ಅತಿ ಹೆಚ್ಚು ಶತಕ ಗಳಿಸಿದ ಎರಡನೇ ಆಟಗಾರನಾಗಿ ಕೊಹ್ಲಿ

ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಮೊದಲ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 281 ರನ್ ಗಳ ಗುರಿ ನೀಡಿದೆ. ನಾಯಕ ವಿರಾಟ್ ಕೊಹ್ಲಿ (121, 125 ಎಸೆತಗಳಲ್ಲಿ 9 ಫೋರ್ ಮತ್ತು 2 ಸಿಕ್ಸರ್) ಶತಕದೊಂದಿಗೆ ಭಾರತ ತಂಡದ ಉತ್ತಮ ಗುರಿಯನ್ನು ಪ್ರತಿಸ್ಪರ್ಧಿ ತಂಡಕ್ಕೆ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ಆರಂಭದಲ್ಲೇ ರೋಹಿತ್ ಶರ್ಮ(9), ಶಿಖರ್ ಧವನ್(20) ವಿಕೆಟ್ ಗಳನ್ನು ಕಳೆದುಕೊಂಡಿತು. ಆ ಸಮಯದಲ್ಲಿ ವಿರಾಟ್ ಕಣಕ್ಕಿಳಿದರು. ಆದರೆ ಕೊಹ್ಲಿಗೆ ವೈಯುಕ್ತಿಕ ಸ್ಕೋರ್ 29 ಆಗಿದ್ದ ಸಂದರ್ಭದಲ್ಲಿ ಒಂದು ಜೀವದಾನ ಸಿಕ್ಕಿತು. ನ್ಯೂಜಿಲೆಂಡ್ ಬೌಲರ್ ಗ್ರ್ಯಾಂಡ್ ಹೋಮ್ ಎಸೆತ 19 ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಕೊಹ್ಲಿ ಕವರ್ಸ್ ನಲ್ಲಿ ನೀಡಿದ ಸುಲಭ ಕ್ಯಾಚ್ ಅನ್ನು ಸಾಂಟ್ನರ್  ಕೈಚೆಲ್ಲಿದರು. ಇದನ್ನು ಬಳಸಿಕೊಂಡ ಕೊಹ್ಲಿ ಶತಕ ಗಳಿಸಿದರು.

ಈ ಶತಕದೊಂದಿಗೆ ಕೊಹ್ಲಿ, ಅತ್ಯಧಿಕ ಶತಕ ಗಳಿಸಿದ ಎರಡನೇ ಆಟಗಾರನಾಗಿ ದಾಖಲೆ ನಿರ್ಮಿಸಿದರು. ಇದು ವಿರಾಟ್ ಗೆ 31 ನೇ ಏಕದಿನ ಶತಕ. ಇದರಿಂದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್(30 ಶತಕ) ದಾಖಲೆಯನ್ನು ಮುರಿದರು. ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸಚಿನ್ ಅವರ ನಂತರದ ಸ್ಥಾನದಲ್ಲಿ ಈಗ ವಿರಾಟ್ ಕೊಹ್ಲಿ ಇದ್ದಾರೆ. ತಮ್ಮ ವೃತ್ತಿಜೀವನದಲ್ಲಿ 200 ನೇ ಏಕದಿನ ಪಂದ್ಯವಾಡುತ್ತಿರುವ ಕೊಹ್ಲಿ ಈ ಪಂದ್ಯದಲ್ಲಿಯೇ ಶತಕಗಳಿಸಿರುವುದು ಮತ್ತೊಂದು ವಿಶೇಷ. ಅತ್ಯಂತ ಸ್ಥಿರವಾದ ಆಟ ಪ್ರದರ್ಶಿಸಿ ತಂಡ ಉತ್ತಮ ಮೊತ್ತ ಪೇರಿಸುವಲ್ಲಿ ಕಾರಣರಾದರು.

ಕೊಹ್ಲಿ ನಂತರ ದಿನೇಶ್ ಕಾರ್ತಿಕ್ (37) ಗಳಿಸಿದರು. ಕೊನೆಯಲ್ಲಿ ಬಂದ ಭುವನೇಶ್ವರ್ ಕುಮಾರ್ (26; 15 ಎಸೆತಗಳಲ್ಲಿ 2 ಫೋರ್, 2 ಸಿಕ್ಸರ್) ಆಕ್ರಮಣಕಾರಿ ಪ್ರದರ್ಶನ ನೀಡಿದರು. ಅಂತಿಮವಾಗಿ ನಿಗದಿತ 50 ಓವರ್ ಗಳಲ್ಲಿ ಭಾರತ ತಂಡವು ಎಂಟು ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿತು.

Get Latest updates on WhatsApp. Send ‘Add Me’ to 8550851559