ವ್ಯಾಸ ಮಹಾಭಾರತ – ಭಾಗ 14

​ಈ ಹಿಂದಿನ ಸಂಚಿಕೆಯಲ್ಲಿ ರುರು ಮಹರ್ಷಿ, ಆಸ್ತೀಕನೆಂಬ ಬ್ರಾಹ್ಮಣ ಶ್ರೇಷ್ಠನ ಕಥೆಯನ್ನ ತನ್ನ ತಂದೆಯಿಂದ ಕೇಳಿ ತಿಳಿದುಕೊಂಡ ಅನ್ನುವುದನ್ನ ಓದಿದ್ದೀರಿ…. ಆ ಆಸ್ತೀಕನ ಕಥೆಯನ್ನ ಶೌನಕರು ಸೌತಿಗಳಲ್ಲಿ…. ಹೇಳಿ ಎನ್ನಲು ಸೌತಿಗಳು ಆಸ್ತೀಕನ ಕಥೆಯನ್ನ  ಹೇಳಲು ಮುಂದಾಗುತ್ತಾರೆ.

ಈ ಆಸ್ತೀಕನ ತಂದೆಯ ಹೆಸರು “ಜರತ್ಕಾರು” ಎಂಬುದಾಗಿತ್ತು. ಆತ ಪ್ರಜಾಪತಿಗೆ ಸಮವಾದ ಪ್ರಭಾವವುಳ್ಳವನಾಗಿದ್ದ. ಬ್ರಹ್ಮಾಚಾರಿ, ಯಾವಾಗಲೂ ಉಗ್ರವಾದ ತಪಸ್ಸಿನಲ್ಲಿಯೇ ಕಾಲ ಕಳೆಯುತ್ತಿದ್ದ. “ಯಾಯಾವರ” ವಂಶೀಯರಲ್ಲಿ ಶ್ರೇಷ್ಠನಾದವನು (ಯಾಯಾವರ ಅಂದರೆ ಒಂದೊಂದು ಹಳ್ಳಿಯಲ್ಲಿ  ಒಂದೊಂದು ರಾತ್ರಿ ಕಳೆಯುತ್ತಾ…. ಪ್ರತೀ ಪಕ್ಷದಲ್ಲಿ ಅಗ್ನಿಹೋತ್ರ ಮಾಡಿಕೊಂಡು ಸಂಚರಿಸುವ ಬ್ರಾಹ್ಮಣ) ಇಂಥಾ ಮಹಾತಪಸ್ವಿಯು ಒಮ್ಮೆ ವಿಶ್ವ ಪರ್ಯಟನೆ ಮಾಡುತ್ತಿರುವಾಗ ಒಂದು ಹಳ್ಳದಲ್ಲಿ ಒಂದಷ್ಟು ಪಿತೃಗಳು ತಲೆಕೆಳಗಾಗಿ ತೂಗಾಡುತ್ತಿದ್ದರು. ಇದನ್ನ ಕಂಡ ಆತ

“ನೀವ್ಯಾಕೆ ಈ ರೀತಿಯಲ್ಲಿ ಹಿಂಸೆ ಪಡುತ್ತಿದ್ದೀರಿ … ನೀವು ನೇತಾಡಲು ಅವಲಂಬಿಸಿರುವ ಸ್ತಂಬವೂ ಕೂಡ ಇಲ್ಲಿರುವ ಇಲಿಗಳು ಕಚ್ಚಿರುವಂತೆ ಕಾಣುತ್ತಿದೆ… ಇನ್ನೇನು ಅದೂ ಮುರಿದು ಬೀಳಲಿದೆ… ಆ ತರುವಾಯ ತಮ್ಮ ಪಾಡೇನು…?” ಎನ್ನುತ್ತಾನೆ.
ಅದಕ್ಕೆ ಆ ಪಿತೃಗಳು

“ಅಯ್ಯಾ ನಾವು ಯಾಯಾವರ ವಂಶೀಯರು. ನಮ್ಮ ವಂಶವು ನಶಿಸಿ ಹೋಗುತ್ತಿರುವ ಕಾರಣದಿಂದ ಅಧಃಪತಿತರಾಗುತ್ತಿದ್ದೇವೆ. ನಮ್ಮ ವಂಶದಲ್ಲಿ ಈಗ ಜರತ್ಕಾರು ಎನ್ನುವ ತಪೋನಿಷ್ಠನಿದ್ದಾನಂತೆ. ಆದರೆ ಆತನೋ ಮಂದಭಾಗ್ಯ. ಕೇವಲ ತಪಸ್ಸನ್ನೇ ಮಾಡುತ್ತಿರುವುದರಿಂದ ಆತ ಮದುವೆಯಾಗುತ್ತಿಲ್ಲ. ಆತನಿಗೆ ಸತ್ಪುತ್ರ ಸಂತಾನ ಗಳಿಸಿಕೊಳ್ಳೋ ಆಸೆಯೂ ಇಲ್ಲ. ಹಾಗಾಗಿ ನಮ್ಮ ಸಂತಾನ ಕ್ಷಯಿಸುತ್ತಿರೋದರಿಂದ ನಾವು ಈ ಹಳ್ಳದಲ್ಲಿ ಈ ಕಂಬವನ್ನಾಧರಿಸಿ ನೇತಾಡುತ್ತಿದ್ದೇವೆ. ಮಹಾತಪಸ್ವಿ ಎಂದೆನಿಸಿದವ ನಮ್ಮ ವಂಶದಲ್ಲಿದ್ದರೂ ನಾವು ಈ ಅಧೋಗತಿಯನ್ನ ಅನುಭವಿಸುತ್ತಿದ್ದೇವೆ. ಅಷ್ಟಕ್ಕೂ ನಮ್ಮನ್ನ ಕಂಡು ನಮ್ಮ ಈ ಪರಿಸ್ಥಿತಿಗೆ ಮರುಗಿ ವಿಚಾರಿಸುತ್ತಿರೋ ನೀನ್ಯಾರು…?” ಅನ್ನುತ್ತಾರೆ.

ಹೀಗೆ ತಮ್ಮನ್ನ ವಿಚಾರಿಸುತ್ತಿರೋ ವ್ಯಕ್ತಿಯ ಬಗ್ಗೆ ಪಿತೃಗಳು ಕೇಳಿದಾಗ ಆತನು

“ನೀವು ಉಲ್ಲೇಖಿಸಿದ ಮಂದಭಾಗ್ಯ ಜರತ್ಕಾರು ಅನ್ನುವವನು ನಾನೇ. ನಿಮ್ಮ ಈ ದುರ್ದೆಶೆ ನಿವಾರಣೆಯಾಗಲು ನಾನೇನು ಮಾಡಬೇಕು ಹೇಳಿ” ಅನ್ನುತ್ತಾನೆ.

ಅದಕ್ಕವರು “ಅಯ್ಯಾ ನಮ್ಮ ವಂಶದ ಸಂತತಿಯನ್ನ ಮುಂದುವರೆಸು. ವಂಶ ಬೆಳೆದರೆ ನಮ್ಮ ಈ ದುರ್ದೆಶೆ ನಿವಾರಣೆಯಾದೀತು. ಅದಕ್ಕಾಗಿ ನೀನು ಮದುವೆಯಾಗು” ಅನ್ನುತ್ತಾರೆ

ಆಗ ಜರತ್ಕಾರು,

“ಪಿತೃಗಳೇ, ನಾನು ನನಗಾಗಿ ಮದುವೆಯಾಗಲಾರೆ, ನಿಮ್ಮ ಕಲ್ಯಾಣಕ್ಕಾಗಿ ಮದುವೆಯಾಗುತ್ತೇನೆ. ಆದರೆ ನನ್ನದೊಂದಿಷ್ಟು ನಿಯಮಗಳಿವೆ. ಅದಕ್ಕೆ ನಾನು ಬದ್ಧ. ನನಗೆ ನನ್ನದೇ ಹೆಸರಿರುವ ಕನ್ಯೆ ಸಿಕ್ಕರೆ ಮಾತ್ರ ನಾನು ಮದುವೆಯಾಗುತ್ತೇನೆ.  ಅವಳ ತಂದೆತಾಯಿಗೆ ಅವಳನ್ನ ನನಗೆ ಕೊಟ್ಟು ಮದುವೆ ಮಾಡಿಸೋ ಅಭಿಲಾಷೆ ಇದ್ದಿರಬೇಕು ಮತ್ತು ಅವರು ನನಗೆ ಕನ್ಯಾಭಿಕ್ಷೆಯ ರೂಪದಲ್ಲಿ ಆಕೆಯನ್ನ ಕೊಟ್ಟರೆ ಮಾತ್ರ ಸ್ವೀಕರಿಸುತ್ತೇನೆ.” ಎನ್ನುತ್ತಾನೆ

ಆಗ ಪಿತೃಗಳು “ಸರಿ ಆದೀತು.” ಎನ್ನುತ್ತಾರೆ.

ಹೀಗೆ ಪಿತೃಗಳಿಗೆ ಮಾತು ಕೊಟ್ಟ ನಂತರ ಜರತ್ಕಾರು ಕನ್ಯಾನ್ವೇಷಣೆ ಮಾಡಿ ಮಾಡಿ ಬಳಲುತ್ತಾನೆ ಆದರೂ ಅವನಿಗೆ  ಅವನ ನಿಯಮಕ್ಕನುಸಾರವಾದ ಯಾವುದೇ ಕನ್ಯೆ ಸಿಗುವುದಿಲ್ಲ.

ಹೀಗಿರಲು ಹತಾಶನಾಗಿ ಒಮ್ಮೆ ಜರತ್ಕಾರು ಇಡೀ ಮೂರ್ಲೋಕಕ್ಕೆ ಕೇಳುವಂತೆ…

“ನನ್ನ ಮನದಿಂಗಿತದಂತಾ ಕನ್ಯೆ ಇದ್ದರೆ ಭಿಕ್ಷೆಯ ರೂಪದಲ್ಲಿ ಅವಳನ್ನು ದಾನ ಮಾಡುವಿರಾ… ? ಎಂದು ಹೇಳುತ್ತಾನೆ.

ಆತನ ಈ ಮಾತು ಕೇಳುತ್ತಿದ್ದಂತೆ ಸರ್ಪರಾಜ ವಾಸುಕಿಯು ತನ್ನ ತಂಗಿಯೊಡನೆ ಬಂದು “ಇಗೋ ಜರತ್ಕಾರು… ಈಕೆ ನನ್ನ ತಂಗಿ ಜರತ್ಕಾರು ಇವಳನ್ನ ಕನ್ಯಾಭಿಕ್ಷೆಯ ರೂಪದಲ್ಲಿ ನಿನಗೆ ಕೊಡಲೆಂದೇ ಸಲಹುತ್ತಿದ್ದೇನೆ. ಸ್ವೀಕರಿಸು” ಎನ್ನುತ್ತಾನೆ. ಹೀಗೆ ಯಾಯಾವರ ವಂಶೀಯನಾದ ಜರತ್ಕಾರುವಿಗೆ ಜರತ್ಕಾರು ಅನ್ನುವ ಹೆಸರಿನ ಕನ್ಯೆಯೊಡನೆಯೇ ವಿವಾಹವಾಗುತ್ತದೆ.
ಮುಂದಿನದ್ದು ಇನ್ನೊಮ್ಮೆ

– ಗುರುಪ್ರಸಾದ್ ಆಚಾರ್ಯ