ಭದ್ರತಾಪಡೆಗಳಿಂದ ಲಷ್ಕರ್ ಕಮಾಂಡರ್ ಹತ್ಯೆ, ಉಗ್ರರ ನೆರವಿಗೆ ಬಂದ ಸ್ಥಳೀಯರು

ಶ್ರೀನಗರ: ಲಷ್ಕರ್ ಎ ತೊಯ್ಬಾ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರನ್ನು ಶುಕ್ರವಾರ ಜಮ್ಮೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕುಲ್ಗಾಂ ಜಿಲ್ಲೆಯಲ್ಲಿನ ಅರ್ವಾನಿ ಗ್ರಾಮದಲ್ಲಿ ಕೈಗೊಂಡ ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ ನಾಗರಿಕರೊಬ್ಬರೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಗಳಲ್ಲಿ ಅಡಗಿದ್ದ ಉಗ್ರರನ್ನು ಶರಣಾಗುವಂತೆ ಹೇಳಿದರೂ ಕೇಳದೆ ಗುಂಡಿನ ದಾಳಿಗೆ ಇಳಿದ ಉಗ್ರರ ಮೇಲೆ ಭದ್ರತಾಪಡೆಗಳು ಪ್ರತಿದಾಳಿ ನಡೆಸಿದರು. ಆದರೆ ಈ ವೇಳೆ ಸ್ಥಳೀಯ ನಾಗರೀಕರು ಉಗ್ರರು ಪರಾರಿಯಾಗಲು ಸಹಕರಿಸುತ್ತಾ, ಭದ್ರತಾಪಡೆಗಳ ಮೇಲೆ ಕಲ್ಲೆಸೆತಕ್ಕೆ ಮುಂದಾದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಗ್ರರು ಅಡಗಿದ್ದ ಎರಡು ಮನೆಗಳನ್ನು ಬಾಂಬುಗಳಿಂದ ನೆಲಸಮಗೊಳಿಸಿರುವುದಾಗಿ ಸಿ.ಆರ್.ಪಿ.ಎಫ್ ಡಿಐಜಿ ದಿನಕರನ್ ಹೇಳಿದ್ದಾರೆ. ಮೃತ ಉಗ್ರರಲ್ಲಿ ಒಬ್ಬನನ್ನು ಲಷ್ಕರ್ ಎ ತೊಯ್ಬಾ ಕಮಾಂಡರ್ ಜುನೇದ್ ಮಟ್ಟೂ ಎಂದು ಗುರುತಿಸಲಾಗಿದೆ. ಈ ಹಿಂದೆ ಈತನ ಮೇಲೆ ಹಲವು ಪ್ರಕರಣಗಳಿವೆ. ಈತನ ತಲೆಗೆ ರೂ. 10 ಲಕ್ಷಗಳ ಬಹುಮಾನವೂ ಘೋಷಿಸಲಾಗಿತ್ತು. ಕಾರ್ಯಚರಣೆ ನಡೆಸಿದ ಪ್ರದೇಶದಲ್ಲಿ ಗುಂಡು ತಗುಲಿ ಗಾಯಗೊಂಡಿದ್ದ ಮಹಮ್ಮದ್ ಅಷ್ರಫ್(22) ಎಂಬ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ.