ಪರಿಹಾರಕ್ಕಾಗಿ ಹುಲಿಗಳ ಬಾಯಿಗೆ ಹೋಗಿ ಬೀಳುತ್ತಿರುವ ವೃದ್ಧರು! – News Mirchi

ಪರಿಹಾರಕ್ಕಾಗಿ ಹುಲಿಗಳ ಬಾಯಿಗೆ ಹೋಗಿ ಬೀಳುತ್ತಿರುವ ವೃದ್ಧರು!

ಪಿಲಿಭಿತ್: ಸರ್ಕಾರದಿಂದ ಸಿಗುವ ಪರಿಹಾರಕ್ಕಾಗಿ ಗ್ರಾಮದವರೇ ತಮ್ಮ ಕುಟುಂಬದ ವಯಸ್ಸಾದ ವ್ಯಕ್ತಿಗಳನ್ನು ಹುಲಿಗಳ ಬಾಯಿಗೆ ಆಹಾರವಾಗಿ ಕಳುಹಿಸುತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವೃದ್ಧರನ್ನು ಅರಣ್ಯದಲ್ಲಿರುವ ಹುಲಿಗಳಿಗೆ ಆಹಾರವಾಗಿ ಕಳುಹಿಸಿ, ಸರ್ಕಾರ ನೀಡುವ ಲಕ್ಷಾಂತರ ರೂಪಾಯಿಗಳ ಪರಿಹಾರಕ್ಕೆ ಕೈಯೊಡ್ಡುತ್ತಿದ್ದಾರೆ ಉತ್ತರ ಪ್ರದೇಶದ ಪಿಲಿಭಿತ್ ಹುಲಿಗಳ ಅಭಯಾರಣ್ಯದ ಹತ್ತಿರದ ಗ್ರಾಮಸ್ಥರು.

ಉತ್ತರ ಪ್ರದೇಶದ ಪಿಲಿಭಿತ್ ಹುಲಿಗಳ ಅಭಯಾರಣ್ಯದಲ್ಲಿ ಆಗಾಗ ಹುಲಿಗಳ ದಾಳಿಗೆ ಗುರಿಯಾದ ವೃದ್ಧರ ಮೃತದೇಹಗಳು ಪತ್ತೆಯಾಗುತ್ತಿರುವುದು ಅಧಿಕಾರಿಗಳಲ್ಲಿ ಅನುಮಾನ ಮೂಡಿಸಿತ್ತು. ಫೆಬ್ರವರಿ 16 ರಿಂದ ಇಲ್ಲಿಯವರೆಗೂ ಅರಣ್ಯ ಪ್ರದೇಶದಲ್ಲಿ 7 ವೃದ್ಧರ ಮೃತದೇಹಗಳು ಸಿಕ್ಕಿದ್ದವು.

ಕೇಂದ್ರ ಸರ್ಕಾರಿ ಏಜೆನ್ಸಿಯಾದ ವನ್ಯಜೀವಿ ಅಪರಾಧ ನಿಯಂತ್ರಣ ಕೇಂದ್ರವು ಈ ಕುರಿತು ತನಿಖೆಗೆ ಮುಂದಾಯಿತು. ಮೃತದೇಹಗಳು ಸಿಕ್ಕಿದ ಪ್ರದೇಶಗಳು ಮತ್ತು ಅವು ಬಿದ್ದಿದ್ದ ರೀತಿಯನ್ನು ಪರಿಶೀಲಿಸಿದ ಅಧಿಕಾರಿಗಳು ವರದಿಯನ್ನು ಸಿದ್ಧಪಡಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕಳುಹಿಸಿಕೊಟ್ಟಿತ್ತು.

ಅಧಿಕಾರಿಗಳು ಹೇಳಿರುವ ಪ್ರಕಾರ, ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಯಾವುದೇ ಜೀವನಾಧಾರವಿಲ್ಲದೆ ಇಂತಹ ಕೃತ್ಯಗಳಿಗೆ ಮುಂದಾಗುತ್ತಿದ್ದಾರಂತೆ. ಅದರಲ್ಲೂ ಮನೆಯಲ್ಲಿ ವಯಸ್ಸಾಗಿರುವವರೇ ಹುಲಿಗಳ ಬಾಯಿಗೆ ಆಹಾರವಾಗಲು ಮುಂದೆ ಬರುತ್ತಿದ್ದಾರಂತೆ. ಅರಣ್ಯದಲ್ಲಿ ಹುಲಿಗೆ ಆಹಾರವಾದ ನಂತರ ಸಾಕ್ಷಿಗಾಗಿ ಮೃತರ ಬಟ್ಟೆ, ದೇಹದ ಉಳಿದ ಭಾಗಗಳನ್ನು ತಂದು ತಮ್ಮ ತಮ್ಮ ಹೊಲಗದ್ದೆಗಳಲ್ಲಿ ಹಾಕಿ ಪರಿಹಾರಕ್ಕಾಗಿ ಮನವಿ ಮಾಡುತ್ತಾರೆ. ಇತ್ತಿಚೆಗೆ 55 ವರ್ಷದ ಮಹಿಳೆಯನ್ನು ಹುಲಿ ಕೊಂದಿದೆ ಎಂದು ಪರಿಹಾರಕ್ಕಾಗಿ ಗ್ರಾಮಸ್ಥರು ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದರೆ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ ಅಧಿಕಾರಿಗಳು ಇದು ಹುಲಿ ಬಂದು ದಾಳಿ ನಡೆಸಿದ್ದಲ್ಲ ಬದಲಿಗೆ ಅರಣ್ಯದಲ್ಲಿ ತಾವಾಗಿಯೇ ಹೋಗಿ ಹುಲಿ ಬಾಯಿಗೆ ಆಹಾರವಾಗಿದ್ದು ಎಂದು ಹೇಳಿದ್ದಾರೆ.

Loading...