ವ್ಯಾಸ ಮಹಾಭಾರತ – ಭಾಗ 15

​ಈ ರೀತಿಯಾಗಿ ಯಾಯಾವರ ವಂಶೀಯನಾದ ಜರತ್ಕಾರುವಿಗೂ ವಾಸುಕಿಯ ತಂಗಿಯಾದ ಜರತ್ಕಾರುವಿಗೂ ವಿವಾಹವಾಗುತ್ತದೆ. ಇವರಿಬ್ಬರ ಸುಮಧುರ ದಾಂಪತ್ಯದ ಫಲವಾಗಿ ಇವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಆತನೇ “ಆಸ್ತಿಕ.” ಈತ ವೇದಗಳನ್ನೆಲ್ಲಾ ಅಧ್ಯಯನ ಮಾಡಿ ವೇದ ಪಾರಂಗತನಾಗಿ ಶ್ರೇಷ್ಠ ಬ್ರಾಹ್ಮಣ ನಾಗುತ್ತಾನೆ. ಈತನಿಂದಾಗಿ ಅವನ ಪಿತೃಗಳಿಗೂ ಸದ್ಗತಿ ಪ್ರಾಪ್ತಿಯಾಗುತ್ತದೆ.

ಈತನ ಜೀವಿತಾವಧಿಯಲ್ಲೇ ಪಾಂಡವ ವಂಶೀಯನಾದ ಜನಮೇಜಯ ರಾಜನಾಗಿರುತ್ತಾನೆ. ಈ ಆಸ್ತೀಕನೇ ಮುಂದೆ ಜನಮೇಜಯನ ಸರ್ಪಯಾಗವನ್ನ ನಿಲ್ಲಿಸುವಂತೆ ಮಾಡಿದ್ದು.. ಅದಕ್ಕೆ ಕಾರಣ ಸರ್ಪಗಳು ಈತನಿಗೆ ಸೋದರ ಮಾವನಾಗುತ್ತಾರಲ್ಲವೇ. ಆಸ್ತೀಕ ಸರ್ಪಯಾಗವನ್ನ ತಡೆದದ್ದನ್ನ ತಿಳಿದುಕೊಂಡಿದ್ದೇವೆ. ಆತ ಹಾಗೆ ಮಾಡಲು ಸರ್ಪಗಳು ಸಂಬಂಧ ದಲ್ಲಿ ಸೋದರ ಮಾವಂದಿರಾಗಿದ್ದುದೂ ಕಾರಣ. ಈಗ ಒಂದಿಷ್ಟು ಸರ್ಪಗಳ ಕುರಿತಾದ ಕತೆಯನ್ನು ಕೇಳೋಣವೇ..

ಸತ್ಯಯುಗದಲ್ಲಿ ಪ್ರಜಾಪತಿ ಬ್ರಹ್ಮನಿಗೆ “ಕದ್ರು” ಮತ್ತು “ವಿನತೆ” ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದರಂತೆ. ನೋಡಲು ಅತ್ಯಂತ ಸುಂದರವಾಗಿದ್ದ ಇವರೀರ್ವರನ್ನು ಪ್ರಜಾಪತಿಬ್ರಹ್ಮ “ಕಶ್ಯಪ”ನೆಂಬ ಮಹಾ ಮುನಿಶ್ರೇಷ್ಠನಿಗೆ ಮದುವೆ ಮಾಡಿಕೊಡುತ್ತಾನೆ. ಈ ಇಬ್ಬರು ಪತ್ನಿಯರ ಸೇವೆಯಿಂದ ಸಂತುಷ್ಟರಾದ ಕಶ್ಯಪ ಮುನಿ ಇಬ್ಬರಿಗೂ “ಒಂದೊಂದು ವರ ಕೊಡುತ್ತೇನೆ ಕೇಳಿಕೊಳ್ಳಿ” ಎನ್ನುತ್ತಾನೆ. ಇದನ್ನ ಕೇಳಿದ ಕದ್ರು “ತನಗೆ ಬಲಶಾಲಿಯಾದ ಸಾವಿರ ಸರ್ಪಗಳು ಮಕ್ಕಳಾಗಿ ಹುಟ್ಟಲಿ.” ಎಂದು ಕೇಳಿಕೊಳ್ಳುತ್ತಾಳೆ. ವಿನತೆಯು “ತನಗೆ ಕದ್ರುವಿನ ಮಕ್ಕಳನ್ನು ಮೀರಿಸುವ ಇಬ್ಬರೇ ಇಬ್ಬರು ಬಲಶಾಲಿ ಮಕ್ಕಳು ಹುಟ್ಟಲಿ” ಎಂದು ಕೇಳಿಕೊಳ್ಳುತ್ತಾಳೆ. ಕಶ್ಯಪ ತಥಾಸ್ತು ಅನ್ನುತ್ತಾನೆ.

ಅದಾದ ಹಲವಾರು ವರ್ಷ ಗಳ ನಂತರ ಕದ್ರು ಸಾವಿರ ಮೊಟ್ಟೆಗಳಿಗೆ ಜನ್ಮ ಕೊಡುತ್ತಾಳೆ. ವಿನತೆ ಎರಡು ಮೊಟ್ಟೆಗಳಿಗೆ ಜನ್ಮವೀಯುತ್ತಾಳೆ . ತದನಂತರ ಐನೂರು ವರ್ಷಗಳ ಬಳಿಕ ಕದ್ರುವಿನ ಸಾವಿರ ಮೊಟ್ಟೆಗಳು ಒಡೆದು ಸಾವಿರ ಬಗೆಯ ಸರ್ಪದ ಮರಿಗಳು ಹೊರಬರುತ್ತವೆ. ಆದರೆ ಹಲವಾರು ವರ್ಷಗಳ ಬಳಿಕವೂ ವಿನತೆಯ ಮೊಟ್ಟೆ ಒಡೆಯುವುದೇ ಇಲ್ಲ .ಕದ್ರುವಿನ ಮಕ್ಕಳ ನ್ನು ಕಂಡು ಅಸೂಯೆಯಿಂದ ಒಂದು ದಿನ ವಿನತೆ ತನ್ನ ಒಂದು ಮೊಟ್ಟೆಯನ್ನು ಒಡೆದುಬಿಡುತ್ತಾಳೆ .

ಅದರೊಳಗೆ ಅರ್ಧ ದೇಹ ದ ರೂಪ ಪಡೆದ ವ್ಯಕ್ತಿಯ ಜನನವಾಗುತ್ತದೆ. ತಾಯಿಯ ಅಸೂಯೆಯಿಂದಾಗಿ ಅರ್ಧ ದೇಹ ಪಡೆದ ಆತ ಕೋಪಗೊಂಡು “ಅಸೂಯೆಯಿಂದಾಗಿ ನನ್ನನ್ನು ಅಂಗವಿಕಲನನ್ನಾಗಿಸಿದ್ದರಿಂದ ನೀನು ನಿನ್ನ ಸಹೋದರಿಯ ದಾಸಿಯಾಗಿ ಜೀವನ ಸವೆಸುವಂತಾಗಲಿ” ಎಂದು ಶಪಿಸುತ್ತಾನೆ. ಮತ್ತೆ ಶಾಂತನಾಗಿ ಇನ್ನೊಂದು ಮೊಟ್ಟೆಯನ್ನಾದರೂ ಚೆನ್ನಾಗಿ ನೋಡಿಕೊಳ್ಳಿ . ಅದರಿಂದ ಹುಟ್ಟಿ ಬರುವಾತ ನಿಮ್ಮ ದಾಸ್ಯವನ್ನು ನಿವಾರಿಸುತ್ತಾನೆ.ಎನ್ನುತ್ತಾ ಸೂರ್ಯನ ಸಾರಥಿಯಾಗುತ್ತಾನೆ. ಆತನೇ “ಅರುಣ”. ಆತನ ಆಗಮನವೇ ಅರುಣೋದಯ. ಆ ನಂತರ ಅರುಣನ ಮಾತನ್ನು ಪಾಲಿಸುವ ವಿನತೆ ತನ್ನ ಇನ್ನೊಂದು ಮೊಟ್ಟೆಯನ್ನು ಮತ್ತೆ ಐನೂರು ವರುಷ ಕಾಪಾಡಿದ ಪರಿಣಾಮವಾಗಿ ಅದರಿಂದ ಸರ್ಪಾಹಾರಿ ಮಹಾಪರಾಕ್ರಮಿ ಪಕ್ಷಿರಾಜ “ಗರುಡ”ನ ಜನನ ವಾಗುತ್ತದೆ.
ಮುಂದುವರಿಯುತ್ತದೆ.

ಗುರುಪ್ರಸಾದ್ ಆಚಾರ್ಯ

Related News

Comments (wait until it loads)
Loading...
class="clear">