ವೆಂಕಯ್ಯನಾಯ್ಡು ಬಿಜೆಪಿಯ ಉಪರಾಷ್ಟ್ರಪತಿ ಅಭ್ಯರ್ಥಿ – News Mirchi

ವೆಂಕಯ್ಯನಾಯ್ಡು ಬಿಜೆಪಿಯ ಉಪರಾಷ್ಟ್ರಪತಿ ಅಭ್ಯರ್ಥಿ

ಬಿಜೆಪಿಯ ಉಪರಾಷ್ಟ್ರಪತಿ ಅಭ್ಯರ್ಥಿ ಕುರಿತ ಕುತೂಹಲಗಳಿಗೆ ತೆರೆ ಬಿದ್ದಿದೆ. ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಬಿಜೆಪಿ ತೀರ್ಮಾನ ತೆಗೆದುಕೊಂಡಿದೆ. ಸೋಮವಾರ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಸಭೆ ಸೇರಿದ್ದ ಕಮಲ ನಾಯಕರು ಈ ತೀರ್ಮಾನ ಕೈಗೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಧ್ಯಮಗಳಿಗೆ ವೆಂಕಯ್ಯನಾಯ್ಡು ಆಯ್ಕೆ ಕುರಿತು ಅಧಿಕೃತವಾಗಿ ಘೋಷಿಸಿದರು.

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದರಿಂದಾಗಿ ವೆಂಕಯ್ಯನಾಯ್ಡು ರವರು ತಮ್ಮ ಹುದ್ದೆಗಳಿಗೆ ಈ ರಾತ್ರಿಯೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಅವರು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನ.

ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿದ ನಂತರ ಉಪರಾಷ್ಟ್ರಪತಿ ಅಭ್ಯರ್ಥಿ ಕಣದಲ್ಲಿ ಹೆಚ್ಚು ಕೇಳಿ ಬಂದಿದ್ದು ವೆಂಕಯ್ಯನಾಯ್ಡು ಅವರ ಹೆಸರು. ಇದೀಗ ಅದು ಅಧಿಕೃತವಾಗಿ ಘೋಷಣೆಯಾಗಿದೆ.

ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ: ಅಪ್ಪ ಮಕ್ಕಳ ವಿಭಿನ್ನ ನಿಲುವು?

ಈ ಹಿಂದೆ ಉಪರಾಷ್ಟ್ರಪತಿ ಅಭ್ಯರ್ಥಿಗೆ ತಮ್ಮ ಹೆಸರು ಕೇಳಿಬರುತ್ತಿರುವ ಕುರಿತು ವೆಂಕಯ್ಯನಾಯ್ಡು ಅವರನ್ನು ಪ್ರಶ್ನಿಸಿದಾಗ, ಅಂತಹ ಸಾಧ್ಯತೆಗಳನ್ನು ನಿರಾಕರಿಸಿದ್ದ ಅವರು, ಜನರ ನಡುವೆ ಇದ್ದು, ಅವರಿಗೆ ಸೇವೆ ಸಲ್ಲಿಸುವುದು ತಮಗಿಷ್ಟ, ಔಪಚಾರಿಕ ಹುದ್ದೆಯಲ್ಲಿದ್ದು ಜನರಿಂದ ದೂರವಿರಲು ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಆದರೆ ಅವರನ್ನು ಕಮಲ ನಾಯಕರು ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಬಲವೃದ್ಧಿಸಿಕೊಳ್ಳುವ ತಂತ್ರದ ಭಾಗವಾಗಿಯೇ ಈ ಆಯ್ಕೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

Click for More Interesting News

Loading...
error: Content is protected !!