ವ್ಯಾಸ ಮಹಾಭಾರತ – ಭಾಗ 20 – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 20

​ತನ್ನ ತಂದೆಯಾದ ಕಶ್ಯಪರ ಬಳಿ ತನ್ನ ಹಸಿವು ನೀಗಿಸುವಿಕೆಯ ಉಪಾಯವನ್ನೂ ಶುಭಾಶೀರ್ವಾದವನ್ನು ಸ್ವೀಕರಿಸಿದ ಗರುಡ ತಂದೆ ಹೇಳಿದ ಸರೋವರವನ್ನು ಹುಡುಕುತ್ತಾ ಹಾರಿದನು. ಅನತಿ ದೂರದಲ್ಲಿಯೇ ಸರೋವರವೂ ಮತ್ತು ಬೃಹದಾಕಾರದ ಆನೆ ಮತ್ತು ಆಮೆ ಎರಡೂ ಕಂಡವು. ಕೂಡಲೇ ವೇಗವಾಗಿ ಹಾರಿ ಬಂದು ತನ್ನ ಒಂದು ಕಾಲಲ್ಲಿ ಆಮೆಯನ್ನೂ ಇನ್ನೊಂದು ಕಾಲಲ್ಲಿ ಆನೆಯನ್ನೂ ಹಿಡಿದು ಹಾರತೊಡಗಿ, ಕುಳಿತು ಕೊಳ್ಳಲು ಪ್ರಶಸ್ತವಾದ ಮರವೊಂದನ್ನು ಹುಡುಕತೊಡಗಿದನು.

ಹೀಗೆ ಹಾರುತ್ತಿರುವಾಗ ಆಲಂಬ ತೀರ್ಥಕ್ಷೇತ್ರ ಸಿಕ್ಕಿತು. ಬೇಡಿದ ಫಲಕೊಡುವ ದೇವವೃಕ್ಷಗಳು ಅಲ್ಲಿದ್ದರೂ ಗರುಡನ ದೈತ್ಯ ಗಾತ್ರವನ್ನು ನೋಡಿ, ಈತ ನಮ್ಮ ಮೇಲೆ ಕುಳಿತುಕೊಳ್ಳದಿರಲಪ್ಪಾ ಎಂದು ತಮ್ಮ ತಮ್ಮಲ್ಲಿಯೇ ಮಾತನಾಡತೊಡಗಿ ಭಯಭೀತವಾದವು. ಇದನ್ನ ಕಂಡ ಗರುಡನು ಅವುಗಳ ಮೇಲೆ ಕುಳಿತುಕೊಳ್ಳದೆ ಮುಂದೆ ಹಾರತೊಡಗಿದನು.

ಹೀಗೆ ಮುಂದೆ ಸಾಗುತ್ತಿರುವಾಗ ಬೃಹದಾಕಾರದ ಆಲದ ಮರವೊಂದು “ಹೇ ಪಕ್ಷಿರಾಜನೆ, ನೂರು ಯೋಜನ ವಿಸ್ತೀರ್ಣವುಳ್ಳ ನನ್ನ ರೆಂಬೆಯಲ್ಲಿ ವಿರಮಿಸಿ ನಿನ್ನ ಭೋಜನ ಸ್ವೀಕರಿಸು” ಎಂದಿತು . ಅದರ ಮಾತನ್ನೊಪ್ಪಿ ಖಗರಾಜ ತನ್ನ ಕಾಲನ್ನೂರುತ್ತಿರುವಾಗಲೇ ಪಟ ಪಟನೆ ಸದ್ದುಮಾಡುತ್ತಾ ಆಕೊಂಬೆ ಮುರಿದು ಬೀಳತೊಡಗಿತು. ಸೂಕ್ಷ್ಮವಾಗಿ ನೋಡಲು ಆ ಕೊಂಬೆಯಲ್ಲಿ “ವಾಲಖಿಲ್ಯ” ಅನ್ನೋ ಬ್ರಹ್ಮರ್ಶಿಯೋರ್ವರು ಅಧೋಮುಖರಾಗಿ ತಪವನ್ನಾಚರಿಸುತ್ತಾ ಇರುವುದು ಗರುಡನಿಗೆ ಕಾಣಿಸಿತು. ಕೂಡಲೇ ಗರುಡನು ಆ ನೂರು ಯೋಜನ ವಿಸ್ತೀರ್ಣದ ಕೊಂಬೆಯನ್ನು ತನ್ನ ಕೊಕ್ಕಿನಲ್ಲಿ ಹಿಡಿದು ಹಾರತೊಡಗಿದನು. ವಾಲಖಿಲ್ಯರ ತಪಸ್ಸನ್ನು ಭಂಗಗೊಳಿಸಲೂ ಆಗದೇ , ಕೊಂಬೆಯನ್ನು ಬೀಳಿಸಲೂ ಆಗದೆ ಹಾರಾಡುತ್ತಾ ಉಪಾಯ ಕಾಣದಂತಾಗಿ ನೇರವಾಗಿ ತನ್ನ ತಂದೆಯಿದ್ದ ಗಂಧಮಾದನ ಪರ್ವತದತ್ತ ಹಾರತೊಡಗಿದನು… (ಅಲ್ಲಿಯವರೆಗೆ ಆತ ಪಕ್ಷಿರಾಜ ಎನ್ನುವ ಹೆಸರಿನಿಂದ ಗುರುತಿಸಿ ಕೊಳ್ಳುತ್ತಿದ್ದನಂತೆ. ಗುರುತರವಾದ ಭಾರವನ್ನ ಅಂದರೆ ಕಾಲದಲ್ಲಿ ಎರಡು ಬೃಹದಾಕಾರದ ಆನೆ ಮತ್ತು ಆಮೆ ಮತ್ತು ಕೊಕ್ಕಿನಲ್ಲಿ ನೂರು ಯೋಜನ ವಿಸ್ತೀರ್ಣದ ಕೊಂಬೆ ಅದರಲ್ಲಿ ಅಧೋಮುಖರಾಗಿ ತಪಸ್ಸು ಚರಕ ಸುತ್ತ ಇರುವ ಬ್ರಹ್ಮರ್ಷಿ ಯನ್ನು ಅನಾಯಾಸವಾಗಿ ಹೊತ್ತೊಯ್ಯುವ ಇದನ್ನ ನೋಡಿದ ಮಹರ್ಷಿಗಳು “ಗರುಡ” ಅನ್ನುವ ಹೆಸರು ಕೊಟ್ಟರಂತೆ).

ಗಂಧಮಾದನ ಪರ್ವತದಲ್ಲಿಳಿದ ಗರುಡ ತನ್ನ ತಂದೆಯ ಬಳಿ ತನ್ನ ಪರಿಸ್ಥಿತಿಯನ್ನ ವಿವರಿಸಿ ಹೇಳಿ… ತಾನೇನು ಮಾಡಲಿ ಎಂದು ಕೇಳಿದಾಗ…. ಕಶ್ಯಪರು ವಾಲಖಿಲ್ಯರನ್ನ  ಭಕ್ತಿಯಿಂದ ಸ್ಮರಿಸಿ “ತಾವು ಅಧೋಮುಖರಾಗಿ ನೇತಾಡುತ್ತಿರುವ ಈ ಕೊಂಬೆಯನ್ನ ನನ್ನ ಮಗ ಕೆಳ ಹಾಕುವಂತಿಲ್ಲ… ತಾವೇ ಈ ಕೊಂಬೆಯನ್ನ ತೊರೆದು ನನ್ನ ಮಗನನ್ನ ಹರಸಿ” ಎಂದು ಬೇಡುತ್ತಾರೆ. ವಾಲಖಿಲ್ಯರು ಕಶ್ಯಪರ ಮಾತಿಗೆ ಬೆಲೆಕೊಟ್ಟು ಆ ಕೊಂಬೆಯನ್ನ ತೊರೆದು ಗರುಡನನ್ನ ಹರಸಿ ಹಿಮವತ್ಪರ್ವತಕ್ಕೆ ತಪಸ್ಸಿಗಾಗಿ ತೆರಳುತ್ತಾರೆ. ಆದಾದ ನಂತರ ಗರುಡನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡಿರುವ ಬೃಹತ್ ಕೊಂಬೆಯಲ್ಲಿ ಎಲ್ಲಿ ಎಸೆಯಲಿ…? ಎಂದು ತನ್ನ ತಂದೆಯನ್ನೇ ಕೇಳಲು ದೂರದ ಹಿಮವತ್ಪರ್ವತದ ನಡುವಿನ ಜನ ಸಂಚಾರವಿಲ್ಲದೆಡೆ ಹಾಕಿ ಬಿಡು ಎನ್ನುತ್ತಾನೆ. ಆ ಕೂಡಲೇ ಗರುಡ ವೇಗವಾಗಿ ಹಿಮಾಲಯದ ಪರ್ವತಶ್ರೇಣಿಗಳ ನಡುವೆ ಜನವಿಲ್ಲದ ಕಡೆ ಕೊಂಬೆಯನ್ನ ಕೆಳಕ್ಕೆ ಹಾಕಿ ಒಂದು ಪರ್ವತದ ತುದಿಯಲ್ಲಿ ಕುಳಿತು ದೊಡ್ಡದಾದ ಆನೆ ಮತ್ತು ಆಮೆಯನ್ನ ತಿಂದು ಮುಗಿಸಿ ಶಕ್ತಿಸಂಪನ್ನನಾಗುತ್ತಾನೆ. ಹಸಿವು ನೀಗಿದ ಕೂಡಲೇ ತಡಮಾತ್ರವೂ ವಿಳಂಬ ಮಾಡದೆ ದೇವಲೋಕದತ್ತ ಹಾರುತ್ತಾನೆ….

ಇತ್ತ ದೇವಲೋಕದಲ್ಲಿ ಇಂದ್ರನಿಗೆ ಅನಿಷ್ಟಗಳೇ ಕಾಣಿಸತೊಡಗುತ್ತದೆಯಂತೆ… ಇದನ್ನ ಕಂಡು ಗಾಬರಿಗೊಂಡ ಇಂದ್ರನು ತನ್ನ ಗುರುಗಳಾದ ಬೃಹಸ್ಪತಿಯನ್ನ ಕರೆದು “ಗುರುದೇವಾ ಈ ಅಪಶಕುನಗಳಿಗೆಲ್ಲಾ ಏನು ಕಾರಣ …?” ಎಂದು ಕೇಳುತ್ತಾನೆ

ಅದಕ್ಕೆ ಬೃಹಸ್ಪತಿಗಳು… “ದೇವೇಂದ್ರಾ ನಿನ್ನ ಅಪರಾಧ ಮತ್ತು ಪ್ರಮಾದಗಳಿಂದಲೂ, ವಾಲಖಿಲ್ಯರ ತಪೋಬಲದಿಂದಲೂ ಮಹರ್ಷಿಗಳಾದ ಕಶ್ಯಪರು ಗರುಡನೆಂಬ ಮಹಾಬಲಶಾಲಿಯಾದ ಪುತ್ರನನ್ನ ಪಡೆದಿದ್ದಾರೆ. ಆತ ಈಗ ನಿನ್ನ ಲೋಕದಲ್ಲಿರುವ ಅಮೃತವನ್ನ ಅಪಹರಣ ಮಾಡುವುದಕ್ಕಾಗಿ ಇತ್ತಲೇ ಬರುತ್ತಿದ್ದಾನೆ. ಅದರ ಸೂಚಕವಾಗಿಯೇ ಇವೆಲ್ಲಾ ಅಪಶಕುನಗಳು.” ಎಂದರಂತೆ. ಕೂಡಲೇ ದೇವೇಂದ್ರ ಅಮೃತ ಕಲಶದ ರಕ್ಷಣೆಗೆ ಸಜ್ಜಾಗುವಂತೆ ದೇವತೆಗಳ ಬಳಿ ಹೇಳಿ ತಾನೂ ರಕ್ಷಣೆಗೆ ನಿಲ್ಲುತ್ತಾನೆ.
ಮುಂದಿನದು ಇನ್ನೊಮ್ಮೆ….

ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!