ಮುಸ್ಲಿಮರಿಗೆ ನೀಡುತ್ತಿದ್ದ ಇಫ್ತಾರ್ ಸಂಪ್ರದಾಯಕ್ಕೆ ಟ್ರಂಪ್ ತಿಲಾಂಜಲಿ

ಅವಕಾಶ ಸಿಕ್ಕಾಗಲೆಲ್ಲಾ ಇಸ್ಲಾಂ, ಮುಸ್ಲಿಮರ ವಿರುದ್ಧ ಕಿಡಿ ಕಾರುವ ಡೊನಾಲ್ಡ್ ಟ್ರಂಪ್, ಈ ಬಾರಿ ಮತ್ತೊಂದು ತೀರ್ಮಾನದ ಮೂಲಕ ಸುದ್ದಿಯಾಗಿದ್ದಾರೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಸಂದರ್ಭದಲ್ಲಿ ಇದುವರೆಗೂ ವೈಟ್ ಹೌಸ್ ನಲ್ಲಿ ಮುಸ್ಲಿಮರಿಗೆ ಔತಣಕೂಟ ಏರ್ಪಡಿಸುವುದನ್ನು ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಮೇ 27 ರಂದು ರಂಜಾನ್ ಉಪವಾಸ ಆಚರಣೆ ಆರಂಭವಾಗಿದ್ದು, ಇಂದು ಸರ್ಕಾರದಿಂದ ಇಫ್ತಾರ್ ಕೂಟವಿಲ್ಲದೆ ಉಪವಾಸ ಮುಗಿಸಿದ್ದಾರೆ.

ಸುಮಾರು 200 ವರ್ಷಗಳ ಹಿಂದೆ ರಂಜಾನ್ ಔತಣಕೂಟ ನೀಡುವ ಸಂಪ್ರದಾಯ ಅಂದಿನ ಅಧ್ಯಕ್ಷ ಜೆಫರ್ಸನ್ ಅವರ ಅವಧಿಯಲ್ಲಿ ಆರಂಭವಾಯಿತು. ಜೆಫರ್ಸನ್ ಹುಟ್ಟುಹಾಕಿದ್ದ ಈ ಸಂಪ್ರದಾಯವನ್ನು ಕೆಲವರು ಪಾಲಿಸಿದರೆ, ಇನ್ನು ಕೆಲವರು ಪಾಲಿಸಲಿಲ್ಲ. ಆದರೆ 1990ರಲ್ಲಿ ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಮುಸ್ಲಿಮರಿಗೆ ಔತಣಕೂಟಕ್ಕಾಗಿ ವಿಶೇಷ ಆಸಕ್ತಿ ವಹಿಸಿದ್ದರು, ಸ್ವತಃ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್ ಅವರೇ ಇಫ್ತಾರ್ ಸಿದ್ಧತೆಯ ಮೇಲ್ವಿಚಾರಣೆ ವಹಿಸುತ್ತಿದ್ದರು. ಕ್ಲಿಂಟನ್ ನಂತರ ಅಧಿಕಾರಕ್ಕೆ ಬಂದ ಜಾರ್ಜ್ ಬುಷ್ ಒಂದು ಕಡೆ ಮುಸ್ಲಿಂ ದೇಶಗಳ ಮೇಲೆ ಯುದ್ಧ ಮಾಡಿದರೂ, ಮತ್ತೊಂದು ಕಡೆ ಶ್ವೇತಭವನದಲ್ಲಿ ಇಫ್ತಾರ್ ನೀಡುವುದು ಬಿಟ್ಟಿರಲಿಲ್ಲ. ಬರಾಕ್ ಒಬಾಮಾ ಆಡಳಿತದಲ್ಲೂ ರಂಜಾನ್ ಔತಣಕೂಟ ನಡೆಯುತ್ತಿತ್ತು. 20 ವರ್ಷಗಳಿಂದ ಸತತವಾಗಿ ತಪ್ಪದೇ ನಡೆದುಕೊಂಡು ಬಂದಿದ್ದ ಈ ಸಂಪ್ರದಾಯವನ್ನು ಟ್ರಂಪ್ ಸರ್ಕಾರ ಮುರಿದಿದೆ.