ವ್ಯಾಸ ಮಹಾಭಾರತ – ಭಾಗ 17

​ಹೀಗೆ ಲೋಕ ಕಲ್ಯಾಣಾರ್ಥವಾಗಿ ತನ್ನ ಬೃಹದಾಕಾರವನ್ನ ಕುಗ್ಗಿಸಿದ ಗರುಡನು ತನ್ನ ಅಣ್ಣನಾದ ಅರುಣನನ್ನ ತನ್ನ ಬೆನ್ನ ಮೇಲೆ ಹೊತ್ತು ಕೊಂಡು ತಾಯಿಯಾದ ವಿನತೆಯ ಬಳಿ ಹೋಗಲು ಹಾರತೊಡಗಿದನು. ಆದರೆ ಮಾರ್ಗ ಮಧ್ಯದಲ್ಲಿ ತನ್ನ ಅಣ್ಣ ಅರುಣನನ್ನ ಇಡಿಯ ಜಗತ್ತನ್ನೇ ಸುಟ್ಟು ಬಿಡಲು ಹೊರಟಿದ್ದ ಸೂರ್ಯನ ಮುಂದೆ ಪ್ರತಿಷ್ಠಾಪಿಸಿ ಆತನನ್ನ ಸೂರ್ಯನ ಸಾರಥಿಯನ್ನಾಗಿ ಮಾಡಬೇಕಾಯ್ತು (ಅರುಣ ಸೂರ್ಯನ ಸಾರಥಿಯಾದ ಕಥೆ ಇನ್ನೊಮ್ಮೆ ಹೇಳೋಣ…).

ಆಮೇಲೆ ಗರುಡನು ತಾಯಿಯಾದ ವಿನತೆಯ ಬಳಿ ಹೋದಾಗ ಆಕೆ ಕದ್ರುವಿನ ದಾಸಿಯಾಗಿದ್ದುದು ತಿಳಿದು ದುಃಖ ಪಟ್ಟು ಆತನು ತಾಯಿಯಂತೆ ದಾಸ್ಯದಿಂದಲೇ ಇರತೊಡಗಿದನು. ಒಮ್ಮೆ ಕದ್ರು ವಿನತೆಯನ್ನ ಕರೆದು “ದಾಸಿಯೇ ಆಳವಾದ ಸಮುದ್ರದ ಮಧ್ಯದಲ್ಲಿ ಸುರಮ್ಯವಾಗಿರೋ ನಾಗಾಲಯಕ್ಕೆ ನನ್ನನ್ನ ಕರೆದುಕೊಂಡು ಹೋಗು ಎಂದು ಆಜ್ಞಾಪಿಸುತ್ತಾಳೆ “ಆಕೆಯ ಆಜ್ಞೆಯನ್ನ ಸ್ವೀಕರಿಸಿದ ವಿನತೆ ಆಕೆಯನ್ನ ಹೊತ್ತು ನಾಗಾಲಯ ಹೊರಡಲು ಅನುವಾಗುತ್ತಾಳೆ. ಇತ್ತ ಗರುಡನು ಕದ್ರುವಿನ ಮಕ್ಕಳಾದ ಸರ್ಪಗಳನ್ನೆಲ್ಲಾ ಬೆನ್ನ ಮೇಲೆ ಹೊತ್ತುಕೊಂಡು ಹಾರತೊಡಗುತ್ತಾನೆ.

ಉತ್ಸಾಹದಿಂದ ಮೇಲೆ ಮೇಲೆ ಹಾರತೊಡಗಿ ಗರುಡನು ಸೂರ್ಯನ ಸಮೀಪಕ್ಕೆ ತೆರಳಲು ಸೂರ್ಯನ ಶಾಖವನ್ನ ಅಲ್ಪಬಲರಾದ ಸರ್ಪಗಳು ತಡೆಯಲಾಗದೇ ವಿಲವಿಲನೆ ಒದ್ದಾಡತೊಡಗುತ್ತಾರೆ. ಇದನ್ನ ಕಂಡ ಕದ್ರು ಮರುಗಿ ತನ್ನ ಮಕ್ಕಳ ಮೇಲೆ ಮಳೆಗರೆಯುವಂತೆ ಇಂದ್ರನನ್ನ ನಾನಾವಿಧವಾಗಿ ಪ್ರಾರ್ಥಿಸುತ್ತಾಳೆ. ಆಕೆಯ ಸ್ತುತಿಯಿಂದ ಪ್ರಸನ್ನನಾದ ಇಂದ್ರ ಅವುಗಳ ಮೇಲೆ ಮಳೆಗರೆಯುತ್ತಾನೆ. ಇದರಿಂದಾಗಿ ನಾಗಗಳಿಗೆ ಶೀತಲವಾದ ಅನುಭವ ಉಂಟಾಗುತ್ತದೆ. ಆ ತರುವಾಯ ಕದ್ರು ಮತ್ತು ನಾಗಗಳೆಲ್ಲ ರಾಮಣೀಯಕ ದ್ವೀಪವನ್ನ ತಲುಪುತ್ತಾರೆ….

ಈ ಹಿಂದೆ ಸೂರ್ಯ ಜಗತ್ತನ್ನೇ ಸುಟ್ಟು ಬಿಡಲು ಹೊರಟಿದ್ದ ಅನ್ನುವ ಮಾತನ್ನು ಕೇಳಿದ್ದಿರಿ…? ಯಾಕೆ ಸೂರ್ಯನಿಗೆ ಇಂಥಾ ಕೋಪ ಅನ್ನುವ ಕಥೆಯನ್ನು ಈಗ ಕೇಳೋಣ…

ಸಮುದ್ರ ಮಥನದ ಕೊನೆಯಲ್ಲಿ ಸಿಕ್ಕಿದ ಅಮೃತಕ್ಕಾಗಿ ಸುರರೂ ಅಸುರರೂ ಹೊಡೆದಾಡಿದ ಕಥೆ ಎಲ್ಲರಿಗೂ ಗೊತ್ತಿರುವಂತದ್ದೇ.. ಆಗ ಮೋಹಿನಿ ರೂಪ ಧರಿಸಿ ಬಂದ ವಿಷ್ಣು ದೇವತೆಗಳಿಗೆ ಉಪಾಯದಿಂದ ಅಮೃತ ಬಡಿಸುತ್ತಿರಲು ರಾಹುವೆಂಬ ರಾಕ್ಷಸ ದೇವತೆಗಳ ರೂಪ ತಾಳಿ ದೇವತೆಗಳ ಸಾಲಲ್ಲಿ ಕೂತು ಅಮೃತವನ್ನ ಗಂಟಲಿಗಿಳಿಸುವಾಗ.. ಸೂರ್ಯ ಚಂದ್ರರು, ಮೋಹಿನಿಗೆ ನಿಜ ವಿಚಾರ ಹೇಳುತ್ತಾರೆ. ಆ ಕೂಡಲೇ ವಿಷ್ಣು ತನ್ನ ಚಕ್ರದಿಂದ ರಾಕ್ಷಸನ ಕುತ್ತಿಗೆ ಕತ್ತರಿಸುತ್ತಾನೆ. ಆದರೆ ಅಮೃತ ಗಂಟಲಲ್ಲಿದ್ದುದರಿಂದ ಎರಡು ಭಾಗಗಳಲ್ಲೂ ಜೀವ ಇರುತ್ತದೆ. ತನ್ನ ಆ ಸ್ಥಿತಿಗೆ ಸೂರ್ಯ ಚಂದ್ರರೇ ಕಾರಣ ಎನ್ನುವ ದ್ವೇಷಕ್ಕೆ, ಸಮಯ ಸಿಕ್ಕಾಗಲೆಲ್ಲಾ ರಾಹು ಕೇತು ಸೂರ್ಯ ಚಂದ್ರರನ್ನ ಕಾಡುತ್ತಿರುತ್ತಾರೆ.

ಹೀಗೆ ಕಾಡುವ ಹೊತ್ತಲ್ಲಿ ದೇವತೆಗಳ್ಯಾರೂ ತಮ್ಮ ಸಹಾಯಕ್ಕೆ ಬರುವುದಿಲ್ಲವಲ್ಲ… ಅಷ್ಟಕ್ಕೂ ತಾವು ರಾಕ್ಷಸನ ಕುರಿತು ಹೇಳಿದ್ದು ದೇವತೆಗಳ ಒಳಿತಿಗಾಗಿಯೇ ಆದರೂ ದೇವತೆಗಳಿಗೆ ಉಪಕಾರದ ಸ್ಮರಣೆ ಇಲ್ಲ ಅನ್ನುವ ಸಿಟ್ಟು ಸೂರ್ಯನಿಗಿರುತ್ತದೆ. ಅದೇ ಸಿಟ್ಟಿನಿಂದ ಸೂರ್ಯ ಇಡಿಯ ಜಗತ್ತನ್ನು ಸುಟ್ಟು ಬಿಡುತ್ತೇನೆ ಎಂದು ಅಸ್ತಾಂಚಲಕ್ಕೆ ಹೋಗುತ್ತಾನೆ.

ಬೆಳಗಾಗಲು ಇನ್ನೂ ಸಮಯ ಇರುವಂತೆಯೇ ಜಗತ್ತು ಸೂರ್ಯನ ತಾಪದಿಂದ ಒದ್ದಾಡ ತೊಡಗುತ್ತದೆ. ಬೆಳಗಾಗುವ ಮುನ್ನವೇ ಹೀಗಾದರೆ ಬೆಳಗಾದ ಮೇಲೆ ಹೇಗೋ ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತದೆ. ಆಗ ಎಲ್ಲರೂ ಬ್ರಹ್ಮನನ್ನ ಪ್ರಾರ್ಥಿಸಿ ತಮ್ಮನ್ನು ರಕ್ಷಿಸುವಂತೆ ಕೇಳಲು ಬ್ರಹ್ಮ ಪ್ರತ್ಯಕ್ಷವಾಗಿ ಸೂರ್ಯನ ಕೋಪಕ್ಕೆ ಕಾರಣವನ್ನು ತಿಳಿಸುತ್ತಾನೆ. ಇದಕ್ಕೆ ಉಪಾಯವನ್ನೂ ಹೇಳುತ್ತಾನೆ.

ಕಶ್ಯಪ ಮುನಿಯ ಮಗ ಅರುಣ ಮಹಾಕಾಯ ಮಹಾಶಕ್ತಿಶಾಲಿ. ಆತನನ್ನ ಸೂರ್ಯ ಮತ್ತು ಭೂಮಿಯ ಅಡ್ಡಲಾಗಿ ಇರಿಸಿದರೆ ಆತನಿಗೆ ಸೂರ್ಯನ ತಾಪವನ್ನು ಕಡಿತಗೊಳಿಸೋ ಶಕ್ತಿಯಿದೆ . ಹಾಗೂ ಮುಂದೆ ಸೂರ್ಯ ಈ ರೀತಿ ಎಂದೂ ವರ್ತಿಸದ ಹಾಗೆ ಅರುಣನನ್ನ ಸೂರ್ಯನ ಸಾರಥಿಯನ್ನಾಗಿಸುತ್ತಾನೆ. ಹೀಗೆ ವಿನತೆಯ ಮಗ ಗರುಡನ ಅಣ್ಣ ಅರುಣ ಸೂರ್ಯನ ಸಾರಥಿಯಾಗಿದ್ದು.

ಮುಂದುವರೆಯುತ್ತದೆ…

-ಗುರುಪ್ರಸಾದ್ ಆಚಾರ್ಯ