ಡೇರಾ ಸಚ್ಚಾ ಸೌದಾದಿಂದ ರೂ.200 ಕೋಟಿ ನಷ್ಟ ವಸೂಲಿಗೆ ಬಿಲ್ ತಯಾರಿಸಿದ ಪಂಜಾಬ್

ಗುರ್ಮೀತ್ ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಹೊರಬಿದ್ದ ನಂತರ ರಾಜ್ಯ ಸರ್ಕಾರ ಕೈಗೊಂಡ ಭದ್ರತೆಗೆ ಮತ್ತು ಪಂಜಾಬ್ ರಾಜ್ಯದಲ್ಲಿನ ಖಾಸಗಿ ಮತ್ತು ಸಾರ್ವಜನಿಗೆ ಆಸ್ತಿಗಳಿಗೆ ಆದ ನಷ್ಟ ರೂ. 200 ಕೋಟಿ ಎಂದು ಪಂಜಾಬ್ ಸರ್ಕಾರ ಅಂದಾಜಿಸಿದೆ. ಈ ಅಂದಾಜು ವೆಚ್ಚದ ವಿವರಗಳನ್ನು ಶೀಘ್ರದಲ್ಲಿಯೇ ಪಂಜಾಬ್ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಲಿದೆ.

ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಗುರ್ಮೀತ್ ಬೆಂಬಲಿಗರಿಂದಾಗುವ ನಷ್ಟವನ್ನು ಡೇರಾ ಸಚ್ಚಾ ಸೌದಾ ಆಸ್ತಿಯಿಂದಲೇ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ಈ ಹಿಂದೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಗುರ್ಮೀತ್ ಪ್ರಕರಣದದಿಂದಾಗಿ ಆದ ಅಂದಾಜು ನಷ್ಟವನ್ನು ಪಟ್ಟಿ ಮಾಡಿ ಬಿಲ್ ಸಿದ್ಧಗೊಳಿಸುವಂತೆ ಪಂಜಾಬ್ ಸರ್ಕಾರ ವಿವಿಧ ಇಲಾಖೆಗಳಿಗೆ ಸೂಚಿಸಿತ್ತು.[ಇದನ್ನೂ ಓದಿ:10 ಅಲ್ಲ… 20 ವರ್ಷ ಜೈಲು, 30 ಲಕ್ಷ ದಂಡ]

ತೀರ್ಪಿಗೂ ಮುನ್ನ ಮತ್ತು ನಂತರ ರಾಜ್ಯದಲ್ಲಿ ನಿಯೋಜಿಸಿರುವ 85 ಕಂಪನಿಗಳ ಅರೆಸೇನಾ ಪಡೆಗಳಿಗೆ ರಾಜ್ಯ ಸರ್ಕಾರ ಪಾವತಿಸಬೇಕಿದೆ. ಈಗಾಗಲೇ ಅರೆ ಸೇನಾ ಪಡೆಗಳು 13 ದಿನಗಳನ್ನು ರಾಜ್ಯದಲ್ಲಿ ಕಳೆದಿದ್ದು, ಇನ್ನೆಷ್ಟು ದಿನಗಳು ಇರಬೇಕಾಗುತ್ತದೆ ಎಂಬುದು ಹೇಳಲಾಗದು. ಇದರ ಜೊತೆಗೆ ಸಾರಿಗೆ ಇಲಾಖೆ ಬಸ್ಸುಗಳು ಓಡಾಟ ನಿಲ್ಲಿಸಿದ್ದರಿಂದಾದ ನಷ್ಟ, ಕಾನೂನು ಸುವ್ಯವಸ್ಥೆ ಪರಿಶೀಲಿಸಲು ರಾಜ್ಯದ ವಿವಿಧ ಭಾಗಗಳಿಗೆ ಪಂಜಾಬ್ ಡಿಜಿಪಿ ಓಡಾಡಿದ ಹೆಲಿಕಾಪ್ಟರ್ ವೆಚ್ಚಗಳು, ಹಿಂಸಾಚಾರದಲ್ಲಿ ರೈಲ್ವೇ ನಿಲ್ದಾಣಗಳಿಗಾದ ನಷ್ಟ, ವಿದ್ಯುತ್ ಘಟಕಗಳು ಮುಂತಾದ ಸಾರ್ವಜನಿಕ ಆಸ್ತಿ ನಷ್ಟ ಮತ್ತಿತರೆ ಖರ್ಚು ವೆಚ್ಚಗಳೂ ರಾಜ್ಯ ಸರ್ಕಾರ ಸಿದ್ಧಪಡಿಸಿದ ಅಂದಾಜು ಪಟ್ಟಿಯಲ್ಲಿವೆ.