ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆ ಮುಹೂರ್ತ ಫಿಕ್ಸ್

***

ಕಾಂಗ್ರೆಸ್ ಮುಖಂಡರ ವಿರುದ್ಧ ಮುನಿಸಿಕೊಂಡು ಪಕ್ಷ ತೊರೆದಿದ್ದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ರಾಜಕೀಯದ ಕೊನೆಯ ದಿನಗಳಲ್ಲಿ ಸ್ವಾಭಿಮಾನದ ತೀರ್ಮಾನ ಕೈಗೊಂಡಿದ್ದು, ಬಿಜೆಪಿ ಸೇರ್ಪಡೆಯಾಗಿದ್ದೇನೆ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದಾಗಿ ಬಿಜೆಪಿ ಮುಖಂಡರು ವಾಗ್ದಾನ ನೀಡಿದ್ದಾರೆ ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಜನವರಿ 2 ರಂದು ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಬಿಜೆಪಿ ಕಛೇರಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿರುವುದಾಗಿ ಅವರು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀನಿವಾಸ ಪ್ರಸಾದ್, ಕಾಂಗ್ರೆಸ್ ಗೆ ಚುನಾವಣೆಗೆ ನಿಲ್ಲಲು ಅಭ್ಯರ್ಥಿ ಸಿಗುತ್ತಿಲ್ಲ, ಹಾಗಾಗಿಯೇ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಎಂದರು. ಬಿಜೆಪಿಯಲ್ಲಿ ಮೋದಿ ಬಂದ ಮೇಲೆ ಗರ್ಭಗುಡಿ ಸಂಸ್ಕೃತಿ ಇಲ್ಲ ಎಂದರು.

ಇದಕ್ಕೂ ಮುನ್ನ ಡಾಲರ್ಸ್ ಕಾಲೋನಿಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಜೊತೆ ಪಕ್ಷ ಸೇರ್ಪಡೆ ಕುರಿತು ಶ್ರೀನಿವಾಸ್ ಪ್ರಸಾದ್ ಚರ್ಚೆ ನಡೆಸಿದರು.

ನಂತರ ಮಾತನಾಡಿದ ಯಡಿಯೂರಪ್ಪ, ಈ ಹಿಂದೆ ಅಮಿತ್ ಷಾ ಬೆಂಗಳೂರಿಗೆ ಭೇಟಿ ನೀಡಿದ್ದಾಗಲೇ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಯಾಗಬೇಕಿತ್ತು, ಇದೀಗ ಅವರ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಿದೆ ಎಂದು ಪ್ರತಿಕ್ರಿಯಿಸಿದರು.