಷನ್ ಪದ್ದತಿಯನ್ನು ಬಳಸಿಕೊಂಡು ಮತ ಎಣಿಕೆ ಮುಂದುವರೆಸುತ್ತಾರೆ. ಅತಿ ಕಡಿಮೆ ಮತಗಳನ್ನು ಗಳಿಸಿದವರನ್ನು ಸ್ಪರ್ಧೆಯಿಂದ ತೊಲಗಿಸಿ, ಅವರಿಗೆ ಬಿದ್ದ ಎರಡನೇ ಪ್ರಾಶಸ್ತ್ಯ ಮತಗಳನ್ನು ಉಳಿದ ಅಭ್ಯರ್ಥಿಗಳಿಗೆ ಸಮಾನವಾಗಿ ಹಂಚುತ್ತಾರೆ.

ಹೀಗೆ ಒಬ್ಬ ಅಭ್ಯರ್ಥಿಗೆ ಶೇ.50 + 1 ಮತಗಳ ಮೌಲ್ಯ ಬಂದು ಯಾರು ವಿಜೇತರು ಎಂಬುದು ನಿರ್ಣಯವಾಗುವವರೆಗೂ ಈ ಪದ್ದತಿಯನ್ನು ಮುಂದುವರೆಸುತ್ತಾರೆ. ಒಂದು ವೇಳೆ ತೊಲಗಿಸಿದ ಅಭ್ಯರ್ಥಿಗೆ ಸಂಬಂಧಿಸಿದ ಬ್ಯಾಲೆಟ್ ಪೇಪರ್ ಗಳಲ್ಲಿ ಎರಡನೇ ಪ್ರಾಶಸ್ತ್ಯ ಮತಗಳಿಲ್ಲದಿದ್ದರೆ, ಅದನ್ನು ಮುಂದಿನ ಎಣಿಕೆಗಳಲ್ಲಿ ಪರಿಗಣಿಸುವುದಿಲ್ಲ.