ವ್ಯಾಸ ಮಹಾಭಾರತ – ಭಾಗ 18

​ಈ ಹಿಂದೆ ಗರುಡನು ತನ್ನ ತಾಯಿಯ ಬಳಿ ಹೋಗುತ್ತಾನೆ ಎನ್ನುವರೆಗಿನ ಕಥೆಯನ್ನೂ ಅಲ್ಲಿ ಗರುಡನು ತಾಯಿಯಂತೆ  ಕದ್ರುವಿನ ದಾಸನಾಗಿ ಜೀವಿಸುತ್ತಿದ್ದನು ಮತ್ತು ವಿಶ್ವಕರ್ಮನಿಂದ ನಿರ್ಮಿತವಾದ ರಮಣೀಯವಾದ ದ್ವೀಪ “ರಾಮಣೀಯಕ” ಕ್ಕೆ ತೆರಳಿದನು ಅನ್ನುವ ಕಥೆಯನ್ನೂ ಕೇಳಿದ್ದಿರಿ. ಅದರ ನಂತರ ಏನಾಯಿತು….? ಈಗ ನೋಡೋಣ…

ಈ ರಾಮಣೀಯಕ ಪರ್ವತವು ಅತ್ಯಂತ ರಮಣೀಯವಾಗಿತ್ತು. ಅದಕ್ಕಾಗಿಯೇ ಅದನ್ನ ರಾಮಣೀಯಕ ಅನ್ನುವ ಹೆಸರಿನಿಂದ ಕರೆಯುತ್ತಿದ್ದರು. ಇಲ್ಲಿ ಬಹಳ ಆನಂದದಿಂದ ಇರತೊಡಗಿದವು. ಸ್ವಲ್ಪ ಕಾಲದ ನಂತರ ಒಮ್ಮೆ ಗರುಡನನ್ನ ಕರೆದು “ನೀನು ಅತ್ಯಂತ ಎತ್ತರದಲ್ಲಿ ಹಾರಾಡುವುದರಿಂದ ನಿನಗೆ ಇಲ್ಲಿಗಿಂತಲೂ ರಮಣೀಯವಾದ ಪ್ರದೇಶದ ಪರಿಚಯವಿರುತ್ತದೆ. ಹಾಗಾಗಿ ನಮ್ಮನ್ನ ಅಲ್ಲಿಗೆ ಕರೆದುಕೊಂಡು ಹೋಗು” ಎನ್ನುತ್ತವೆ. ಈ ರೀತಿ ಆಜ್ಞೆ ಮಾಡುವುದು ಗರುಡನನ್ನ ಸಿಟ್ಟಿಗೇರಿಸುತ್ತಿತ್ತು.

ಈ ಬಾರಿ ಆತ ತನ್ನ ತಾಯಿಯಾದ ವಿನತೆಯ ಬಳಿ ಕೇಳಿಯೇ ಬಿಟ್ಟ “ಅಮ್ಮಾ ಒಂದು ಕ್ಷಣದಲ್ಲಿ ಈ ಸರ್ಪಗಳನ್ನೆಲ್ಲಾ ನಾಶ ಮಾಡಿಬಿಡಬಲ್ಲ ಶಕ್ತಿ ಇರುವ ನಾನೇಕೆ ಇವರ ಮಾತು ಕೇಳಬೇಕು…?” ಎಂದ.  ಇದಕ್ಕೆ ವಿನತೆಯು ತಾನು ಪಣವೊಂದರಲ್ಲಿ ಸೋತ ಕಾರಣ ಕದ್ರುವಿನ ಮತ್ತು ಅವಳ ಮಕ್ಕಳ ದಾಸಿಯಾಗಿದ್ದೇನೆ. ಇದು ನಮ್ಮ ದುರ್ದೈವ ಎಂದಳು. 

ಆ ಕೂಡಲೇ ಗರುಡನು ಸರ್ಪಗಳ ಬಳಿ ತೆರಳಿ “ಹೇ ಸರ್ಪಗಳಿರಾ ಯಾವ ಕೆಲಸ ಮಾಡುವುದರಿಂದ ನಾನು  ಮತ್ತು ನನ್ನ ತಾಯಿ ಈ ದಾಸ್ಯದಿಂದ ಮುಕ್ತರಾಗಬಹುದು …?” ಎಂದು ಪ್ರಶ್ನಿಸುತ್ತಾನೆ. 

ಈ ಮಾತನ್ನ ಕೇಳಿದ ಸರ್ಪಗಳಿಗೆ ಈ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳುವ ಆಲೋಚನೆ ಮೂಡುತ್ತದೆ. ಆ ಕೂಡಲೇ ದೇವಲೋಕದಿಂದ ಅಮೃತವನ್ನು ತಂದುಕೊಟ್ಟರೆ ನಿನ್ನನ್ನು ಮತ್ತು ನಿನ್ನ ತಾಯಿಯನ್ನು ದಾಸ್ಯದಿಂದ ಮುಕ್ತರನ್ನಾಗಿಸುತ್ತೇವೆ ಅನ್ನುತ್ತಾರೆ. ಕದ್ರುವಿಗೂ ತನ್ನ ಮಕ್ಕಳು ಅಮರರಾಗುತ್ತಾರೆ ಅನ್ನುವ ಆಲೋಚನೆ ಮೂಡಿ ಇದಕ್ಕೆ ಒಪ್ಪುತ್ತಾಳೆ….

ದಾಸ್ಯದ ಸಂಕೋಲೆಯಿಂದ ಬಿಡುಗಡೆ ಹೊಂದಲು ಕಾತುರನಾಗಿದ್ದ ತನ್ನ ತಾಯಿಯ ಬಳಿ ಹೋಗಿ “ಅಮ್ಮಾ , ನಾನು ಅಮೃತ ತರಲು ಹೋಗುತ್ತಿದ್ದೇನೆ. ಆದರೆ ನನಗೀಗ ಅತ್ಯಂತ ಹಸಿವಾಗಿರುವುದರಿಂದ ತಿನ್ನಲು ಏನಾದರೂ ಕೊಡು ಮತ್ತು ನನ್ನನ್ನು ಆಶೀರ್ವದಿಸು” ಅನ್ನುತ್ತಾನೆ. ಅದಕ್ಕೆ ವಿನತೆಯು ತನ್ನ ಮಗನ ಬಳಿ “ಮಗನೆ ನಿನಗೆ ಮಾರ್ಗ ಮಧ್ಯದಲ್ಲಿ ಸಿಗೋ ನಿಷಾದರನ್ನ ತಿಂದು ನಿನ್ನ ಹಸಿವನ್ನು ಇಂಗಿಸಿಕೋ. ಆದರೆ ಎಚ್ಚರ ಮಗನೆ ತಪ್ಪಿಯೂ ನೀನು ಯಾವುದೇ ಬ್ರಾಹ್ಮಣ ರನ್ನು ತಿನ್ನಬೇಡ. ಕರ್ಮಾನುಷ್ಠಾನಗಳನ್ನ  ನಿಯಮಿತವಾಗಿ ಮಾಡುವ ಬ್ರಾಹ್ಮಣರ ಕೋಪಕ್ಕೆ ತುತ್ತಾಗಬೇಡ. ಅವರು ಅಗ್ನಿ, ಸೂರ್ಯ ವಿಷ, ಶಸ್ತ್ರದಂತೆ ಭಯಾನಕರು. ಅಗ್ನಿ ಮತ್ತು ಸೂರ್ಯರು ಭಸ್ಮ ಮಾಡಲಾಗದ್ದನ್ನ ಬ್ರಾಹ್ಮಣರು ಮಾಡಬಲ್ಲರು. ಇದೇ ಕಾರಣಕ್ಕೆ ಅವರು ವರ್ಣಗಳಲ್ಲಿ ಶ್ರೇಷ್ಠ ರು. ಅವರನ್ನೆಂದೂ ನುಂಗಬೇಡ.”

ಇದನ್ನ ಕೇಳಿದ ಕುತೂಹಲದಿಂದ “ಅಮ್ಮಾ ಬ್ರಾಹ್ಮಣರನ್ನ ನಾನು ಹೇಗೆ ಗುರುತು ಹಿಡಿಯಲಿ…?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ವಿನತೆ “ಮಗು ಯಾವನನ್ನು ನುಂಗುವಾಗ ನಿನ್ನ ಕಂಠ ಉರಿಯತೊಡಗುತ್ತದೋ ಅವನನ್ನು ಬ್ರಾಹ್ಮಣ ಎಂದು ತಿಳಿ. ಕೂಡಲೇ ಅವನನ್ನು ಕಕ್ಕಿ ಬಿಡು. ಯಾವನನ್ನು ನುಂಗಿಯೂ ನಿನಗೆ ಜೀರ್ಣಿಸಿಕೊಳ್ಳಲಾಗುವುದಿಲ್ಲವೋ ಅಂತವನನ್ನು ಬ್ರಾಹ್ಮಣೋತ್ತಮನೆಂದು ತಿಳಿ ಕೂಡಲೇ ಆತನನ್ನು ಉದರದಿಂದ ಹೊರಹಾಕು.” ಎನ್ನುತ್ತಾಳೆ. ಹೀಗೆ ತಾಯಿಯ ಆಶೀರ್ವಾದ ಪಡೆದು ಅಮೃತ ಸಂಪಾದನೆಗಾಗಿ ತೆರಳುತ್ತಾನೆ.
ಮುಂದುವರೆಯುತ್ತದೆ…

-

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache