ವ್ಯಾಸ ಮಹಾಭಾರತ – ಭಾಗ 10

ನೈಮಿಷಾರಣ್ಯದಲ್ಲಿ ಕುಲಪತಿಗಳಾದ ಶೌನಕರು ಆರಂಭಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ಭಾಗವಹಿಸಲು ಒಮ್ಮೆ ಪೌರಾಣಿಕರಾದ ಲೋಮಹರ್ಷಣರ ಮಕ್ಕಳಾದ ಉಗ್ರಶ್ರವಸೌತಿಗಳು ಆಗಮಿಸಿದರು. ಅವರು ನೆರೆದಿದ್ದ ಋಷಿಗಳನ್ನು ಉದ್ದೇಶಿಸಿ… “ತಾವುಗಳು ಯಾವ ಪುರಾಣವನ್ನು ಕೇಳಲಿಚ್ಛಿಸುವಿರಿ…? ಅನ್ನುತ್ತಾರೆ

ಅದಕ್ಕೆ ಅಲ್ಲಿ ನೆರೆದಿದ್ದ ಋಷಿಗಳು… “ಶೌನಕರು ಸೂಚಿಸುವ ಕಥಾಪ್ರಸಂಗವನ್ನೇ ಹೇಳಿ” ಅನ್ನುತ್ತಾರೆ. ಶೌನಕರು ಹೇಳುತ್ತಾರೆ…
“ಲೋಮಹರ್ಷಣರ ಕುಮಾರನೇ, ನಿಮ್ಮ ತಂದೆಯವರು ಸಕಲ ಪುರಾಣಗಳನ್ನೂ ಅಭ್ಯಾಸ ಮಾಡಿದ್ದರು. ನೀನೂ ಅವೆಲ್ಲವನ್ನೂ ಅಧ್ಯಯನ ಮಾಡಿರುವೆಯಾ…?
ಪುರಾಣದಲ್ಲಿ ದಿವ್ಯವಾದ ಅನೇಕ ಕಥೆಗಳಿವೆ. ಬುದ್ಧಿವಂತರಾದ ರಾಜರ್ಷಿಗಳ ಮತ್ತು ಬ್ರಹ್ಮರ್ಷಿಗಳ ಆದಿವಂಶಗಳು ಕಥಿತವಾಗಿದೆ. ಈ ಎಲ್ಲಾ ಕಥೆಗಳನ್ನೂ ನಿನ್ನ ತಂದೆಯವರಿಂದ ಕೇಳಿದ್ದೆವು. ಈಗ ನಾನು ನನ್ನದೇ ಆದ ಭಾರ್ಗವ ವಂಶದ ಕಥೆಯನ್ನು ಕೇಳಲಿಚ್ಛಿಸುತ್ತೇನೆ. ಭೃಗುವಂಶದ ಕಥೆಯನ್ನು ನೀನು ಹೇಳುವಂತವನಾಗು. ನಾವೆಲ್ಲರೂ ಕೇಳಿ ಆನಂದಿಸುತ್ತೇವೆ.

ಉಗ್ರಶ್ರವಸೌತಿಗಳು : ಭೃಗುನಂದನನೇ ವೈಶಂಪಾಯನರೇ ಮೊದಲಾದ ದ್ವಿಜಶ್ರೇಷ್ಠರಿಂದಲೂ ಮತ್ತು ಮಹಾತ್ಮರಿಂದಲೂ ಪೂರ್ವಕಾಲದಲ್ಲಿ ಯಾವ ಪುರಾಣೇತಿಹಾಸ ಅಧ್ಯಯನ ಮಾಡಲ್ಪಟ್ಟವೋ ಮತ್ತು ಅವರಿಂದಲೇ ಯಾವ ಪುರಾಣೇತಿಹಾಸ ಹೇಳಲ್ಪಟ್ತವೋ ಅವುಗಳೆಲ್ಲವನ್ನೂ ನಾನು ತಿಳಿದುಕೊಂಡಿರುತ್ತೇನೆ. ನನ್ನ ತಂದೆಯವರು ಯಾವ ಪುರಾಣಗಳನ್ನು ಅಧ್ಯಯನ ಮಾಡಿದ್ದರೋ ಅವುಗಳೆಲ್ಲವನ್ನೂ ಅಧ್ಯನ ಮಾಡಿದ್ದೇನೆ. ನಿಮಗಾಗಿ ಈಗ ಭೃಗುವಂಶದ ಕಥೆಯನ್ನು ಹೇಳುತ್ತೇನೆ ಅನ್ನುತ್ತಾ ಕಥೆಯನ್ನ ಆರಂಭಿಸತೊಡಗಿದರು.

ಉಗ್ರಶ್ರವಸೌತಿಗಳು ಭೃಗುವಂಶದ ಕಥೆಯನ್ನು ಆರಂಭಿಸುತ್ತಾ ಹೇಳುತ್ತಾರೆ.

ಭೃಗು ಮಹರ್ಷಿಗಳು ಸಾಕ್ಷಾತ್ ಬ್ರಹ್ಮನು ಮಾಡಿದ ವಾರುಣ ಯಜ್ಞದ ಅಗ್ನಿಕುಂಡದಿಂದ ಉತ್ಪನ್ನರಾದರೆಂದು ನಾನು ಕೇಳಿದ್ದೇನೆ. ಅಮಿತ ತೇಜಸ್ವಿಗಳಾದ ಚ್ಯವನರು ಭೃಗು ಮಹರ್ಷಿಗಳ ಪುತ್ರರು. ಚ್ಯವನರ ಪುತ್ರನೇ ಪ್ರಮತಿಯು. ಈ ಪ್ರಮತಿಗೆ ಘೃತಾಚಿಯಲ್ಲಿ ರುರುವು ಹುಟ್ಟಿದನು. ಈ ರುರು ಮತ್ತು ಪ್ರಮದ್ವರಾ ರ ಪುತ್ರರೇ ವೇದಪಾರಂಗತರಾದ ಶುನಕರು ಅವರ ಶೌನಕರ ಪ್ರಪಿತಾಮಹರು.

ಇಷ್ಟು ಹೇಳುವಾಗ ಶೌನಕರೇ ತಡೆದು, ಮಹಾತ್ಮನಾದ ಭಾರ್ಗವನಿಗೆ ಚ್ಯವನತ್ವ ( ಜಾರುವಿಕೆ) ಹೇಗುಂಟಾಯಿತು ? ಅವನು ಚ್ಯವನನೆಂದು ಹೇಗೆ ಪ್ರಸಿದ್ಧನಾದನು ಇದನ್ನು ಮೊದಲು ಹೇಳುವಿರಾ ಎಂದರು.

ಆಗ ಉಗ್ರಶ್ರವಸೌತಿಗಳು ಚ್ಯವನನ ಕಥೆ ಹೇಳಲು ಆರಂಭಿಸಿದರು

ಭೃಗು ಮಹರ್ಷಿಗಳಿಗೆ ಪುಲೋಮೆ ಎಂದು ವಿಖ್ಯಾತಳಾದ ಪತ್ನಿಯಿದ್ದಳು. ಅವಳು ಮಹರ್ಷಿಗೆ ಪ್ರಿಯ ಪತ್ನಿಯಾಗಿದ್ದಳು. ಭೃಗುಋಷಿಯ ಸಮಾಗಮದಿಂದ ಪುಲೋಮೆಯು ಗರ್ಭವತಿಯಾದಳು. ಹೀಗಿರಲು ಒಮ್ಮೆ ಭೃಗು ಮಹರ್ಷಿಗಳು ಒಮ್ಮೆ ಸ್ನಾನಕ್ಕಾಗಿ ಪಕ್ಕದ ಸರೋವರ್ದ ಬಳಿ ಹೋಗಿರುವಾಗ “ಪುಲೋಮ” ಎನ್ನುವ ರಾಕ್ಷಸನು ಭೃಗು ಋಷಿಯ ಆಶ್ರಮವನ್ನು ಪ್ರವೇಶಿಸಿದನು. ಆತನನ್ನು ಅತಿಥಿಯಾಗಿ ಸತ್ಕರಿಸಲು ಪುಲೋಮೆಯು ಸಿದ್ಧಳಾಗುತ್ತಿರುವಾಗ ಈ ಪುಲೋಮನಿಗೆ ಪುಲೋಮೆಯ ಮೇಲೆ ಕಾಮ ಭಾವನೆಯುಂಟಾಯಿತು. ವಾಸ್ತವದಲ್ಲಿ ಈ ಪುಲೋಮೆಯನ್ನು ಈ ರಾಕ್ಷಸನೇ ಮೊದಲು ವರಿಸಿದ್ದನು ಆದರೆ ಪುಲೋಮೆಯ ತಂದೆಯು ಮಂತ್ರಪೂರ್ವಕವಾಗಿ ವಿವಾಹ ಮಾಡಿಕೊಟ್ಟಿದ್ದು ಭೃಗು ಮಹರ್ಷಿಗಳಿಗೆ. ಹಾಗಾಗಿ ಪುಲೋಮನಿಗೆ ಈಕೆ ಮೊದಲ ಪತ್ನಿಯೇ ಆಗಿದ್ದಳು. ಹೀಗಾಗಿ ಪುಲೋಮನು ಅವಳನ್ನು ಅಪಹರಿಸಿಕೊಂಡು ಹೋಗಲು ಇದೇ ಸರಿಯಾದ ಸಮಯ ಅನ್ನುವ ಲೆಕ್ಕಾಚಾರ ಹಾಕಿ ಅಲ್ಲಿಯೇ ಉರಿಯುತ್ತಿದ್ದ ಅಗ್ನಿದೇವನನ್ನು ತನ್ನ ನಡೆ ಸರಿಯಿದೆಯೇ ಎಂದು ಕೇಳಿದನು. ಈಕೆ ನಿಜವಾಗಿಯೂ ಯಾರ ಪತ್ನಿ ಹೇಳು ಎನ್ನುತ್ತಾ ಅಗ್ನಿ ದೇವನನ್ನು ಉಭಯಸಂಕಟಕ್ಕೀಡು ಮಾಡಿದನು.

ಪುಲೋಮನಿಗೆ ಉತ್ತರಿಸುತ್ತಾ ಅಗ್ನಿ ಹೇಳುತ್ತಾನೆ

“ಪುಲೋಮ ನಿಶ್ಚಯವಾಗಿಯೂ ಈಕೆ ಮೊದಲು ನಿನಗೆ ಪತ್ನಿಯಾಗಿದ್ದವಳೇ… ಆದರೂ ನೀನು ಮಂತ್ರಪೂರ್ವಕವಾಗಿ ಇವಳನ್ನು ವರಿಸಲಿಲ್ಲ. ಇವಳ ತಂದೆ ಭೃಗು ಮಹರ್ಷಿಗೆ ಮಂತ್ರಪೂರ್ವಕವಾಗಿ ಧಾರೆ ಎರೆದಿದ್ದಾನೆ. ನನ್ನ ಸಮಕ್ಷಮದಲ್ಲೇ ಇವರ ವಿವಾಹವಾಗಿದೆ”.

ಅಗ್ನಿಯ ಮುಖದಿಂದ ಇವಳು ಮೊದಲಿಗೆ ನಿನ್ನ ಪತ್ನಿಯಾಗಿದ್ದಳು ಎನ್ನುವ ಮಾತನ್ನು ಕೇಳಿದೊಡನೆಯೇ ಪುಲೋಮನು ದೊಡ್ದ ಹಂದಿಯ ರೂಪವನ್ನು ಧರಿಸಿ ತುಂಬು ಗರ್ಭಿಣಿಯಾದ ಪುಲೋಮೆಯನ್ನು ಎತ್ತಿಕೊಂಡು ವೇಗವಾಗಿ ಓಡತೊಡಗುತ್ತಾನೆ. ತಾಯಿಯ ಗರ್ಭದಲ್ಲಿದ್ದ ಮಗುವಿಗೆ ರಾಕ್ಷಸನ ಈ ಅಕಾರ್ಯದಿಂದ ಬಹಳ ಸಿಟ್ಟು ಬರುತ್ತದೆ. ಅದು ತನ್ನ ಯೋಗಬಲದಿಂದ ಗರ್ಭವನ್ನು ಬಿಟ್ಟು ಹೊರಬರುತ್ತದೆ. ಆದುದರಿಂದಲೇ ಆತನಿಗೆ ಚ್ಯವನ = ಗರ್ಭದಿಂದ ಜಾರಿದವನು ಅನ್ನುವ ಹೆಸರಾಯಿತು.
ಈ ರೀತಿ ಹುಟ್ಟಿದ ಮಗುವು ಸೂರ್ಯನಂತೆ ಹೊಳೆಯುತ್ತಿತ್ತು. ಇದನ್ನು ಕಂಡ ರಾಕ್ಷಸ ಹೆದರಿ ಪುಲೋಮೆಯನ್ನು ಬಿಟ್ಟು ಬಿಡುತ್ತಾನೆ ಕೂಡಲೇ ಮಗುವಿನ ದಿವ್ಯ ತೇಜಸ್ಸಿಗೆ ಬಲಿಯಾಗಿ ರಾಕ್ಷಸ ಪುಲೋಮ ಸುಟ್ಟು ಹೋಗುತ್ತಾನೆ.

ಪುಲೋಮೆಯು ಕಷ್ಟಪಟ್ಟು ಮಗುವನ್ನು ಎತ್ತಿಕೊಂಡು ಆಶ್ರಮದ ಕಡೆ ಹೆಜ್ಜೆಹಾಕುತ್ತಾಳೆ. ಆಕೆ ಬರುವುದನ್ನು ನೋಡಿದ ಬ್ರಹ್ಮದೇವನು ಕಾರುಣ್ಯಭರಿತನಾಗಿ ಆಕೆಯ ಬಳಿ ಹೋಗಿ ಆಕೆಯನ್ನ ಸಂತೈಸತೊಡಗುತ್ತಾನೆ. ಆಗ ಅಕೆಯ ಕಣ್ಣಿನಿಂದ ಅಶ್ರುಧಾರೆ ಹರಿದು ನದಿಯಾಗುತ್ತದೆ. ಆ ಕಣ್ಣೀರ ನದಿಯು ಅವಳನ್ನೇ ಅನುಸರಿಸುತ್ತದೆ. ಇದನ್ನು ಕಂಡ ಬ್ರಹ್ಮ ದೇವ ಆ ನದಿಗೆ ವಧೂಸರ ಎನ್ನುವ ಹೆಸರಿಡುತ್ತಾನೆ. ಆ ನದಿಯು ಭೃಗು ಮಹರ್ಷಿಗಳ ಆಶ್ರಮದ ಸುತ್ತಲೂ ಹರಿಯತೊಡಗುತ್ತದೆ.

ಮುಂದುವರಿಯುತ್ತದೆ…..

-ಗುರುಪ್ರಸಾದ್ ಆಚಾರ್ಯ