ಮಿಲಿಟರಿ ವಾಹನಗಳ ಮೇಲೆ ಉಗ್ರರ ದಾಳಿ, ಇಬ್ಬರು ಯೋಧರ ಸಾವು

ಗುವಾಹಟಿ: ಅಸ್ಸಾಂ – ಅರುಣಾಚಲಪ್ರದೇಶ ಗಡಿಯಲ್ಲಿ ಪ್ರವಾಸಿಗರಿಗೆ ಬೆಂಗಾವಲಾಗಿ ಹೋಗುತ್ತಿದ್ದ ಅಸ್ಸಾಂ ರೈಫಲ್ಸ್ ನ ವಾಹನಗಳ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ 53 ನೇ ರಾಷ್ಟ್ರೀಯ ಹೆದ್ದಾರಿಯ 12ನೇ ಮೈಲಿ ಬಾರಾಬಸ್ತಿ ಬಳಿ ಮಿಲಿಟರಿ ವಾಹನಗಳ ಮೇಲೆ ಉಗ್ರರು ಗ್ರೇನೇಡ್ ದಾಳಿ ಆರಂಭಿಸಿ, ನಂತರ ಗುಂಡಿನ ದಾಳಿ ನಡೆಸಿದರು. ಕೂಡಲೇ ಎಚ್ಚೆತ್ತುಕೊಂಡ ಭಾರತೀಯ ಯೋಧರು ಪ್ರತಿ ದಾಳಿ ನಡೆಸಿದರು. ಇನ್ನೂ ಅಲ್ಲಿ ಗುಂಡಿನ ದಾಳಿ ಮುಂದುವರೆದಿದೆ. ಪಾಂಗ್ಸಾ ಉತ್ಸವಕ್ಕೆ ತೆರಳುತ್ತಿದ್ದ ಪ್ರವಾಸಿಗಳಿಗೆ ರಕ್ಷಣೆಯಾಗಿ ಮೂರು ಮಿಲಿಟರಿ ವಾಹನಗಳು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ.