ಗುರ್ಮೀತ್ ನಿವಾಸದಿಂದ ಶಿಷ್ಯೆಯರ ಹಾಸ್ಟೆಲ್ ಗೆ ರಹಸ್ಯ ಸುರಂಗ ಮಾರ್ಗ! – News Mirchi

ಗುರ್ಮೀತ್ ನಿವಾಸದಿಂದ ಶಿಷ್ಯೆಯರ ಹಾಸ್ಟೆಲ್ ಗೆ ರಹಸ್ಯ ಸುರಂಗ ಮಾರ್ಗ!

ಹರಿಯಾಣದ ಡೇರಾ ಸಚ್ಚಾ ಸೌದಾ ದಲ್ಲಿ ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ತನ್ನ ನಿವಾಸ ಗುಫಾ ದಿಂದ ಶಿಷ್ಯೆಯರ ವಸತಿ ಹಾಸ್ಟೆಲ್ ಗೆ ಹೋಗಲು ನಿರ್ಮಿಸಿಕೊಂಡ ಫೈಬರ್ ಗ್ಲಾಸ್ ಸುರಂಗ ಮಾರ್ಗವೊಂದು ಪತ್ತೆಯಾಗಿದೆ. ಈ ಮಾರ್ಗದಲ್ಲಿ ನಾಲ್ಕು ಅಟ್ಯಾಚ್ಡ್ ಬಾತ್ ರೂಮ್ ಹೊಂದಿರುವ ನಾಲ್ಕು ಕೊಠಡಿಗಳಿವೆ. ಅಷ್ಟೇ ಅಲ್ಲದೆ ಗುರ್ಮೀತ್ ನಿವಾಸದಿಂದ ಸುಮಾರು 5 ಕಿ.ಮೀ ಉದ್ದದ ಮತ್ತೊಂದು ಮಣ್ಣಿನ ಸುರಂಗ ಮಾರ್ಗವೂ ಪತ್ತೆಯಾಗಿದ್ದು, ಇದು ತುರ್ತು ಸಂದರ್ಭಗಳಲ್ಲಿ ಪರಾರಿಯಾಗಲು ನಿರ್ಮಿಸಿಕೊಂಡಿರಬಹುದು ಎನ್ನಲಾಗಿದೆ.

ಪಂಚಕುಲದಲ್ಲಿ 800 ಎಕರೆಗಳಲ್ಲಿ ವಿಸ್ತರಿಸಿರುವ ಈ ಡೇರಾದಲ್ಲಿ ಶೋಧ ಕಾರ್ಯ ನಡೆಸುವಂತೆ ಪಂಜಾಬ್, ಹರಿಯಾಣ ಕೋರ್ಟ್ ಆದೇಶಿಸಿತ್ತು. ಹೀಗಾಗಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದರು.

ಈಗಾಗಲೇ ಸ್ಥಳದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯನ್ನು ಪತ್ತೆ ಹಚ್ಚಲಾಗಿದ್ದು, ಪಟಾಕಿ, 7 ಸಾವಿರ ಮೌಲ್ಯದ ರದ್ದಾದ ನೋಟುಗಳು, ಎಕೆ-47 ಗೆ ಬಳಸುವ ನಾಲ್ಕು ಬಾಕ್ಸ್ ನಷ್ಟು ಖಾಲಿ ಮ್ಯಾಗಜಿನ್, ನೋಂದಣಿಯಾಗದ ಐಷಾರಾಮಿ ಕಾರು, ಲೇಬಲ್ ಗಳಿಲ್ಲದ ಔಷಧಿಗಳು ಮುಂತಾದವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. [ಇದನ್ನೂ ಓದಿ: ಗುರ್ಮೀತ್ ಆಶ್ರಮದಲ್ಲಿ ಅಕ್ರಮ ಗರ್ಭಪಾತ ಕೇಂದ್ರಗಳು!]

ಮುನ್ನೆಚ್ಚರಿಕೆ ಕ್ರಮವಾಗಿ ಡೇರಾ ಪ್ರಧಾನ ಕಛೇರಿಗೆ ಬರುವ ರಸ್ತೆಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಗುರ್ಮೀತ್ ಬೆಂಬಲಿಗರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪದ ಮೇಲೆ ಡೇರಾ ಇನ್ಚಾರ್ಜ್ ಚಾಮ್ ಕೌರ್ ಮತ್ತೊಬ್ಬ ಪ್ರಮುಖ ಡೇರಾ ಅಧಿಕಾರಿ ದಾನ್ ಸಿಂಗ್ ರನ್ನು ಬಂಧಿಸಿದ್ದಾಗಿ ಡಿಸಿಪಿ ಹೇಳಿದ್ದಾರೆ.

Loading...