ರಾಷ್ಟ್ರಪತಿ ರೇಸ್ ನಲ್ಲಿ ಮೂವರು ಮಹಿಳೆಯರು..!

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರಾವಧಿ ಈ ಜೂನ್ ನಲ್ಲಿ ಅಂತ್ಯವಾಗಲಿದೆ. ಹೀಗಾಗಿ ಮುಂದಿನ ರಾಷ್ಟ್ರಪತಿ ಯಾರೆಂಬ ಚರ್ಚೆ ಶುರುವಾಗಿದೆ. 70 ವರ್ಷಗಳ ಸ್ವತಂತ್ರ ಭಾರತದಲ್ಲಿ ಕೇವಲ ಒಬ್ಬ ಮಹಿಳೆಯಷ್ಟೇ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಪ್ರತಿಭಾ ಪಾಟೀಲ್ 2007ರಿಂದ 2012ರವರೆಗೂ ರಾಷ್ಟ್ರಪತಿಯಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ಮಹಿಳೆಯರು ಸದಾ ಹಿಂದಿರುತ್ತಾರೆ. ಆದರೆ ಇದೀಗ ಮುಂದಿನ ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ಮೂವರು ಮಹಿಳೆಯರಿದ್ದಾರೆ. ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಜಾರ್ಖಂಡ್ ಗವರ್ನರ್ ದ್ರೌಪತಿ ಮುರ್ಮು ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

ಇವರೊಂದಿಗೆ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಹೆಸರೂ ಕೇಳಿಬರುತ್ತಿದೆ. ಆದರೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಗೆ ರಾಷ್ಟ್ರಪತಿ ಹುದ್ದೆ ಸಿಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಸದ್ಯ ನಡೆಯುತ್ತಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ನಂತರ, ಈ ಕುರಿತು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ. ಮುರಳಿ ಮನೋಹರ್ ಜೋಷಿಯವರಿಗೆ ಸದ್ಯ 83 ವರ್ಷ ವಯಸ್ಸಾಗಿದೆ. ಅವರು ಹತ್ತು ವರ್ಷದವರಿದ್ದಾಗ 1944 ರಿಂದಲೇ ಆರ್.ಎಸ್.ಎಸ್ ಸದಸ್ಯರಾಗಿದ್ದರು. ಇಂದಿರಾಗಾಂಧಿ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾಗ 19 ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

ಸುಷ್ಮಾ ಸ್ವರಾಜ್ ಸಹಾ ರಾಷ್ಟ್ರಪತಿ ಹುದ್ದೆಯಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರು. ಆಕೆ ಮೋದಿ ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಆಕೆಗೆ ಉತ್ತಮ ಸಂಬಂಧಗಳಿವೆ. ಸದ್ಯ ಲೋಕ ಸಭಾ ಸ್ಪೀಕರ್ ಆಗಿರುವ ಸುಮಿತ್ರಾ ಮಹಾಜನ್ ಕೂಡಾ ರಾಷ್ಟ್ರಪತಿ ಹುದ್ದೆಯ ಸ್ಪರ್ಧೆಗೆ ಕೇಳಿಬರುತ್ತಿರುವ ಮತ್ತೊಂದು ಹೆಸರು. ಆಕೆ ಎಂಟು ಬಾರಿ ಇಂಧೋರ್ ನಿಂದ ಸಂಸದೆಯಾಗಿ ಆಯ್ಕೆಯಾಗಿರುವುದು ವಿಶೇಷ. ಪ್ರಧಾನಿ ಮೋದಿ ಸ್ವತಃ ಸುಮಿತ್ರಾ ಮಹಾಜನ್ ಅವರನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿದ್ದರು. ಜಾರ್ಖಂಡ್ ಗವರ್ನರ್ ಆಗಿರುವ ದ್ರೌಪತಿ ಮುರ್ಮು ಕೂಡಾ ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಇದುವರೆಗೂ ದಲಿತರಿಗೆ ರಾಷ್ಟ್ರಪತಿ ಹುದ್ದೆ ದೊರೆತಿಲ್ಲ. ದಲಿತ ಮಹಿಳೆಯಾಗಿರುವ ದ್ರೌಪತಿ ಮರ್ಮು ಅವರು ರಾಷ್ಟ್ರಪತಿಯಾದರೆ ದಲಿತ ಸಮುದಾಯದಿಂದ ಬಂದ ಮೊದಲ ರಾಷ್ಟ್ರಪತಿಯಾಗುವ ಹಿರಿಮೆ ಅವರದಾಗುತ್ತದೆ.