ರಾಮ ಮಂದಿರ ನಿರ್ಮಾಣಕ್ಕೆ ಕಲ್ಲು ಸಂಗ್ರಹ ಆರಂಭಿಸಿದ ವಿ.ಹಿಂ.ಪ |News Mirchi

ರಾಮ ಮಂದಿರ ನಿರ್ಮಾಣಕ್ಕೆ ಕಲ್ಲು ಸಂಗ್ರಹ ಆರಂಭಿಸಿದ ವಿ.ಹಿಂ.ಪ

ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತದೆ ಎಂಬ ವಿಶ್ವಾಸ ಹೊಂದಿರುವ ವಿಶ್ವ ಹಿಂದೂ ಪರಿಷತ್, ಅದರ ಪ್ರಧಾನ ಕಛೇರಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಲ್ಲುಗಳನ್ನು ಸಂಗ್ರಹಿಸಲು ಆರಂಭಿಸಿದೆ. ವಿವಾದಿತ ಬಾಬ್ರಿ ಮಸೀದಿ ಮತ್ತು ರಾಮಮಂದಿರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನವೇ ರಾಮ ಮಂದಿರ ನಿರ್ಮಾಣ ಇದೇ ವರ್ಷದಲ್ಲಿ ಆರಂಭದಲ್ಲಿ ಆರಂಭವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.

ಈಗಾಗಲೇ ವಿವಾದಿತ ರಾಮ ಜನ್ಮಭೂಮಿ ಜಾಗದಲ್ಲಿ ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದಿಂದ ಎರಡು ಟ್ರಕ್ ಗಳಷ್ಟು ಕಲ್ಲು ಬಂದಿದೆ ಎಂದು ಹಿರಿಯ ವಿಶ್ವ ಹಿಂದೂ ಪರಿಷತ್ ನಾಯಕ ತ್ರಿಲೋಕ್ ನಾಥ್ ಪಾಂಡೆ ಹೇಳಿದ್ದಾರೆ. ನಿರ್ಮಿಸಲು ಉದ್ದೇಶಿಸಿರುವ ರಾಮ ಮಂದಿರಕ್ಕೆ ಅಂತಿಮ ಸ್ಪರ್ಶ ನೀಡಲು ಇನ್ನೂ 100 ಲೋಡ್ ಗಳಷ್ಟು ಕಲ್ಲುಗಳು ಬೇಕಾಗಿವೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಮಂದಿರ ನಿರ್ಮಾಣಕ್ಕೆ ಯಾವುದೇ ಅಡಚಣೆಗಳುಂಟಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

2015 ರಲ್ಲಿ ಇದೇ ರೀತಿ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಕಲ್ಲು ಸಂಗ್ರಹಿಸಲು ಯತ್ನಿಸಿದಾಗ, ಅಂದಿನ ಸಮಾಜವಾದಿ ಪಕ್ಷ ನೇತೃತ್ವದ ಸರ್ಕಾರ ವಿಫಲಗೊಳಿಸಿತ್ತು. ಅಂದಿನ ಅಖಿಲೇಶ್ ಯಾದವ್ ಸರ್ಕಾರವು ವಾಣಿಜ್ಯ ತೆರಿಗೆ ಇಲಾಖೆಯಿಂದ ಕಲ್ಲು ಆಮದು ಮಾಡಿಕೊಳ್ಳಲು ಅಗತ್ಯವಿದ್ದ ಫಾರ್ಮ್-39 ನೀಡಲು ನಿರಾಕರಿಸಿತ್ತು. ಈಗ ಒಂದು ತಿಂಗಳ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಕಲ್ಲು ಆಮದು ಮಾಡಿಕೊಳ್ಳಲು ಅಗತ್ಯವಿರುವ ಅನುಮತಿ ನೀಡಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ.

1992, ಡಿಸೆಂಬರ್ 6 ರಂದು ಈಗಿನ ವಿವಾದಿತ ಜಾಗದಲ್ಲಿದ್ದ ಬಾಬ್ರಿ ಮಸೀದಿಯನ್ನು ಕರಸೇವಕರು ನೆಲಸಮ ಮಾಡಿದ್ದರು. ಈ ಘಟನೆ ದೇಶಾದ್ಯಂತ ಕೋಮು ಗಲಭೆಗಳಿಗೆ ಕಾರಣವಾಗಿತ್ತು. ಶ್ರೀರಾಮನ ಜನ್ಮಭೂಮಿಯಲ್ಲಿ ಮಸೀದಿಯನ್ನು ಕಟ್ಟಲಾಗಿತ್ತು ಎಂಬುದು ಕರಸೇವಕರ ವಾದವಾಗಿತ್ತು.

Loading...
loading...
error: Content is protected !!