8 ಅಮರನಾಥ ಯಾತ್ರಿಕರನ್ನು ಕೊಂದ ಉಗ್ರರ ದಾಳಿಯ ಸೂತ್ರಧಾರನ ಹತ್ಯೆ – News Mirchi

8 ಅಮರನಾಥ ಯಾತ್ರಿಕರನ್ನು ಕೊಂದ ಉಗ್ರರ ದಾಳಿಯ ಸೂತ್ರಧಾರನ ಹತ್ಯೆ

ಅಮರನಾಥ ಯಾತ್ರಿಕರ ಮೇಲೆ ನಡೆಸಿ 6 ಮಹಿಳೆಯರೂ ಸೇರಿದಂತೆ ಒಟ್ಟು 8 ಜನ ಯಾತ್ರಿಕರ ಸಾವಿಗೆ ಕಾರಣವಾದ ದಾಳಿಯ ಸೂತ್ರಧಾರನನ್ನು ಇಂದು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಶ್ರೀನಗರ ಜಿಲ್ಲೆಯ ನೌಗಾಂ ವಲಯದಲ್ಲಿ ನಡೆದ ಎನ್ಕೌಂಟರಿನಲ್ಲಿ ಉಗ್ರ ಅಬೂ ಇಸ್ಮಾಯಿಲ್ ಹತನಾಗಿದ್ದಾನೆ.

ಪಾಕ್ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಅಬೂ ಇಸ್ಮಾಯಿಲ್, ಆತನ ಸಹಚರ ಚೋಟಾ ಖಾಸಿಮ್ ಎನ್ಕೌಂಟರಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಜಮ್ಮೂ ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಇದು ಪೊಲೀಸರು, ಭದ್ರತಾ ಪಡೆಗಳಿಗೆ ಸಿಕ್ಕ ಬಹು ದೊಡ್ಡ ಜಯ ಎಂದು ಪೊಲೀಸರು ಹೇಳಿದ್ದಾರೆ.

ಉಗ್ರ ಅಬು ದುಜಾನಾ ಹತ್ಯೆ ನಂತರ ಕಾಶ್ಮೀರ ಕಣಿವೆಯಲ್ಲಿ ಲಷ್ಕರ್ ಸಂಘಟನೆಯ ಮುಖ್ಯಸ್ಥನಾಗಿ ಅಬು ಇಸ್ಮಾಯಿಲ್ ಕಾರ್ಯನಿರ್ವಹಿಸುತ್ತಿದ್ದ. ಜುಲೈ 10 ರಂದು ನಡೆದ ಅಮರನಾಥ ಯಾತ್ರಿಕರ ಮೇಲಿನ ದಾಳಿಯ ಪ್ರಮುಖ ಸೂತ್ರಧಾರ ಈತನಾಗಿದ್ದ.

ಉಗ್ರರ ಇರುವಿಕೆಯ ಖಚಿತ ಮಾಹಿತಿ ಪಡೆದು ಪೊಲೀಸರು ಮತ್ತು ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸಿದ್ದರು. ಎನ್ಕೌಂಟರಿನಲ್ಲಿ ಸತ್ತ ಉಗ್ರರ ಮೃತದೇಹಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇಬ್ಬರೂ ಉಗ್ರರು ಪಾಕಿಸ್ತಾನಕ್ಕೆ ಸೇರಿದವರೆನ್ನಲಾಗಿದೆ. ಕಳೆದೊಂದು ವರ್ಷದಿಂದ ಸತ್ತ ಪ್ರಮುಖ ಉಗ್ರರಲ್ಲಿ ಈತ ನಾಲ್ಕನೆಯವನು. ಬುರ್ವಾನ್ ವಾನಿ, ಸಬ್ಜಾರ್ ಭಟ್, ಅಬು ದುಜಾನಾ ಈ ಹಿಂದೆ ಭದ್ರತಾ ಪಡೆಗಳ ಕೈಯಲ್ಲಿ ಸತ್ತಿದ್ದರು.

Get Latest updates on WhatsApp. Send ‘Add Me’ to 8550851559

Loading...