ವ್ಯಾಸ ಮಹಾಭಾರತ – ಭಾಗ 12 – News Mirchi

ವ್ಯಾಸ ಮಹಾಭಾರತ – ಭಾಗ 12

ಚ್ಯವನನ ಹುಟ್ಟು, ಅಗ್ನಿಯ ಶಾಪದ ಕುರಿತಾದ ಕಥೆಯನ್ನ ಹೇಳಿ ಸೌತಿಗಳು ಮುಂದುವರೆಯುತ್ತಾ ಹೇಳುತ್ತಾರೆ…

“ಭೃಗುಪುತ್ರನಾದ ಚ್ಯವನನಿಗೆ ಸುಕನ್ಯೆಯಲ್ಲಿ ಮಹಾತ್ಮನಾದ ಮಹಾ ತೇಜಸ್ವಿಯಾದ ‘ಪ್ರಮತಿ’ ಎಂಬ ಮಗನು ಹುಟ್ಟಿದನು, ಪ್ರಮತಿಯು ಅಪ್ಸರೆಯಾದ ಘೃತಾಚಿಯಲ್ಲಿ ‘ರುರು’ ಎಂಬ ಪುತ್ರನನ್ನು ಪಡೆದನು. ಈ ರುರುವಿನ ಕಥೆಯನ್ನ ಈಗ ಹೇಳುತ್ತೇನೆ ”

“ಹಿಂದಿನಕಾಲದಲ್ಲಿ ತಪೋವಿದ್ಯಾಸಮನ್ವಿತರಾದ ಸ್ಥೂಲಕೇಶರೆಂಬ ಹೆಸರಿನಿಂದ ವಿಖ್ಯಾತರಾದ ಋಷಿಗಳೊಬ್ಬರಿದ್ದರು. ಅವರು ಎಲ್ಲ ಪ್ರಾಣಿಗಳ ಹಿತದಲ್ಲಿಯೇ ಸರ್ವದಾ ನಿರತರಾಗಿದ್ದರು. ಅದೇ ಕಾಲದಲ್ಲಿ ಮೇನಕಾ ಎಂಬ ಅಪ್ಸರೆಯು ವಿಶ್ವಾವಸುವೆಂಬ ಗಂಧರ್ವರಾಜನಿಂದಾಗಿ ಗರ್ಭವತಿಯಾದಳು. ಮೇನಕೆಯು ಸ್ಥೂಲ ಕೇಶರ ಆಶ್ರಮದ ಹತ್ತಿರದಲ್ಲಿ ಹರಿಯುತ್ತಿದ್ದ ನದಿಯ ಪಕ್ಕದಲ್ಲೇ ಪ್ರಸವಿಸಿ ಆ ಹೆಣ್ಣು ಮಗುವನ್ನ ಅಲ್ಲಿಯೇ ಬಿಟ್ಟು ಹೋಗುತ್ತಾಳೆ. ಆ ಹೆಣ್ಣು ಮಗುವನ್ನ ಸ್ಥೂಲಕೇಶರು ತಂದು ಅದನ್ನ ಸಾಕಿ ಸಲಹತೊಡಗುತ್ತಾರೆ. ಅತೀ ಸುಂದರವಾಗಿದ್ದ ಆ ಹೆಣ್ಣು ಮಗುವಿಗೆ ಅವರು “ಪ್ರಮಧ್ವರಾ”( ಹೆಂಗಸರಲ್ಲಿ ಶ್ರೇಷ್ಠಳು ) ಅನ್ನುವ ಹೆಸರಿಡುತ್ತಾರೆ. ಹೀಗೆ ಪ್ರಮಧ್ವರ ಬೆಳೆದು ದೊಡ್ಡವಳಾದಾಗ ಒಮ್ಮೆ ರುರು ಮಹರ್ಷಿಯು ಅವಳನ್ನ ಕಂಡು ಅವಳಲ್ಲಿ ಮೋಹಿತರಾಗುತ್ತಾರೆ. ಅವಳನ್ನ ಮದುವೆಯಾಗುವ ಇಚ್ಛೆಯನ್ನ ತನ್ನ ತಂದೆಯಾದ ಪ್ರಮತಿಯಲ್ಲಿ ಹೇಳಿದಾಗ ಅವರು ಸ್ಥೂಲ ಕೇಶರೊಡನೆ ಹೇಳಿ ತಮ್ಮ ಮಕ್ಕಳ ಮದುವೆಯನ್ನ ನಿಶ್ಚಯಿಸುತ್ತಾರೆ. ನಿಶ್ಚಯವಾದ ಮೇಲೆ ಒಂದು ದಿನ ಪ್ರಮಧ್ವರೆಯು ತನ್ನ ಸಖಿಯರೊಡನೆ ಆಟವಾಡುತ್ತಿರಲು ಗೊತ್ತಿಲ್ಲದೇ ವಿಷಸರ್ಪವೊಂದನ್ನ ತುಳಿದುಬಿಡುತ್ತಾಳೆ. ಆ ವಿಷಸರ್ಪ ಕೋಪದಿಂದ ಅವಳನ್ನ ಕಚ್ಚಿ ಸಾಯಿಸಿಬಿಡುತ್ತದೆ. ಅವಳ ಸಾವನ್ನು ಕಂಡು ತಂದೆಯಾದ ಸ್ಥೂಲಕೇಶನೂ ಅವರ ಆಶ್ರಮವಾಸಿಗಳೂ ಅತೀವವಾಗಿ ದುಃಖಿಸುತ್ತಾರೆ. ಅವಳನ್ನು ಅತಿಹೆಚ್ಚು ಪ್ರೀತಿಸುತಿದ್ದ ರುರುವಿಗೆ ಈ ದುಃಖವನ್ನ ತಡೆಯಲಸಾಧ್ಯವಾಗುತ್ತದೆ…

ಪ್ರಮಧ್ವರೆಯ ಶವದ ಮುಂದೆ ರೋಧಿಸಲಾಗದೆ ರುರುವು ಸಮೀಪದ ಅರಣ್ಯದತ್ತ ತೆರಳಿ ನಾನಾವಿಧವಾಗಿ ರೋಧಿಸತೊಡಗಿದನು. ಪ್ರಮಧ್ವರೆಯ ವಿರಹವನ್ನು ತಾಳಲಾರದೆ ಆಕಾಶದತ್ತ ಮುಖಮಾಡಿ ” ಹೇ ದೇವಗಣಗಳೇ ಒಂದು ವೇಳೆ ನಾನು ನನ್ನ ಜೀವನದಲ್ಲಿ ನ್ಯಾಯಧರ್ಮ ನಿಷ್ಠೆಯಿಂದ ಬಾಳಿದ್ದರೆ ನನ್ನ ಪ್ರಮಧ್ವರೆಯು ಬದುಕಲಿ, ನಾನು ನನ್ನ ಹಿರಿಯರ ಸೇವೆಯನ್ನ ಚಾಚೂ ತಪ್ಪದೆ ಮಾಡಿದ್ದರೆ ನನ್ನ ಪ್ರಿಯತಮೆಯು ಮತ್ತೆ ಬದುಕಲಿ ” ಎಂದು ಪ್ರಲಾಪಿಸತೊಡಗಿದನು. ಆಗ ಅಲ್ಲಿಗೆ ದೇವದೂತನೊಬ್ಬ ಬಂದು ಹೇಳುತ್ತಾನೆ…

“ಹೇ ರುರು ಮಹರ್ಷಿ ಭೂಮಿಯ ಮೇಲೆ ಹುಟ್ಟಿದವರಿಗೆ ಮರಣ ತಪ್ಪಿದ್ದಲ್ಲ…. ನಿನ್ನ ಪ್ರಿಯತಮೆಯ ಆಯಸ್ಸು ಇಷ್ಟೇ ಆಗಿತ್ತು…. ನಿನ್ನ ಈ ಪ್ರಲಾಪದಿಂದ ಏನೂ ಪ್ರಯೋಜನವಿಲ್ಲ ಆದರೆ ಆಕೆ ಗಂಧರ್ವನ ಮಗಳಾದ್ದರಿಂದ, ಒಂದು ವೇಳೆ ನೀನು ನಿನ್ನ ಆಯಸ್ಸಿನಲ್ಲಿ ಅರ್ಧಭಾಗವನ್ನು ಆಕೆ ಧಾರೆಯೆರೆದು ಕೊಟ್ಟರೆ ಆಕೆ ಮರಳಿ ಬದುಕಿಯಾಳು ” ಎಂದನು

ಇದನ್ನು ಕೇಳಿದೊಡನೆ ರುರುವು ಕ್ಷಣಮಾತ್ರವೂ ಯೋಚಿಸದೆ ” ತೆಗೆದುಕೊಳ್ಳಿ ನನ್ನ ಜೀವನದ ಅರ್ಧ ಆಯಸ್ಸನ್ನು ನನ್ನ ಪ್ರಿಯತಮೆಯನ್ನ ಬದುಕಿಸಿ ಕೊಡಿ”ಎಂದು ಕೇಳಿಕೊಂಡನು. ಆಗ ದೇವಗಣಗಳು ಯಮನಲ್ಲಿ ಈ ವಿಚಾರ ಪ್ರಸ್ತಾಪಿಸಿ ರುರುವಿನ ಅರ್ಧ ಆಯಸ್ಸನ್ನು ಪ್ರಮದ್ವರೆಗೆ ಕೊಡುವಂತೆ ಕೇಳಿದರು. ಯಮನು ಒಪ್ಪಿಗೆ ಸೂಚಿಸುತ್ತಾ ಹಾಗೆಯೇ ಮಾಡಲು ಪ್ರಮಧ್ವರೆಯು ನಿದಿರೆಯಿಂದ ಎಚ್ಚೆತ್ತವಳಂತೆ ಎದ್ದಳು. ತದನಂತರ ಅಲ್ಲಿನ ಮಹರ್ಷಿಗಳೆಲ್ಲಾ ಒಂದಾಗಿ ರುರು ಮತ್ತು ಪ್ರಮಧ್ವರೆಯ ವಿವಾಹವನ್ನ ಪ್ರಶಸ್ತ ಕಾಲದಲ್ಲಿ ನೆರವೇರಿಸಿದರು… ರುರುವೂ ಆಕೆಯ ಪ್ರಿಯ ಸತಿಯೊಂದಿಗೆ ಸಂತೋಷದಿಂದ ಬಾಳತೊಡಗಿದನು…. ಆದರೆ ಹಾವಿನಿಂದಾಗಿ ನನ್ನ ಪ್ರಿಯತಮೆಯಿಂದ ತನಗೆ ಅಲ್ಪ ಕಾಲದ ವಿರಹವುಂಟಾಯಿತು ಅನ್ನುವುದು ಅವನ ಮನದಲ್ಲಿ ಉಳಿದುಬಿಟ್ಟಿತ್ತು. ಹಾಗಾಗಿ ಆತನಿಗೆ ಯಾವಗಾಲಾದರೂ ಯಾವುದಾದರೂ ಹಾವು ಕಾಣಸಿಕ್ಕಿದರೆ ಸಾಕು ಅದನ್ನು ಆತ ಕೊಂದೇ ಬಿಡುತ್ತಿದ್ದನು….

ಮುಂದುವರೆಯುತ್ತದೆ…

-ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.