ಇಸ್ಲಾಮಿಕ್ ಸ್ಟೇಟ್ಸ್ ಅಡಗುತಾಣದ ಮೇಲೆ ಬೃಹತ್ ಗಾತ್ರದ ಬಾಂಬ್ ಎಸೆದ ಅಮೆರಿಕಾ

ಪೂರ್ವ ಅಫ್ಘನಿಸ್ತಾನದ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು ಅವಿತಿದ್ದ ಗುಹೆಗಳು, ಬಂಕರ್ ಗಳ ಮೇಲೆ ಅಮೆರಿಕಾ “ಮದರ್ ಆಫ್ ಆಲ್ ಬಾಂಬ್ಸ್” ಎಂದೇ ಕರೆಯಲಾಗುವ ಬೃಹತ್ ಬಾಂಬ್ ಜಿಬಿಯು-43 ಅನ್ನು ಭಾರತೀಯ ಕಾಲಮಾನ ಪ್ರಕಾರ ಗುರುವಾರ ಮಧ್ಯರಾತ್ರಿ ಬಳಸಿದೆ. ಇದುವರೆಗೂ ನಡೆದ ಉಗ್ರರ ವಿರುದ್ಧ ಹೋರಾಟದಲ್ಲಿ ಇಷ್ಟು ಉದ್ದದ ಬಾಂಬ್ ಅನ್ನು ಅಮೆರಿಕಾ ಬಳಸಿರಲಿಲ್ಲ.

ಎಂ.ಸಿ-130 ಯುದ್ಧ ವಿಮಾನದಿಂದ ಈ ಬೃಹತ್ ಗಾತ್ರದ ಬಾಂಬ್ ಅನ್ನು ಎಸೆಯಲಾಗಿದೆ. ಜಿಬಿಯು-43 9,797 ಕೆಜಿ ತೂಕದ ಜಿಪಿಎಸ್ ಸಹಾಯದಿಂದ ಗುರಿ ಮುಟ್ಟಬಲ್ಲ ಬಾಂಬ್ ಇದಾಗಿದ್ದು, 2003 ರ ಮಾರ್ಚ್ ನಲ್ಲಿ ಇರಾಕ್ ಯುದ್ಧದ ಆರಂಭಕ್ಕೂ ಮುನ್ನ ಪರೀಕ್ಷಿಸಲಾಗಿತ್ತು. ಇದೀಗ ಬಳಸಲಾಗಿರುವ ಬಾಂಬ್ ನಿಂದ ಉಗ್ರರಿಗೆ ಆಗಿರುವ ಹಾನಿಯ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.