ಕೆಲಸ ಮಾಡಿ ಇಲ್ಲವೇ ತೊಲಗಿ: ಮತ್ತಿಬ್ಬರು ಐಪಿಎಸ್ ಅಧಿಕಾರಿಗಳು ಮನೆಗೆ – News Mirchi

ಕೆಲಸ ಮಾಡಿ ಇಲ್ಲವೇ ತೊಲಗಿ: ಮತ್ತಿಬ್ಬರು ಐಪಿಎಸ್ ಅಧಿಕಾರಿಗಳು ಮನೆಗೆ

ಚತ್ತೀಸ್ಗಢದಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಅಸಮರ್ಥರೆಂದು ಗುರುತಿಸಿರುವ ಕೇಂದ್ರ ಸರ್ಕಾರ, ಅವರಿಬ್ಬರನ್ನೂ ಸೇವೆಯಿಂದ ತೊಲಗಿಸಿದೆ. ಎ.ಎಂ.ಜ್ಯೂರಿ ಮತ್ತು ಕೆ.ಸಿ.ಅಗರ್ವಾಲ್ ಅವರನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ. ಈ ಮೂಲಕ ಇತರೆ ಅಧಿಕಾರಿಗಳಿಗೆ ಸಮರ್ಥವಾಗಿ ಕೆಲಸ ಮಾಡಿ ಇಲ್ಲವೆ ತೊಲಗಿ ಎಂಬ ಸಂದೇಶ ನೀಡಿದೆ. ರಾಜ್ಯ ಸರ್ಕಾರದ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಕೇಂದ್ರ ಈ ತೀರ್ಮಾನ ಕೈಗೊಂಡಿದೆ.

ಅದಕ್ಷ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಗೃಹ ಸಚಿವಾಲಯ ಮನೆಗೆ ಕಳುಹಿಸುತ್ತಿರುವುದು ಇದು ಮೊದಲೇನಲ್ಲ. ಇತ್ತೀಚಿನ ದಿನಗಳಲ್ಲಿ ಎರಡನೇ ಬಾರಿಗೆ ಅವಧಿಪೂರ್ವ ನಿವೃತ್ತಿ ನೀಡಿ ಕೇಂದ್ರ ಕೈಗೊಂಡಿರುವ ಕಠಿಣ ಕ್ರಮ ಇದಾಗಿದೆ. ಕಳೆದ ಎರಡು ವರ್ಷಗಳಲ್ಲಿ 130 ಅಧಿಕಾರಿಗಳಿಗೆ ಅವಧಿಪೂರ್ವ ನಿವೃತ್ತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕಳೆದ ತಿಂಗಳು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.

ಯುಪಿ ಎಟಿಎಸ್ ಗೆ ಸೆರೆ ಸಿಕ್ಕ ಬಾಂಗ್ಲಾ ಉಗ್ರ…

ಆಲ್ ಇಂಡಿಯಾ ಸರ್ವೀಸ್ ರೂಲ್ 16(3) ಪ್ರಕಾರ, ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಕೇಂದ್ರ ಸರ್ಕಾರವು ಅಧಿಕಾರಿಗಳಿಗೆ ಮೊದಲು ನೋಟೀಸ್ ನೀಡಿ ನಂತರ ಕಡ್ಡಾಯವಾಗಿ ನಿವೃತ್ತಿಗೊಳಿಸಲು ಅವಕಾಶವಿದೆ.

15 ವರ್ಷ ಸೇವೆ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿಐಜಿ ಶ್ರೇಣಿ ಅಧಿಕಾರಿಗಳಾದ ಈ ಇಬ್ಬರ ಕಾರ್ಯವೈಖರಿ ಕುರಿತು ಸಮೀಕ್ಷೆ ನಡೆಸಿ ಅದಕ್ಷರೆಂದು ತೀರ್ಮಾನಿಸಲಾಗಿದೆ. 1983 ರಲ್ಲಿ ರಾಜ್ಯ ಪೊಲೀಸ್ ಸೇವೆಯಲ್ಲಿ ಸೇರಿದ್ದ ಜ್ಯೂರಿ, ನಂತರ 2000 ದಲ್ಲಿ ಐಪಿಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. 1985 ರಲ್ಲಿ ರಾಜ್ಯ ಪೊಲೀಸ್ ಸೇವೆಗೆ ಸೇರಿದ್ದ ಅಗರ್ವಾಲ್, 2002 ರಲ್ಲಿ ಐಪಿಎಸ್ ಅಧಿಕಾರಿಯಾಗಿ ಬಡ್ತಿ ಹೊಂದಿದ್ದರು. ಸೇವೆಯಲ್ಲಿ ಸೇರಿದ 15 ವರ್ಷಗಳ ನಂತರ ಒಮ್ಮೆ ಮತ್ತು 25 ವರ್ಷಗಳ ನಂತರ ಎರಡನೇ ಬಾರಿ ಐಪಿಎಸ್ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸಮೀಕ್ಷೆ ನಡೆಸಲಾಗುತ್ತದೆ. ಕಳೆದ ಜನವರಿಯಲ್ಲೂ ಇದೇ ರಾಜ್ಯದಲ್ಲಿ ಮಾಯಾಂಕ್ ಶೀಲ್ ಚೌಹಾನ್, ರಾಜ್ ಕುಮಾರ್ ದೇವಾಂಗ್ ಅವರನ್ನೂ ಕೂಡಾ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು.

Loading...