ವ್ಯಾಸ ಮಹಾಭಾರತ – ಭಾಗ 22 – News Mirchi

ವ್ಯಾಸ ಮಹಾಭಾರತ – ಭಾಗ 22

ಅಮೃತ ಹರಣಕ್ಕಾಗಿ ಗರುಡ ದೇವಲೋಕಕ್ಕೆ ಬಂದಾಗ ಅಲ್ಲಿ ಇಂದ್ರನ ಸೇನೆ ಸಜ್ಜಾಗಿತ್ತಂತೆ ಅಮೃತ ಕಲಶದ ರಕ್ಷಣೆಗೆ ಎಲ್ಲರೂ ಸಿದ್ಧವಾಗಿಯೇ ಇದ್ದರಂತೆ. ಆದರೂ ಗರುಡನ ಪರಾಕ್ರಮದ ಎದುರು ಎಲ್ಲರ ಶಕ್ತಿಯೂ ಗೌಣವಾಗತೊಡಗಿತು. ಗರುಡನ ಕುಕ್ಕುವಿಕೆಯಿಂದ ಪರಚುವಿಕೆಯಿಂದ ಅವರೆಲ್ಲಾ ಕಕ್ಕಾಬಿಕ್ಕಿಯಾಗಿ ಓಡತೊಡಗಿದರು. ಇವರೆಲ್ಲರನ್ನೂ ಸೋಲಿಸುತ್ತಿದ್ದರೂ ಅಮೃತವು ಸುಲಭವಾಗಿ ದಕ್ಕುವಂತಿರಲಿಲ್ಲ. ಅಮೃತಕಲಶದ ಸುತ್ತಲೂ ಅಕಾಶವ್ಯಾಪಿಯಾಗಿದ್ದ ಅಗ್ನಿಜ್ವಾಲೆಗಳಿದ್ದವು. ಅದನ್ನ ಭೇದಿಸಿ ಹೋಗುವುದು ಅಸಾಧ್ಯವೇ ಆಗಿತ್ತು. ಆಗ ಗರುಡ ಹಲವು ನದಿಗಳ ನೀರನ್ನ ತನ್ನ ಅಗಾಧವಾದ ಬಾಯಿಯಲ್ಲಿ ತಂದು ಅಗ್ನಿಯ ಮೇಲೆ ಸುರಿಸಿ ಅಗ್ನಿಯನ್ನ ನಂದಿಸಿ ಮುಂದುವರೆಯುತ್ತಾನೆ.

ಅದರ ನಂತರ ಹರಿತವಾದ ಅಲಗುಗಳಿಂದ ಕೂಡಿದ ಚಕ್ರವೊಂದು ಅಮೃತ ಕಲಶದ ಸುತ್ತ ವೇಗವಾಗಿ ಸುತ್ತುತ್ತಿತ್ತು. ಅದರ ಬಳಿ ಸುಳಿದರೇನೆ ಚೂರು ಚೂರು ಮಾಡುವ ಸಾಧ್ಯತೆ ಇದ್ದಿತ್ತು. ಕೂಡಲೇ ಗರುಡನು ತನ್ನ ಶರೀರವನ್ನ ಕುಗ್ಗಿಸಿ ಅತ್ಯಂತ ಸೂಕ್ಷ್ಮವನ್ನಾಗಿಸಿ ಚಕ್ರದ ಅರೆಕಾಲುಗಳ ಮಧ್ಯದಿಂದ ಪ್ರವೇಶಿಸುತ್ತಾನೆ. ಅದಾಗಿಯೂ ಅಮೃತದ ಸುರಕ್ಷತೆ ಮುಗಿದಿರಲಿಲ್ಲ. ಅಗ್ನಿಗೆ ಸಮವಾಗಿದ್ದ ಘಟಸರ್ಪಗಳೆರಡು ಅಮೃತದ ಕಾವಲಿಗೆ ನಿಯೋಜಿತವಾಗಿದ್ದವು… ಅವುಗಳ ದೃಷ್ಟಿ ಬಿದ್ದರೇನೆ ಸುಟ್ಟು ಭಸ್ಮವಾಗಿಬಿಡಬೇಕಿತ್ತು ಅಂತ ಭೀಕರ ಸರ್ಪಗಳು. ನಿರಂತರ ವಿಷವನ್ನು ಕಾರುತ್ತಲೇ ಇದ್ದವು. ಆದರೆ ಗರುಡ ಅವುಗಳ ಕಣ್ಣಿಗೆ ಮಣ್ಣೆರಚಿ ಅವುಗಳನ್ನ ಹತ್ಯೆಗೈದು ಅಮೃತ ಕಲಶವನ್ನ ಸಂಪಾದಿಸಿಯೇ ಬಿಡುತ್ತಾನೆ….

ಅಮೃತ ಕಲಶ ಸಂಪಾದಿಸಿದ ಕೂಡಲೇ ಗರುಡ ನೇರವಾಗಿ ತನ್ನ ತಾಯಿಯ ಬಳಿ ತಲುಪಿ ಆಕೆಯನ್ನ ದಾಸ್ಯದಿಂದ ಮುಕ್ತಳನ್ನಾಗಿಸಬೇಕು ಎಂದು ಯೋಚಿಸಿ ಅತ್ತ ಹಾರತೊಡಗುತ್ತಾನೆ. ತನ್ನ ಪರಾಕ್ರಮದಿಂದ ಅಮೃತ ಸಂಪಾದಿಸಿಯೂ ಅದನ್ನ ಕುಡಿದು ಅಮರನಾಗುವ ಯೋಚನೆಯನ್ನ ಗರುಡ ಮಾಡಲೇ ಇಲ್ಲ . ತನ್ನ ಉದ್ದೇಶವಾದ ಮಾತೃ ದಾಸ್ಯ ವಿಮೋಚನೆಗೇನೇ ಮೊದಲ ಪ್ರಾಶಸ್ತ್ಯ ಕೊಟ್ಟ. ಗರುಡನ ಈ ನಿಲುವನ್ನು ಕಂಡ ಮಹಾವಿಷ್ಣು ಸಂತುಷ್ಟನಾಗಿ, ತಾಯಿ ಇರುವಲ್ಲಿಗೆ ಹಾರಿ ಹೋಗುತ್ತಿದ್ದ ಗರುಡನನ್ನ ತಡೆದು “ಹೇ, ಪಕ್ಷಿರಾಜ ನಿನ್ನ ಈ ಕಾರ್ಯವನ್ನು ಕಂಡು ಮೆಚ್ಚಿದೆ. ನಿನಗೇನು ವರ ಬೇಕೋ ಕೇಳಿಕೋ …?” ಅನ್ನುತ್ತಾನೆ.

ಆಗ ಗರುಡನು “ನಾನು ನಿನಗಿಂತಲೂ ಉನ್ನತ ಸ್ಥಾನದಲ್ಲಿರಬೇಕು ಮತ್ತು ಅಮೃತ ಸೇವಿಸದೇ ಹೋದರೂ ಚಿರಾಯುವಾಗಿ ನಿರೋಗಿಯಾಗಿರುವಂತೆ ಅನುಗ್ರಹಿಸು ” ಅನ್ನುತ್ತಾನೆ. ಆಗ ವಿಷ್ಣು” ಹಾಗೆಯೇ ಆಗಲಿ “ಎಂದು ವರ ಕೊಡುತ್ತಾನೆ. ಇದಾದ ಕೂಡಲೇ ಗರುಡನೂ ವಿಷ್ಣುವಿನ ಬಳಿ” ನಾನೂ ನಿನಗೆ ವರ ಕೊಡಲಿಚ್ಛಿಸಿದ್ದೇನೆ ಎಲ್ಲವನ್ನೂ ಹೊಂದಿದವನಾಗಿಯೂ ಏನಾದರೂ ಕೇಳಿ ನನ್ನನ್ನ ಕೃತಾರ್ಥನನ್ನಾಗಿಸು” ಅನ್ನುತ್ತಾನೆ. ಆಗ ವಿಷ್ಣುವು “ನೀನು ನನ್ನ ವಾಹನವಾಗಿರಬೇಕು” ಎನ್ನುತ್ತಾನೆ. ಅದಕ್ಕೆ ಗರುಡ ಆದೀತು ಅನ್ನುತ್ತಾನೆ.

ಭಗವಂತನ ಲೀಲೆ ನೋಡಿ… ಗರುಡನು ವಿಷ್ಣುವಿನ ಮೇಲಿರಬೇಕೆಂದು ಕೇಳಿಕೊಳ್ಳುತ್ತಾನೆ , ಆದರೆ ವಾಹನವಾಗಿ ವಿಷ್ಣುವಿನ ಕೆಳಗೇ ಇರಬೇಕಾಯಿತು. ಆದರೆ ವಿಷ್ಣುವು ತನ್ನ ಧ್ವಜದಲ್ಲಿ ಗರುಡನನ್ನಿರಿಸಿ ಆತನಿಗೆ ಕೊಟ್ಟ ವರವನ್ನು ಹುಸಿಯಾಗದಂತೆ ನೋಡಿಕೊಳ್ಳುತ್ತಾನೆ.

ಇದಾದ ಮೇಲೆ ಏನಾಯಿತು..? ವಿನತೆ ದಾಸ್ಯ ದಿಂದ ಮುಕ್ತಳಾದಳೇ…? ಸರ್ಪಗಳು ಅಮರವಾದವೇ..? ಇದನ್ನ ಇನ್ನೊಮ್ಮೆ ನೋಡೋಣ.

-ಗುರುಪ್ರಸಾದ್ ಆಚಾರ್ಯ

 

Loading...

Leave a Reply

Your email address will not be published.