ವ್ಯಾಸ ಮಹಾಭಾರತ – ಭಾಗ 19

​ಹೀಗೆ ತಾಯಿ ವಿನತೆಯಿಂದ ಆಶೀರ್ವಾದವನ್ನೂ ಎಚ್ಚರಿಕೆಯ ಸಂದೇಶವನ್ನು ಸ್ವೀಕರಿಸಿದ ಗರುಡ ತನ್ನ ಬಲಿಷ್ಠ ರೆಕ್ಕೆಗಳನ್ನು ಬೀಸುತ್ತಾ ನಿಷಾದ ರಾಜ್ಯದ ಕಡೆ ಹಾರಿದನು.ಅಲ್ಲಿ ತಲುಪಿದವನೇ ತನ್ನ ರೆಕ್ಕೆಗಳನ್ನು ಬಲವಾಗಿ ಬೀಸುತ್ತಾ ತನ್ನ ದೊಡ್ಡದಾದ ಬಾಯನ್ನು ತೆರೆದು ಕುಳಿತನು. ಆತನ ರೆಕ್ಕೆಯ ಬಡಿಯುವಿಕೆಯಿಂದ ದೊಡ್ಡ ಸುಂಟರಗಾಳಿ ಬಂದಂತಾಗಿ ನಿಷಾದರು ದಿಕ್ಕು ಕಾಣದಂತಾಗಿ ಎತ್ತ ಸಾಗುತ್ತಿದ್ದೇವೆ ಅನ್ನೋ ಅರಿವಿಲ್ಲದೇ ನೇರವಾಗಿ ಗರುಡನ ಬಾಯನ್ನ ಪ್ರವೇಶಿಸತೊಡಗಿದರು.

ಹೀಗೆ ಒಬ್ಬೊಬ್ಬರನ್ನೇ ನುಂಗುತ್ತಿರಲು ಹಠಾತ್ತಾಗಿ ಆತನ ಕಂಠ ಉರಿಯತೊಡಗಿತು. ಕೂಡಲೇ ಆತನಿಗೆ ತನ್ನ ತಾಯಿಯ ಎಚ್ಚರಿಕೆ ಮಾತು ನೆನಪಾಗಿ ನುಂಗ ತೊಡಗಿದ್ದ ವ್ಯಕ್ತಿಯನ್ನ ಕುರಿತು “ಹೇ ಬ್ರಾಹ್ಮಣನೇ, ಅರಿಯದೆಯೇ ನಿನ್ನನ್ನು ನುಂಗುವ ಪ್ರಯತ್ನ ಮಾಡಿದೆ, ನನ್ನ ಕ್ಷಮಿಸು ಮತ್ತು ಕೂಡಲೇ ನನ್ನ ಬಾಯಿಯಿಂದ ಹೊರ ಬಾ. ಇದೋ ನಿನಗಾಗಿ ನಾನು ನನ್ನ ಬಾಯನ್ನ ತೆರೆಯುತ್ತೇನೆ.” ಎಂದು ಬಾಯಗಲಿಸಿದನು. ಆಗ ಆ ಬ್ರಾಹ್ಮಣ..”ನನ್ನ ಜೊತೆ ನನ್ನ ನಿ಼ಷಾದ ಪತ್ನಿಯೂ ಇದ್ದಾಳೆ. ಅವಳಿಲ್ಲದೆ ನಾ ಹೇಗೆ ಹೊರಬರಲಿ …?” ಎಂದು ಪ್ರಶ್ನಿಸುತ್ತಾನೆ. ಆಗ ಗರುಡನು “ಸರಿ ನಿನ್ನ ಪತ್ನೀ ಸಮೇತನಾಗಿ ಹೊರ ಬಾ” ಎಂದು ಅವರಿಬ್ಬರನ್ನೂ ಹೊರ ತರಿಸಿ ಬಿಟ್ಟು ಬಿಡುತ್ತಾನೆ. ಇದಾದ ಬಳಿಕ ಅರ್ಧ ತುಂಬಿದ ಹೊಟ್ಟೆಯಿಂದಲೇ ಅಲ್ಲಿಂದ ಹಾರತೊಡಗುತ್ತಾನೆ. ಹೀಗೆ ಹಾರಾಡುತ್ತಿರಲು ಆತನಿಗೆ ದೂರದಲ್ಲಿ ತನ್ನ ತಂದೆಯಾದ ಕಶ್ಯಪರು ಕಾಣಸಿಗುತ್ತಾರೆ. ತಂದೆಯ ಜೊತೆ ಮಾತನಾಡುವ ಸಲುವಾಗಿ ಆತ ಕೆಳಗಿಳಿಯುತ್ತಾನೆ. ಕಶ್ಯಪರು ತನ್ನ ಮಗನ, ಮತ್ತವನ ತಾಯಿಯ ಕುಶಲೋಪಚಾರ ಕೇಳುತ್ತಾನೆ. ಆಗ ಗರುಡನು “ತಾಯಿಯೂ, ನಾನು ತಕ್ಕ ಮಟ್ಟಿಗೆ ಕ್ಷೇಮ. ತಾಯಿಯ ದಾಸ್ಯ ಮುಕ್ತಿಗಾಗಿ ಅಮೃತ ತರಲು ಹೊರಟಿದ್ದೇನೆ. ಆದರೆ ಅದನ್ನು ತರುವರೇ ಶಕ್ತಿಗಾಗಿ ಆಹಾರದ ಹುಡುಕಾಟದಲ್ಲಿದ್ದೇನೆ. ನನಗೆ ಆಹಾರ ಸಾಲುತ್ತಿಲ್ಲ . ನನ್ನ ಹಸಿವನ್ನು ನೀಗಿಸುವ ಆಹಾರ ಎಲ್ಲಿ ಸಿಗುವುದೆಂದು ತಿಳಿಸುವಿರಾ ತಂದೆ.” ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಕಶ್ಯಪರು “ಇಲ್ಲಿಯೇ ಪಕ್ಕದ ಸರೋವರದ ಬಳಿ ಒಂದು ಆನೆ ಮತ್ತೊಂದು ಆಮೆಯಿದೆ. ಇವುಗಳ ನಡುವೆ ಜನ್ಮಾಂತರದ ವೈಷಮ್ಯವಿದೆ. ಅವುಗಳನ್ನು ತಿಂದು ನೀನು ನಿನ್ನ ಹಸಿವನ್ನು ನೀಗಿಸಿಕೊ” ಎನ್ನುತ್ತಾನೆ. ಆಗ ಗರುಡನು “ಜನ್ಮಾಂತರದ ವೈಷಮ್ಯವೇ …? ಏನದು?” ಎಂದು ಕಾತರದಿಂದ ಕೇಳುತ್ತಾನೆ..?

ಹೀಗೆ ಕಶ್ಯಪರು ತನ್ನ ಮಗನಿಗೆ  ಆ ಆಮೆ ಮತ್ತು ಆನೆಯ ಕಥೆಯನ್ನ ಹೇಳತೊಡಗುತ್ತಾರೆ.

“ಮಗು ಈ ಸರೋವರದಲ್ಲಿರುವ ಆಮೆ ಮತ್ತು ಆನೆಗಳು ಪೂರ್ವಜನ್ಮದಲ್ಲಿ” ವಿಭಾವಸು – ಸುಪ್ರತೀಕಗಳೆಂಬ ಹೆಸರಿನ ತಪಸ್ವಿಗಳಾಗಿದ್ದರು. ವಿಭಾವಸುವು ಬಹಳ ಕೋಪಿಷ್ಠ. ಅವನ ತಮ್ಮ ಸುಪ್ರತೀಕನೆಂಬುವನು ಮಹಾತಪಸ್ವಿಯು. ಸುಪ್ರತೀಕನು ಕೋಪಿಷ್ಠನಾದ ಅಣ್ಣನ ಜೊತೆಯಲ್ಲಿರಲು ಇಷ್ಟಪಡದೆ ಆಸ್ತಿಯ ವಿಭಾಗವನ್ನು ಪದೇ ಪದೇ ಕೇಳುತ್ತಿದ್ದನು. ಕೆಲವು ಕಾಲ ಕಳೆದ ನಂತರ ವಿಭಾವಸು ಸುಪ್ರತೀಕನನ್ನು ಕರೆದು ಹೇಳಿದನು.

“ಕೇವಲ ಧನದ ಆಸೆಯಿಂದ ವಿವೇಕಶೂನ್ಯರಾದ ಜನರು ಆಸ್ತಿಯ ವಿಭಾಗವನ್ನು ಕೇಳುತ್ತಾರೆ. ಸಹೋದರರು ವಿಭಾಗವಾದೊಡನೆ ಮೂರನೆಯವರು ಮಧ್ಯಪ್ರವೇಶಿಸಿ ಚಾಡಿ ಮಾತಿನಿಂದ ಸಹೋದರರಲ್ಲಿ ದ್ವೇಷವನ್ನು ಹೆಚ್ಚಿಸುತ್ತಾರೆ. ಹಾಗಾಗಿ ಆಸ್ತಿ ವಿಭಾಗವಾದರೆ ಇಬ್ಬರೂ ನಾಶವಾಗುತ್ತಾರೆ. ವಿವೇಕಿಗಳಾದವರು ಆಸ್ತಿಯ ವಿಭಾಗಕ್ಕೆ ಎಂದೂ ಸಮ್ಮತಿಸುವುದಿಲ್ಲ. ಏಕೆಂದರೆ ವಿಭಾಗದ ನಂತರ ಗುರುಸ್ವರೂಪವಾದ ಶಾಸ್ತ್ರದ ನಿಭಂದನೆಗಳಿಗೆ ಅವರು ಒಳಪಡಲಿಕ್ಕಾಗುವುದಿಲ್ಲ. (ಕನಿಷ್ಠಾನ್ಪುತ್ರವತ್ಪಶ್ಯೇತ್ ಜ್ಯೇಷ್ಠೋ ಭ್ರಾತಾ ಪಿತುಃ ಸಮಃ) ಕನಿಷ್ಠರನ್ನು ಮಕ್ಕಳಂತೆ ನೋಡಿಕೊಳ್ಳಬೇಕೆಂಬ ಮತ್ತು ಹಿರಿಯಣ್ಣನು ತಂದೆಗೆ ಸಮಾನನೆಂಬ ಶಾಸ್ತ್ರದ ಉಲ್ಲಂಘನೆಯಾಗುತ್ತದೆ. ಮತ್ತು ಪರಸ್ಪರ ಸಂಶಯಾಗ್ರಸ್ತರಾಗುತ್ತಾರೆ. ಆದುದರಿಂದ ನೀನೂ ಕೂಡ ಆಸ್ತಿ ವಿಭಾಜಿಸುವ ಆಲೋಚನೆಯನ್ನು ಕೈಬಿಡು ಇಬ್ಬರೂ ಸುಖವಾಗಿ ಬಾಳೋಣ.”

ಅದಕ್ಕೆ ಸುಪ್ರತೀಕನು “ಅಣ್ಣಾ ನಿನ್ನೊಡನೆ ಇರಲು ನನಗೆ ಸಾಧ್ಯವೇ ಇಲ್ಲ. ಆಸ್ತಿ ವಿಭಾಗ ಕೂಡದೆಂಬ ಅಭಿಪ್ರಾಯವಿದ್ದರೆ ಸ್ಮೃತಿಗಳಲ್ಲಿ ಆಸ್ತಿ ವಿಭಾಗದ ಪ್ರಕರಣವೇ ಇರುತ್ತಿರಲಿಲ್ಲ. ನಾವಿಬ್ಬರೂ ಒಟ್ಟಾಗಿ ಇರುವುದಕ್ಕಿಂತ ಬೇರೆಯಾದಲ್ಲಿ ನಮ್ಮ ಪ್ರೀತಿ ಉಳಿಯುವುದು ಎಂದು ನನಗೆ ಅನಿಸುತ್ತದೆ. ಹಾಗಾಗಿ ಆಸ್ತಿ ವಿಭಾಗ ಮಾಡು ಶಾಂತಿಯಿಂದ ಬದುಕೋಣ”

ಈ ಮಾತಿನಿಂದ ಕೋಪಗೊಂಡ ವಿಭಾವಸು “ನನ್ನ ಮಾತನ್ನ ಧಿಕ್ಕರಿಸುತ್ತಾ ಮದದಿಂದ ವರ್ತಿಸುತ್ತಿರುವ ನಿನಗೆ ಆನೆಯ ಜನ್ಮ ಪ್ರಾಪ್ತಿಯಾಗಲಿ.” ಎಂದು ಶಾಪಕೊಡುತ್ತಾನೆ. ತಮ್ಮನೂ ಸುಮ್ಮನಿರದೇ “ವಿಶಾಲ ಮನೋಭಾವವಿಲ್ಲದ ನೀನು ಜಲರಾಶಿಯಡಿಯಲ್ಲಿ ಸಂಚರಿಸುವ ಆಮೆಯಾಗಿ ಹುಟ್ಟು” ಎಂದು ಶಪಿಸುತ್ತಾನೆ.

“ಈ ರೀತಿ ಆಮೆ ಮತ್ತು ಅನೆಯಾಗಿ ಮಹಾಕಾಯರಾಗಿ ಹುಟ್ಟಿದ ಇವರಿಬ್ಬರು ಈಗಲೂ ಪರಸ್ಪರ ಕಾದಾಡುತ್ತಾ ಆಸುಪಾಸಿನ ಪ್ರಾಣಿಗಳಿಗೆ ಪೀಡನೆ ಕೊಡುವವರಾಗಿಬಿಟ್ಟಿದ್ದಾರೆ ಇವರಿಬ್ಬರನ್ನೂ ತಿಂದರೆ ನಿನ್ನ ಹಸಿವು ನೀಗುವುದರಲ್ಲಿ ಸಂಶಯವಿಲ್ಲ. ಹೋಗಿ ಅವರನ್ನ ಭಕ್ಷಿಸಿ ಅಮೃತವನ್ನು ತರಲು ಸಿದ್ಧನಾಗು” ಎನ್ನುತ್ತಾನೆ ಕಶ್ಯಪ.

ಆಮೇಲೇನಾಗುತ್ತದೆ ಗರುಡನು ಅಮೃತವನ್ನು ತಂದನೇ ….? ಇವೆಲ್ಲಾ ಇನ್ನೊಮ್ಮೆ

-ಗುರುಪ್ರಸಾದ್ ಆಚಾರ್ಯ