ಸುಪ್ರೀಂ ಕೋರ್ಟಿನಲ್ಲಿ ಎಲ್ಲವೂ ಸರಿಯಿಲ್ಲ: ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದ ನ್ಯಾಯಾಧೀಶರು |News Mirchi

ಸುಪ್ರೀಂ ಕೋರ್ಟಿನಲ್ಲಿ ಎಲ್ಲವೂ ಸರಿಯಿಲ್ಲ: ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದ ನ್ಯಾಯಾಧೀಶರು

ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಾದೀಶರು ನ್ಯಾಯಾಂಗದಲ್ಲಿನ ಅಕ್ರಮಗಳು ಮತ್ತು ನ್ಯಾಯಾಧೀಶರ ನೇಮಕಾತಿಯಿಂದ ಬೇಸತ್ತು ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧೀಶರ ನೇಮಕಾತಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು.

ಮೂರು ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರಂಜನ್ ಗೊಗೋಯಿ ಮತ್ತು ಮದನ್ ಲೋಕೂರ್ ಅವರೊಂದಿಗೆ ನ್ಯಾಯಮೂರ್ತಿ ಜೆ.ಚಲಮೇಶ್ವರ್ ಅವರು ನವದೆಹಲಿ ತುಘಲಕ್ ರಸ್ತೆಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ನ್ಯಾಯಾಂಗ ಭ್ರಷ್ಟಚಾರ ಮತ್ತು ನ್ಯಾಯಾಧೀಶರ ನೇಮಕಾತಿಗಳು ನ್ಯಾಯಾಂಗ ವ್ಯವಸ್ಥೆಯೊಳಗಿನ ವಿವಾದದ ವಸ್ತುಗಳಾಗಿವೆ.

ಕೆಲ ತಿಂಗಳ ಹಿಂದೆ ನಾವು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಬಳಿಗೆ ತೆರಳಿ ಒಂದು ನಿರ್ದಿಷ್ಟ ವಿಷಯದ ಕುರಿತು ಪ್ರಸ್ತಾಪಿಸಿ, ಕೆಲವು ಕ್ರಮಗಳು ಸರಿಯಿಲ್ಲ ಎಂದು ಹೇಳಿ ಸರಿಪಡಿಸುವಂತೆ ಮನವಿ ಪತ್ರ ನೀಡಿದ್ದೆವು. ಆದರೆ ನಮ್ಮ ಪ್ರಯತ್ನಗಳು ವಿಫಲವಾಗಿವೆ ಎಂದು ನಾಲ್ವರು ನ್ಯಾಯಮೂರ್ತಿಗಳು ಆರೋಪಿಸಿದ್ದಾರೆ. ನಮಗೆ ಇಷ್ಟವಿಲ್ಲದಿದ್ದರೂ ಅನ್ಯ ಮಾರ್ಗವಿಲ್ಲದೆ ಮಾಧ್ಯಮಗಳ ಮುಂದೆ ಬರಬೇಕಾಯಿತು ಎಂದು ನಾಲ್ವರು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸುಪ್ರೀಂ ಕೋರ್ಟಿನಲ್ಲಿ ಹಲವು ಅಕ್ರಮಗಳು ನಡೆಯುತ್ತಿದ್ದು, ಮುಖ್ಯ ನ್ಯಾಯಮೂರ್ತಿಗಳು ನಮ್ಮ ಮನವಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಳೆದ ಕೆಲ ತಿಂಗಳುಗಳಿಂದ ಸುಪ್ರೀಂ ಕೋರ್ಟ್ ಆಡಳಿತದಲ್ಲಿ ನಿರ್ಲಕ್ಷಿಸಲು ಆಗದಂತ ಕೆಲ ಅಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಆದರೆ ಯಾವ ನಿರ್ದಿಷ್ಟ ವಿಷಯಗಳ ಕುರಿತು ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿದರು ಎಂಬ ವಿಷಯವನ್ನು ಅವರು ಬಹಿರಂಗಪಡಿಸಲಿಲ್ಲ. ಬದಲಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ನೀಡಿದ ಪತ್ರದ ನಕಲನ್ನು ಮಾಧ್ಯಮಗಳಿಗೆ ನೀಡುವುದಾಗಿ ಹೇಳಿದ ಅವರು, ಅದರಲ್ಲಿ ಸಂಪೂರ್ಣ ವಿವರಗಳು ಲಭ್ಯವಿದೆ ಎಂದರು.

ದೇಶದ ಮೇಲೆ ದೀರ್ಘ ಕಾಲದ ಪರಿಣಾಮಗಳನ್ನು ಬೀರುವಂತಹ ಪ್ರಕರಣಗಳನ್ನು ಯಾವುದೇ ತಾರ್ಕಿಕತೆಯಿಲ್ಲದೆ ತಮಗೆ ಇಷ್ಟಬಂದ ನ್ಯಾಯಪೀಠಗಳಿಗೆ ನಿಯೋಜಿಸಲಾಗುತ್ತಿದೆ. ನ್ಯಾಯ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಎಲ್ಲಾ ವಿವರಗಳನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ನಿಮ್ಮ ನಡೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಅವಿಶ್ವಾಸ ಮತವೇ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನ್ಯಾ. ಮದನ್ ಲೋಕೂರ್, ನಿಮ್ಮ ಅನಿಸಿಕೆಗಳನ್ನು ನಮ್ಮ ಬಾಯಿಂದ ಹೇಳಿಸಬೇಡಿ ಎಂದು ಉತ್ತರಿಸಿದರು.

ನ್ಯಾಯಾಂಗ ವ್ಯವಸ್ಥೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ನಮಗೆ ಮಾಧ್ಯಮಗಳ ಮುಂದೆ ಇದನ್ನು ತಿಳಿಸುವುದರಲ್ಲಿ ಯಾವುದೇ ಸಂತೋಷವಿಲ್ಲ, ಆದರೆ ನಮಗೆ ಸಾರ್ವಜನಿಕರ ಮುಂದೆ ಬರದೆ ಬೇರೆ ದಾರಿಯಿರಲಿಲ್ಲ ಎಂದು ನ್ಯಾಯಮೂರ್ತಿ ಚಲಮೇಶ್ವರ್ ಹೇಳಿದ್ದಾರೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!