ವ್ಯಾಸ ಮಹಾಭಾರತ – ಭಾಗ 21 – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 21

ಬೃಹಸ್ಪತಿಗಳು ಇಂದ್ರನಿಗೆ ಕಾಣಿಸಿದ ಅಪಶಕುನಗಳಿಗೆ ಕಾರಣ ತಿಳಿಸುತ್ತಾ… ವಾಲಖಿಲ್ಯರ ತಪಸ್ಸಿನ ಫಲದಿಂದ ಕಶ್ಯಪರಿಗೆ ಗರುಡನೆಂಬ ಮಗ ಹುಟ್ಟಿದ್ದಾನೆ ಎನ್ನುವುದನ್ನ ಹೇಳಿರುವುದನ್ನ ನೀವು ಗಮನಿಸಿದ್ದಿರಬಹುದು…. ವಾಲಖಿಲ್ಯರ ತಪಸ್ಸಿನ ಫಲದಿಂದ ಗರುಡ ಹುಟ್ಟಿದ್ದೇ ಎನ್ನುವ ಸಂಶಯ ಹುಟ್ಟಿದ್ದಿರಲೂಬಹುದು…. ಇದರ ಕಥೆಯನ್ನ ಮೊದಲು ತಿಳಿಯೋಣ

ಕಶ್ಯಪರಿಗೆ ವೀರ ಪುತ್ರರನ್ನ ಪಡೆಯುವ ಹಂಬಲ ಬಲು ಹಿಂದೆ ಉಂಟಾಗಿತ್ತಂತೆ… ಅದಕ್ಕಾಗಿ ಅವರು ಯಾಗವೊಂದನ್ನ ಪ್ರಾರಂಭಿಸುತ್ತಾರೆ… ಆ ಯಾಗಕ್ಕೆ ಸಹಾಯಕರಾಗಿ ಇಂದ್ರನೂ ವಾಲಖಿಲ್ಯರೂ ಇದ್ದಿರುತ್ತಾರೆ. ಇಂದ್ರನಿಗೆ ಹೋಮದ್ರವ್ಯ ತರುವ ಜವಾಬ್ದಾರಿ ವಹಿಸಲಾಗಿತ್ತಂತೆ. ವಾಲಖಿಲ್ಯರಿಗೆ ಸಮಿತ್ತು ಗಳನ್ನ ತರೋ ಜವಾಬ್ದಾರಿ. ಇಂದ್ರನೋ ಮಹಾಬಲಶಾಲಿ ಪರ್ವತಾಕಾರದ ಹೊರೆಯ ಹೋಮದ್ರವ್ಯವನ್ನೆಲ್ಲಾ ಅನಾಯಾಸವಾಗಿ ತಂದು ಬಿಡುತ್ತಿದ್ದನಂತೆ ಅದೇ ಬಹಳ ಕಾಲದಿಂದ ಅಲ್ಪಾಹಾರದಿಂದಲೇ ಜೀವಿಸಿ ಕೃಶರಾಗಿದ್ದ ವಾಲಖಿಲ್ಯರಂತ ತಪಸ್ವಿಗಳಿಗೆ ಸಣ್ಣ ಮುತ್ತುಗದ ಕಡ್ಡಿ ತರಲೂ ಕಷ್ಟಪಡಬೇಕಾಗಿ ಬರುತ್ತಿತ್ತಂತೆ. ಅವರ ಕಷ್ಟವನ್ನ ನೋಡಿ ಇಂದ್ರ ಅವರಿಗೆ ಅಪಹಾಸ್ಯ ಮಾಡಿದನಂತೆ. ಇದರಿಂದ ಕೋಪಗೊಂಡ ವಾಲಖಿಲ್ಯರು. ಜಗತ್ತಿಗೆ ಇನ್ನೊಬ್ಬ ಇಂದ್ರನನ್ನ ಪಡೆಯುವಂಥಾ ಮಹಾಯಾಗವೊಂದನ್ನ ಕೈಗೊಂಡರಂತೆ. ಇದರಿಂದ ಭಯಗೊಂಡ ಇಂದ್ರ ಕಶ್ಯಪರ ಬಳಿ ತನ್ನ ಅಳಲನ್ನ ತೋಡಿಕೊಳ್ಳುತ್ತಾನೆ.

ಕಶ್ಯಪರು ಇಂದ್ರನನ್ನು ಸಂತೈಸಿ ವಾಲಖಿಲ್ಯರ ಯಾಗದ ಬಳಿ ಹೋಗಿ ವಿನಮ್ರರಾಗಿ… “ವಾಲಖಿಲ್ಯರೇ ತಾವಿದೇನನ್ನ ಮಾಡುತ್ತಿರುವಿರಿ, ಇನ್ನೊಬ್ಬ ಇಂದ್ರನನ್ನ ಪಡೆಯುವುದು ಸರಿಯೇ…? ” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವಾಲಖಿಲ್ಯರು ” ಇನ್ನೊಬ್ಬ ಇಂದ್ರನನ್ನ ಪಡೆಯುವುದರಲ್ಲೇನು ತಪ್ಪು…?” ಎನ್ನುತ್ತಾರೆ. ಆಗ ಕಶ್ಯಪರು “ತ್ರಿಲೋಕಗಳಿಗೆ ಒಬ್ಬನೇ ಇಂದ್ರ ಎನ್ನುವುದು ಸೃಷ್ಟಿಕರ್ತ ಬ್ರಹ್ಮನ ನಿಯಮ. ತಾವು ಇನ್ನೊಬ್ಬ ಇಂದ್ರನನ್ನ ಪಡೆದಲ್ಲಿ ಅದು ಬ್ರಹ್ಮನ ನಿಯಮದ ಉಲ್ಲಂಘನೆ ಆಗುವುದಿಲ್ಲವೇ…?” ಎಂದು ಹೇಳುತ್ತಾರೆ.

ಆಗ ವಾಲಖಿಲ್ಯರ ಆ ಕುರಿತಾಗಿ ಶಾಂತರಾಗಿ ಯೋಚಿಸಿ “ಈ ತಪಸ್ಸಿನ ಫಲವನ್ನು ನೀವೇ ಸ್ವೀಕರಿಸಿ, ನಿಮಗೇ ಇಂದ್ರನಂತಾ ಪುತ್ರ ಜನಿಸಲಿ. ಆತನ ಬದುಕನ್ನು ನೀವೇ ನಿರ್ಣಯಿಸಿ” ಎಂದು ತಪಸ್ಸಿನ ಫಲವನ್ನು ಕಶ್ಯಪರಿಗೆ ಕೊಟ್ಟು ತೆರಳುತ್ತಾರೆ. ಇದರ ಫಲವಾಗಿ ಕಶ್ಯಪರು ವಿನತೆಯಿಂದ ಇಬ್ಬರು ಮಕ್ಕಳನ್ನು ಪಡೆಯುತ್ತಾರೆ. ಆ ಹೊತ್ತಿಗೆ ಕಶ್ಯಪರು ಇಂದ್ರನ ಬಳಿ “ಹೇ ಇಂದ್ರ ನೀನು ಭಯವನ್ನು ಬಿಟ್ಟು ಬಿಡು, ಇನ್ನು ಮುಂದಾದರೂ ತಪಸ್ವಿಗಳನ್ನ ಅಣಕಿಸುವುದನ್ನ ಬಿಟ್ಟು ಬಿಡು. ನನ್ನ ಮಗ ಪಕ್ಷಿ ಕುಲದ ಇಂದ್ರನಾಗುತ್ತಾನೆ. ನಿನ್ನ ಪಟ್ಟಕ್ಕೆ ನನ್ನ ಮಕ್ಕಳು ಎಂದು ಆಕಾಂಕ್ಷಿಗಳಾಗೋದಿಲ್ಲ. ಆದರೆ ನೀನು ಅವರಿಗೆ ಯಾವುದೇ ಅನ್ಯಾಯ ಮಾಡಕೂಡದು. ಅಲ್ಲಿಯವರೆಗೆ ನೀನು ನಿಶ್ಚಿಂತನಾಗಿರಬಹುದು.” ಎಂದು ಅವನನ್ನ ಸಂತೈಸುತ್ತಾರೆ.

ಇದು ಗರುಡ ಜನನಕ್ಕೆ ಇಂದ್ರನ ಅಪರಾಧ ಕಾರಣವಾಗಿದ್ದ ಕತೆ… ಇನ್ನು ಅಮೃತ ಹರಣಕ್ಕಾಗಿ ಹೊರಟ ಗರುಡನಿಗೆ ಯಶಸ್ಸು ಸಿಕ್ಕಿತೇ…? ಎನ್ನುವ ಪ್ರಶ್ನೆಗೆ ಉತ್ತರ ಇನ್ನೊಮ್ಮೆ ನೋಡೋಣ

-ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!