ಗರ್ಭಿಣಿಗೆ ಆಪರೇಷನ್ ವೇಳೆ ಇಬ್ಬರು ವೈದ್ಯರ ಜಗಳ, ಮಗು ಸಾವು

ವೈದ್ಯರನ್ನು ದೇವರಿಗೆ ಹೋಲಿಸುತ್ತೇವೆ. ಅಂತಹ ವೈದ್ಯರು ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಗರ್ಭಿಣಿ ತುರ್ತು ಶಸ್ತ್ರಚಿಕಿತ್ಸೆಗಾಗಿ ಆಪರೇಷನ್ ಥಿಯೇಟರಿನಲ್ಲಿನ ಬೆಡ್ ಮೇಲೆ ಮಲಗಿದ್ದರೆ, ಇಬ್ಬರು ವೈದ್ಯರು ತಮ್ಮ ಕರ್ತವ್ಯ ಮರೆತು ಪರಸ್ಪರ ಜಗಳವಾಡಿದ ಘಟನೆ ರಾಜಸ್ಥಾನದ ಜೋಧಪುರದಲ್ಲಿ ವರದಿಯಾಗಿದೆ.

ವೈದ್ಯರಿಬ್ಬರು ಜೋರಾಗಿ ಪರಸ್ಪರ ನಿಂದನೆಗಿಳಿದಿದ್ದರೆ, ಮತ್ತೊಬ್ಬ ವೈದ್ಯರು ಮತ್ತು ನರ್ಸ್ ಶಸ್ತ್ರ ಚಿಕಿತ್ಸೆ ನಡೆಯುತ್ತಿರುವುದನ್ನು ನೆನಪಿಸಿದ್ದರು. ಅದರೂ ಅವರು ತಮ್ಮ ವಾಗ್ವಾದವನ್ನು ಮುಂದುವರೆಸಿದ್ದರು. ಈ ಇಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ ಮಹಿಳೆ ಜನ್ಮ ನೀಡಿದ ಮಗು ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಈ ಘಟನೆಯನ್ನು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಜಗಳಕ್ಕಿಳಿದಿದ್ದ ಇಬ್ಬರು ವೈದ್ಯರನ್ನು ಉದ್ಯೋಗದಿಂದ ತೊಲಗಿಸಿದ್ದು, ಅವರಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಉಮೈದ್ ಆಸ್ಪತ್ರೆ ಸೂಪರಿಂಟೆಂಡೆಂಟ್ ಹೇಳಿದ್ದಾರೆ.