ವ್ಯಾಸ ಮಹಾಭಾರತ – ಭಾಗ 16

​ಹೀಗಿರಲು ಒಂದು ಬಾರಿ ಸಮುದ್ರ ಮಥನದಿಂದ ಮೂಡಿ ಬಂದ ಉಚ್ಚೈಶ್ರವಸ್ಸಿನ ಕುರಿತಾಗಿ ಸಹೋದರಿಯರಾದ ಕದ್ರು ಮತ್ತು ವಿನತೆಯರ ನಡುವೆ ಪಂಥವೇರ್ಪಟ್ಟಿತು. ವಿನತೆ ಉಚ್ಚೈಶ್ರವಸ್ಸು ಪೂರ್ತಿ ಬಿಳಿಯಾಗಿದೆ ಅಂದರೆ ಕದ್ರು …. ಇಲ್ಲ ಅದರ ಬಾಲ ಕಪ್ಪಗಿದೆ ಎಂದು ವಾದಿಸುತ್ತಾಳೆ. ಕೊನೆಗೆ ವಾದ ತೀವ್ರಗೊಂಡು ಅದನ್ನ ಪರಿಶೀಲಿಸೋಣ… ಎಂದು ಕೊಂಡು ಯಾರು ಸೋತರೋ ಅವರು ಗೆದ್ದವರ ದಾಸಿಯಾಗಿರಬೇಕು ಅನ್ನುವ ನಿಬಂಧನೆ ಹಾಕಿಕೊಳ್ಳುತ್ತಾರೆ.

ವಾಸ್ತವದಲ್ಲಿ ಆ ಕುದುರೆ ಪೂರ್ತಿ ಬಿಳಿಯಾಗಿದೆ ಎನ್ನುವುದರ ಅರಿವಿದ್ದರೂ ಕದ್ರು ಬೇಕೆಂದೇ ವಾದಿಸುತ್ತಿರುತ್ತಾಳೆ. ಹಾಗಾಗಿ ಪರಿಶೀಲನೆಗೂ ಮುನ್ನ ವಿನತೆ ನಿರಾಳವಾಗಿದ್ದರೆ ಕದ್ರು ಆತಂಕದಿಂದ ದಾಸ್ಯವನ್ನ ತಪ್ಪಿಸುವ ನಿಟ್ಟಿನಲ್ಲಿ ತನ್ನ ಮಕ್ಕಳನ್ನ ಕರೆದು ನಿಮ್ಮಿಂದ ಒಂದು ಕಾರ್ಯವಾಗಬೇಕಾಗಿದೆ. ನನಗೆದುರಾಗಿರೋ ದಾಸ್ಯದ ಭೀತಿ ನಿವಾರಣೆ ಮಾಡಲು ನೀವು ಉಚ್ಚೈಶ್ರವಸ್ಸಿನ ಬಾಲದಲ್ಲಿ ಸೇರಿಕೊಂಡು ಅದು ಕಪ್ಪಾಗಿ ಕಾಣುವಂತೆ ಮಾಡಿ ಇದರಿಂದ ನಾನು ಪಂಥ ಗೆಲ್ಲುತ್ತೇನೆ ಮತ್ತು ನನಗೆ ದಾಸ್ಯ ತಪ್ಪುತ್ತದೆ ಎನ್ನುತ್ತಾಳೆ.

ಇದನ್ನ ಕೇಳಿದ ಅವಳ ಮಕ್ಕಳಾದ ಸರ್ಪಗಳು… “ಇದು ತಪ್ಪಲ್ವಾ ತಾಯೀ… ಮೋಸದಿಂದ ಪಣ ಗೆಲ್ಲೋದು ನ್ಯಾಯಯುತವೇ…?” ಎಂದು ಕೇಳಲು ಕದ್ರು ಕೋಪಗೊಂಡು.. ನನ್ನ ಮಾತನ್ನ ಕೇಳದ ನೀವು ಪಾಂಡವ ವಂಶಜನಾದ ಜನಮೇಜಯ ಮಾಡೋ ಸರ್ಪಸತ್ರದಲ್ಲಿ ಅಗ್ನಿಗಾಹುತಿಯಾಗಿ ಎಂದು ಶಾಪ ಕೊಡುತ್ತಾಳೆ…

ಇದನ್ನ ಕೇಳಿ ದುಃಖಿತರಾದ ಸರ್ಪಗಳು ಒಂದು ಗೂಡಿ ನಾವೇನು ಮಾಡೋದು ಎಂದು ಆಲೋಚಿಸಿ ಕೊನೆಯಲ್ಲಿ …. ತಾಯಿಯ ದಾಸ್ಯವನ್ನ ತಪ್ಪಿಸೋದೇ ಮುಖ್ಯ ಎಂದು ತೀರ್ಮಾನಿಸಿ ತಾಯಿಯ ಮಾತಿನಂತೆಯೇ ಅವರಿಬ್ಬರೂ ಕುದುರೆಯನ್ನ ನೋಡಲು ಹೋದಾಗ ಕುದುರೆಯ ಬಾಲದಲ್ಲಿ ಸೇರಿಕೊಂಡು ಅದನ್ನ ಕಪ್ಪಾಗಿ ಕಾಣುವಂತೆ ಮಾಡುತ್ತಾರೆ. ಇದರಿಂದಾಗಿ ವಿನತೆ ಸೋತು ಕದ್ರುವಿನ ದಾಸಿಯಾಗಿ ಜೀವನ ಕಳೆಯತೊಡಗುತ್ತಾಳೆ (ಅದು ಅವಳ ಮಗನದ್ದೇ ಶಾಪವಾಗಿತ್ತು ಕೂಡಾ….)

ಹೀಗೆ ವಿನತೆಯು ಪಣದಲ್ಲಿ ಸೋತ ಸಂಧರ್ಭದಲ್ಲಿ ಆಕೆಯ ಇನ್ನೊಂದು ಮೊಟ್ಟೆ ಇನ್ನೂ ಒಡೆದಿರಲಿಲ್ಲ. ಆಕೆ ದಾಸಿಯಾದ ಮೇಲೆ ಅದನ್ನ ಆರೈಕೆ ಮಾಡುವವರೂ ಯಾರೂ ಇದ್ದಿರಲಿಲ್ಲ. ಆಕೆ ದಾಸೀ ಜೀವನ ನಡೆಸುತ್ತಿದ್ದಳು.

ಯಾರ ಆರೈಕೆ ಇಲ್ಲದ ಹೊರತಾಗಿಯೂ  ಒಂದು ದಿನ ವಿನತೆಯ ಎರಡನೆಯ ಮೊಟ್ಟೆ ಒಡೆದು ಅದರೊಳಗಿಂದ ಮಹಾ ಪ್ರತಾಪಿ ಮಹಾ ತೇಜಸ್ವೀ ಗರುಡನ ಜನನವಾಯಿತು. ಆತ ಮಹಾ ತೇಜಸ್ವಿಯಾಗಿದ್ದ. ಮೊಟ್ಟೆಯಿಂದ ಹೊರಬಂದ ಕೂಡಲೇ ಆತನ ಪ್ರಕಾಶವು ನಾಲ್ಕೂ ದಿಕ್ಕಿನಲ್ಲಿ ಹರಡಿತು. ಹುಟ್ಟಿದ ಕೂಡಲೇ ಆತ ಬೃಹದಾಕಾರವಾಗಿ ಬೆಳೆದು ಇಡಿಯ ಆಕಾಶವನ್ನೇ ವ್ಯಾಪಿಸಿದನು. ಆತ ಮಾಡುತ್ತಿದ್ದ ಸದ್ದು ಬಹುಘೋರವಾಗಿದ್ದಿತ್ತು. ಈ ದಿವ್ಯ ಪ್ರಭೆಯನ್ನ ಕಂಡು ದೇವತೆಗಳೆಲ್ಲಾ ಇದು ಅಗ್ನಿಯದೇ ಕೆಲಸ ಎಂದು, ಜಗತ್ತಿಗೆ ನಿನ್ನ ಉರಿಯನ್ನ ತಡೆಯಲು ಸಾಧ್ಯವಾಗುತ್ತಿಲ್ಲ ಹೇ ಅಗ್ನಿ ಶಾಂತನಾಗು ಎಂದು ಪ್ರಾರ್ಥಿಸತೊಡಗಿದರಂತೆ.

ಇದಕ್ಕೆ ಅಗ್ನಿಯು ತಾನು ಈ ರೀತಿ ಮಾಡುತ್ತಿಲ್ಲ. ಇದು ಕಶ್ಯಪ ಪುತ್ರ ಗರುಡನ ಪ್ರಭೆ ಬನ್ನಿ ನಾವು ಆತನನ್ನ ಪ್ರಾರ್ಥಿಸೋಣ ಅನ್ನುತ್ತಾ ದೇವತೆಗಳೆಲ್ಲರ ಜೊತೆ ಗರುಡನನ್ನ ಸ್ತುತಿಸುತ್ತಾರೆ. ಹೇ ಗರುಡನೇ ನಮ್ಮ ಮೇಲೆ ದಯೆ ತೋರು ಎನ್ನುತ್ತಾ ಪ್ರಾರ್ಥಿಸಲು ಶಾಂತನಾದ ಗರುಡ ತನ್ನ ಅಕಾರವನ್ನೂ ತೇಜಸ್ಸನೂ ಸಂಕ್ಷೇಪಗೊಳಿಸುತ್ತಾನೆ.
ಕಥೆ ಮುಂದುವರಿಯುತ್ತದೆ

– ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.

error: Content is protected !!