ವ್ಯಾಸ ಮಹಾಭಾರತ – ಭಾಗ 11 – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 11

ಪುಲೋಮೆಯು ಆಶ್ರಮಕ್ಕೆ ಬಂದೊಡನೆ ನಡೆದ ಘಟನೆ ತಿಳಿದ ಭೃಗು ಮಹರ್ಷಿಗಳು ಕೋಪಗೊಂಡು “ನೀನು ನನ್ನ ಪತ್ನಿ ಎಂದು ಆ ರಾಕ್ಷಸನಿಗೆ ಹೇಳಿದವರಾರು… ಸತ್ಯವನ್ನು ಹೇಳು ಇಲ್ಲದಿದ್ದರೆ ಈಗಲೇ ನಿನ್ನನ್ನು ಶಪಿಸಿಬಿಡುತ್ತೇನೆ ” ಎನ್ನಲು ಆಕೆ “ಅಗ್ನಿ ದೇವ” ಎನ್ನುವ ಉತ್ತರ ಕೊಟ್ಟಳು. ಇದನ್ನು ಕೇಳಿದ ಭೃಗು ಮಹರ್ಷಿಯು ಅಗ್ನಿದೇವನಿಗೆ” ಸರ್ವಭಕ್ಷಕನಾಗು ” ಅನ್ನುವ ಶಾಪ ಕೊಟ್ಟು ಬಿಟ್ಟನು.

ಇದನ್ನು ತಿಳಿದ ಅಗ್ನಿದೇವನು… ಕೋಪಗೊಂಡರೂ ಶಾಂತ ಚಿತ್ತನಾಗಿ…
“ಮುನಿವಾರ್ಯ ಇದೆಂಥಾ ಕಾರ್ಯ ಮಾಡಿದೆ…? ಅಷ್ಟಕ್ಕೂ ನನ್ನ ತಪಾದರೂ ಏನು…? ಸತ್ಯವನ್ನು ಆಡಿದುದು ತಪ್ಪೇ…? ನಾನು ನಿಮ್ಮನ್ನು ಶಪಿಸಬಲ್ಲೆ ಆದರೆ ಬ್ರಾಹ್ಮಣರು ನನಗೆ ಮಾನ್ಯರು. ಮೇಲಾಗಿ ತಾವು ನನ್ನನ್ನು ಇಲ್ಲಿಯವರೆಗೆ ಯಜ್ಞಯಾಗಾದಿಗಳಿಂದ ಪುರಸ್ಕರಿಸುತ್ತೀರಿ. ಆದುದರಿಂದ ನಾನು ನಿಮ್ಮನ್ನು ಶಪಿಸಲಾರೆ. ಯೋಗಬಲದಿಂದ ನನ್ನ ಶರೀರವನ್ನು ಅನೇಕ ಪ್ರಕಾರವಾಗಿ ವಿಂಗಡಿಸಿಕೊಂಡು ನಾನು ನನ್ನ ಸಕಲ ಯಜ್ಞಯಾಗಾದಿಗಳಲ್ಲಿಯೂ, ಅಗ್ನಿಹೋತ್ರಗಳಲ್ಲಿಯೂ ಸತ್ರಗಳಲ್ಲಿಯೂ; ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯಗಳೆಂಬ ಅಭಿಧಾನಗಳಿಂದ ಅವಿರ್ಭೂತನಾಗಿರುವೆನು. ವಿವಾಹವೇ ಮುಂತಾದ ವೇದೋಕ್ತ ಕ್ರಮಗಳಲ್ಲಿ ಪ್ರತಿಷ್ಟಿತನಾಗುವ ಅಗ್ನಿಯೂ ನಾನೇ ಆಗಿರುತ್ತೇನೆ. ನನ್ನಲ್ಲಿ ತುಪ್ಪವನ್ನು ಹೋಮ ಮಾಡುವಾಗ ಹೇಳುವ ಮಂತ್ರಗಳನ್ನು ಅನುಸರಿಸಿ ದೇವತೆಗಳೂ ಮತ್ತು ಪಿತೃಗಳೂ ತಮ್ಮ ಹವಿರ್ಭಾಗಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಅದರಿಂದ ಅವರು ತೃಪ್ತರಾಗುತ್ತಾರೆ.

ಅಗ್ನಿ ಮುಂದುವರೆಸುತ್ತಾ…

ದೇವತೆಗಳೂ ಪಿತೃಗಳೂ ಜಲಸ್ವರೂಪರು ಆದುದರಿಂದ ದೇವತೆಗಳೂ ಪಿತೃಗಳೂ ಒಂದೇ. ದರ್ಶ ಮತ್ತು ಪೌರ್ಣಮಾಸ ಯಾಗಗಳು ದೇವತೆಗಳ ಮತ್ತು ಪಿತೃಗಳ ತೃಪ್ತಿಗಾಗಿಯೇ ಮಾಡಲ್ಪಡುತ್ತದೆ. ಹುಣ್ಣಿಮೆಗಳಲ್ಲಿ ದೇವಸ್ವರೂಪರಾಗಿಯೂ, ಅಮವಾಸ್ಯೆಯಂದು ಪಿತೃಸ್ವರೂಪರಾಗಿಯೂ ಕೆಲವೊಮ್ಮೆ ಏಕೀಭೂತರಾಗಿಯೂ ಇವರು ಅರ್ಚಿಸಲ್ಪಡುತ್ತಾರೆ. ಇವರಿಬ್ಬರೂ ನನ್ನಲ್ಲಿ ಅರ್ಪಿಸಿದ ಹವಿಸನ್ನು ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಲೇ ನಾನು ದೇವಮುಖನೆಂದೂ ಪಿತೃಮುಖನೆಂದೂ ಕರೆಯಲ್ಪಡುತ್ತೇನೆ. ಅಮವಾಸ್ಯೆಗಳಲ್ಲಿ ಪಿತೃಗಳೂ, ಪೌರ್ಣಮಾಸ್ಯೆಗಳಲ್ಲಿ ದೇವತೆಗಳೂ ನನ್ನ ಮುಖದಿಂದಲೇ ಆಹುತಿಗಳನ್ನು ಪಡೆಯುತ್ತಾರೆ ಮತ್ತು ನನ್ನ ಮೂಲಕವಾಗಿ ಪಡೆದ ಹವಿಸ್ಸನ್ನು ಉಪಭುಂಜಿಸುತ್ತಾರೆ. ನಾನು ಸರ್ವಭಕ್ಷಕನಾದನಂತರ ದೇವ-ಪಿತೃಗಳ ಮುಖಸ್ವರೂಪನು ಹೇಗೆ ತಾನೇ ಆದೇನು..?

ಅಗ್ನಿಯ ಪ್ರಶ್ನೆಗೆ ಮಹರ್ಷಿಯಿಂದ ಯಾವ ಉತ್ತರವೂ ಬರಲಿಲ್ಲ. ಯಾವುದೇ ಉತ್ತರ ಬಾರದ್ದನ್ನು ಕಂಡು ಅಗ್ನಿಯು ಅದೃಶ್ಯನಾದನು. ಇದರಿಂದಾಗಿ ಯಜ್ಞಯಾಗಾದಿಗಳೆಲ್ಲಾ ನಿಂತು ಹೋಯಿತು. ಪ್ರಪಂಚವೇ ತಲ್ಲಣಿಸಿ ಹೋಯಿತು. ಋಷಿ ಮುನಿಗಳು ಭಯಭೀತರಾಗಿ ದೇವತೆಗಳನ್ನು ಪ್ರಾರ್ಥಿಸಿ ತಮ್ಮ ಅಳಲನ್ನು ತೋಡಿಕೊಂಡರು… ದೇವತೆಗಳೆಲ್ಲಾ ಒಟ್ಟಾಗಿ ಬ್ರಹ್ಮದೇವನಲ್ಲಿ ಅಗ್ನಿದೇವನ ಮುನಿಸನ್ನು ಅದರಿಂದಾಗಿ ಭೂಮಿಯಲ್ಲುಂಟಾದ ವಿಪತ್ತನ್ನು ಹೇಳಿದರು… ಆಗ ಬ್ರಹ್ಮನು ಅಗ್ನಿದೇವನನ್ನು ಕರೆಯಿಸಿದನು…

ಬ್ರಹ್ಮನು ಅಗ್ನಿಯನ್ನು ಸಂತೈಸುತ್ತಾ ಹೇಳಿದನು…

“ಯಜ್ಞೇಶ್ವರ ನೀನು ಎಲ್ಲ ಲೋಕಗಳ ಯಜ್ಞ ಯಾಗಾದಿ ಕ್ರಿಯೆಗಳಿಗೂ ಕಾರಣಭೂತನು. ಪ್ರಪಂಚದಲ್ಲಿರುವ ಪವಿತ್ರಮನೆಂದರೆ ಅದು ನೀನೇ. ನಿನ್ನ ಜ್ವಾಲೆಗಳಿಗೆ ಸಿಕ್ಕ ನಂತರ ಪ್ರತಿಯೊಂದು ಪದಾರ್ಥ ಪರಿಶುದ್ಧವಾಗುವುದು. ನಿನ್ನ ಸಪ್ತಜ್ವಾಲೆಗಳಲ್ಲಿ ಎಲ್ಲವೂ ವಿವೇಚನೆಯಿಲ್ಲದೆ ಆಹಾರವನ್ನು ತಿನ್ನುವುದಿಲ್ಲ ಅಧೋಮುಖವಾದ ಜ್ವಾಲೆಗಳು ಮಾತ್ರ ಸರ್ವವನ್ನೂ ಭಕ್ಷಣೆ ಮಾಡುವವು. ಸಕಲ ಜೀವಜಂತುಗಳಲ್ಲಿ ನಿನ್ನ ಒಂದು ಸ್ವರೂಪವಾದ ಕ್ರವ್ಯಾತ್ ಎಂಬ ಹೆಸರಿನ ಅಗ್ನಿಯೂ ( ಚಿತಾಗ್ನಿ ) ಕೂಡಾ ವಿವೇಚನೆ ಇಲ್ಲದೇ ಭಕ್ಷಣೆ ಮಾಡುತ್ತದೆ ಅಷ್ಟೇ. ನಿನ್ನ ಮಹಾತೇಜಸ್ಸಿನಿಂದಲೇ ಋಷಿಯು ನಿನಗಿತ್ತಿರುವ ಶಾಪವನ್ನು ಸತ್ಯವನ್ನಾಗಿ ಮಾಡು. ನಿನಗೆ ಅಪವಿತ್ರತೆ ಎಂಬುದೇ ಇಲ್ಲ ಹಾಗಾಗಿ ಮತ್ತೆ ನೀನು ಸಕಲ ಹೋಮಕುಂಡಗಳಲ್ಲಿ ಕಾಣಿಸಿಕೊಂಡು ಜಗದ ಕಲ್ಯಾಣಕ್ಕಾಗಿ ಕಾರ್ಯಪ್ರವೃತ್ತನಾಗು.” ಅನ್ನುತ್ತಾರೆ

ಇದರಿಂದ ಸಂತುಷ್ಟನಾದ ಅಗ್ನಿಯು ಹಾಗೇಯೇ ಆಗಲಿ ಎಂದು ಎಂದಿನಂತೆ ಹೋಮಕುಂಡಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

ಮುಂದುವರೆಯುತ್ತದೆ..

-ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!