ವ್ಯಾಸ ಮಹಾಭಾರತ – ಭಾಗ 13 – News Mirchi

ವ್ಯಾಸ ಮಹಾಭಾರತ – ಭಾಗ 13

ಹೀಗಿರಲಾಗಿ ಒಮ್ಮೆ ರುರುವಿಗೆ ಪಯಣಿಸುತ್ತಿರುವಾಗ ಸರ್ಪವೊಂದು ಸಿಗುತ್ತದೆ. ಅದನ್ನು ಕಂಡೊಡನೆ ಎಂದಿನಂತೆ ಕೊಲ್ಲಲು ಹೊರಟಾಗ ಅದು… “ಎಲಾ ಬ್ರಾಹ್ಮಣೋತ್ತಮಾ… ಏಕೆ ನನ್ನನ್ನು ಕೊಲ್ಲಹೊರಟಿರುವೆ… ನಾನು ನಿನಗೆ ಮಾಡಿದ ಅನ್ಯಾಯವಾದರೂ ಏನು… ವಿಷರಹಿತ ಸರ್ಪವಾದ ನನ್ನನ್ನೇಕೆ ಕೊಲ್ಲುವುದು?” ಎಂದಿತು. ಸರ್ಪವೊಂದು ಈ ರೀತಿ ಮಾತಾಡಿದಾಗ ರುರುವಿಗೆ ಇದ್ಯಾರೋ ಋಷಿಯೇ ಇರಬೇಕೆಂದು ಅನುಮಾನ ಬಂದು ಅದನ್ನು ಕೊಲ್ಲದೇ .. ಡುಂಡುಭ ನಾಮ ಸರ್ಪದೊಂದಿಗೆ ಕೇಳಿದ..
“ತಾವ್ಯಾರೋ ಋಷಿಯೇ ಇರಬೇಕು … ನಿಮ್ಮ ನಿಜ ಹಿನ್ನೆಲೆ ತಿಳಿಸುವಿರಾ….??”

ಅದಕ್ಕೆ ಡುಂಡುಭ ಈ ರೀತಿ ಉತ್ತರಿಸಿದ :
“ನಿಜ ನಾನು ಹಿಂದೆ ಸಹಸ್ರ ಪಾದ ಎನ್ನುವ ಮುನಿಯಾಗಿದ್ದೆ. ನನಗೊಬ್ಬ ಬ್ರಾಹ್ಮಣ ಮಿತ್ರನಿದ್ದ. ಖಗಮ ಎಂದು ಅವನ ಹೆಸರು ಸ್ವಲ್ಪ ಒರಟು ಮಾತಿನವ. ಒಮ್ಮೆ ಯಜ್ಞವೊಂದರಲ್ಲಿ ಭಾಗವಹಿಸಲೋಸುಗ ಮಿತ್ರನನ್ನು ಕರೆದೊಯ್ಯಲು ಅವನ ಮನೆಗೆ ಹೋಗಿದ್ದಾಗ… ಆತ ತನ್ನ ನಿತ್ಯದ ಅಗ್ನಿಹೋತ್ರದ ಕಾರ್ಯದಲ್ಲಿ ಮಗ್ನನಾಗಿದ್ದ. ಆಗ ನಾನು ಹಾಸ್ಯಕ್ಕೆಂದು ದರ್ಭೆಯನ್ನ ಹಾವಿನಂತೆ ಹೆಣೆದು ಆತನ ಮೇಲೆ ಹಾಕಿಬಿಟ್ಟೆ. ಸರ್ಪವೆಂದು ನಂಬಿ ಭಯಭೀತನಾದ ಆತ ಕ್ಷಣ ಕಾಲ ಮೂರ್ಛಿತನಾದ ಮತ್ತೆ ಪ್ರಜ್ಞಾವಸ್ಥೆಗೆ ಬರುತ್ತಿದ್ದಂತೆ ಈ ಕೃತ್ಯವನ್ನು ಮಾಡಿದಾತ ವಿಷರಹಿತ ಸರ್ಪವಾಗಲಿ ಎಂದು ನನ್ನನ್ನು ಶಪಿಸಿದ. ಇದನ್ನು ಕೇಳಿ ಭಯಭೀತನಾದ ನಾನು ಮಿತ್ರನ ಜೊತೆ ನಕ್ಕು ನಲಿಯುವುದಕ್ಕಾಗಿ ಈ ರೀತಿ ಮಾಡಿದೆ. ನಿನ್ನ ಶಾಪವನ್ನ ಹಿಂದೆಗೆದುಕೋ ಎಂದು ಕೇಳಿಕೊಂಡೆ. ಅದಕ್ಕಾತ ನಾನು ಇದುವರೆಗೂ ಸುಳ್ಳನ್ನು ಹೇಳಿದವನಲ್ಲ ಹಾಗಾಗಿ ನನ್ನ ಶಾಪ ತಟ್ಟದೇ ಬಿಡದು ಆದರೆ ಮುಂದೊಂದು ದಿನ ಎಂಬ ಮಹಾತಪಸ್ವಿಯ ಜೊತೆ ನಿನ್ನ ಮುಖಾಮುಖಿಯಾದಾಗ ನಿನಗೆ ನಿನ್ನ ನಿಜ ರೂಪ ದೊರಕುತ್ತದೆ. ಎಂದು ಹೇಳಿದ.”

ಹೀಗೆ ಹೇಳುತ್ತಿದ್ದಂತೆ ಆತನಿಗೆ ಸರ್ಪದ ರೂಪದಿಂದ ಮುಕ್ತಿ ಸಿಗುತ್ತದೆ.
ಇದಾದ ಮೇಲೆ ಸಹಸ್ರ ಪಾದನೆಂಬ ಮುನಿ ರುರುವನ್ನ ಉದ್ದೇಶಿಸಿ…
“ಅಯ್ಯಾ …. ಹಿಂಸೆಯೆಂಬುದು ಬ್ರಾಹ್ಮಣನಿಗೆ ಹೇಳಿದ ಧರ್ಮವಲ್ಲ . ವೇದಾಧ್ಯಯನವೇ ಆತನ ಜೀವನ ಧ್ಯೇಯ. ಹಾಗಿರುವಾಗ ಇಂಥಾ ಹಿಂಸಾ ಪ್ರವೃತ್ತಿಯನ್ನ ಬಿಟ್ಟು ಬಿಡು ” ಎಂದು ಬ್ರಾಹ್ಮಣನು ಪಾಲಿಸಬೇಕಾದ ರೀತಿ ನೀತಿಗಳನ್ನು ತಿಳಿಸಿ ಅಲ್ಲಿಂದ ತೆರಳುತ್ತಾನೆ …

ಹೀಗೆ ಸಹಸ್ರಪಾದ ರುರುವಿಗೆ ಬ್ರಾಹ್ಮಣನಿಗಿರಬೇಕಾದ ಗುಣಧರ್ಮ ಹೇಳುತ್ತಾ ” ಜನಮೇಜಯನ ಸರ್ಪಯಾಗವನ್ನ ನಿಲ್ಲಿಸಿದ್ದು ಒಬ್ಬ ಬ್ರಾಹ್ಮಣನೇ ತಾನೇ ” ಎಂದಿದ್ದು ರುರುವಿನ ಕುತೂಹಲವನ್ನ ಕೆರಳಿಸುತ್ತದೆ. ಆಗ ರುರು ಸಹಸ್ರಪಾದನನ್ನ ” ಯಾಕೆ ಇಂತಹ ಒಂದು ಯಾಗ ಕೈಗೊಂಡ …? ಅದೂ ಕೇವಲ ಸರ್ಪಗಳನ್ನಷ್ಟೇ ಬಲಿ ತೆಗೆದು ಕೊಳ್ಳುವ ಯಾಗ ಮಾಡಿದ್ದು ಯಾಕೆ ..? ಅದನ್ನು ಬ್ರಾಹ್ಮಣನೊಬ್ಬ ಯಾಕೆ ತಡೆದ ? ” ಎನ್ನುವ ಪ್ರಶ್ನೆಗಳನ್ನು ಕೇಳುತ್ತಾನೆ. ಇದಕ್ಕೆ ಸಹಸ್ರ ಪಾದನು ಇದನ್ನೆಲ್ಲ ನೀನು ನನಗಿಂತಲೂ ಪ್ರಾಜ್ಞರಿಂದ ತಿಳಿದುಕೋ ಎಂದು ಹೇಳಿ ಅಂತರ್ಧಾನನಾಗುತ್ತಾನೆ. ರುರುವು ಈ ಪ್ರಶ್ನೆಗೆ ಉತ್ತರ ತಿಳಿಯಲು ಒದ್ದಾಡಿ ಸಹಸ್ರ ಪಾದನನ್ನ ಗೋಗರೆದು ಕೇಳಿಕೊಂಡರೂ ಬಾರಲೇ ಇಲ್ಲ. ಕೊನೆಗೆ ರುರು ತನ್ನ ತಂದೆಯನ್ನೇ ಪ್ರಾರ್ಥಿಸಿ ಅವರಿಂದಲೇ ಕೇಳಿ ತಿಳಿದುಕೊಳ್ಳುತ್ತಾನೆ.

ಮುಂದುವರೆಯುತ್ತದೆ

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache