ವ್ಯಾಸ ಮಹಾಭಾರತ – ಭಾಗ 23

ಸಾಕ್ಷಾತ್ ವಿಷ್ಣುವಿನಿಂದ ಅನುಗ್ರಹಿತನಾಗಿ ಇನ್ನೇನು ತಾಯಿಯ ಬಳಿ ಹೋಗಬೇಕು ಅಂತ ಗರುಡ ಸನ್ನದ್ಧನಾಗುವ ಹೊತ್ತಿಗೆ ಇಂದ್ರ ಅಲ್ಲಿಗೆ ಬಂದು ಅಮೃತಹರಣದ ತಪ್ಪಿಗಾಗಿ ತನ್ನ ವಜ್ರಾಯುಧದಿಂದ ಗರುಡನ ಮೇಲೆ ಪ್ರಹಾರ ಮಾಡಿಯೇ ಬಿಡುತ್ತಾನೆ. ಆದರೆ ಇದರಿಂದ ಗರುಡನಿಗೇನೂ ಆಘಾತ ವಾಗೋದಿಲ್ಲ. ಆಗ ಗರುಡ ಇಂದ್ರನ ಬಳಿ ಹೇಳುತ್ತಾನೆ.
“ಹೇ ಮಹೇಂದ್ರ ನಿನ್ನ ವಜ್ರಾಯುಧದ ಪ್ರಹಾರ ನನ್ನನ್ನೇನೂ ಮಾಡಲಾರದು. ಆದರೂ ಈ ವಜ್ರಾಯುಧ ಮಹರ್ಷಿ ಧಧೀಚಿಯವರ ತ್ಯಾಗದ ಪ್ರತಿರೂಪ. ಅದಕ್ಕೆ ಗೌರವ ಕೊಡುವ ಸಲುವಾಗಿ ಇದೋ ನನ್ನ ಒಂದು ಗರಿಯನ್ನ ಉದುರಿಸುತ್ತೇನೆ.” ಎಂದು ತನ್ನ ರೆಕ್ಕೆಯಿಂದ ಒಂದು ಗರಿಯನ್ನ ಉದುರಿಸುತ್ತಾನೆ.

ರುಡನ ಶಕ್ತಿಯನ್ನು ಕಂಡ ಇಂದ್ರ ಈತನನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದು “ಹೇ ಪಕ್ಷಿರಾಜ, ನಿನ್ನ ಅತುಲ್ಯ ಪರಾಕ್ರಮವನ್ನ ಕಂಡು ನಾನು ಆಶ್ಚರ್ಯ ಚಕಿತನಾಗಿದ್ದೇನೆ. ಹಾಗೂ ಸದಾ ಒಳಿತಿನ ಪರವಾಗೇ ನಿಲ್ಲುವ ನಾನು ಈ ಕಾರ್ಯಕ್ಕಾಗಿ ನಿನ್ನ ಸ್ನೇಹವನ್ನು ಬಯಸುತ್ತಿದ್ದೇನೆ. ಅದರ ಜೊತೆಗೆ ನಿನಗೆ ವರವೊಂದನ್ನೂ ದಯಪಾಲಿಸಲು ಇಚ್ಛುಕನಾಗಿದ್ದೇನೆ. ಕೇಳಿಕೋ ನಿನಗೇನು ಬೇಕೆಂದು” ಅನ್ನುತ್ತಾನೆ.
ಆಗ ಗರುಡನು ನಸು ನಗುತ್ತಾ “ಹೇ ಮಹೇಂದ್ರಾ, ನಿನ್ನ ಸ್ನೇಹವನ್ನು ನಾನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಇನ್ನು ನಿನ್ನ ವರದ ಅಗತ್ಯತೆ ನನಗಿಲ್ಲವಾದರೂ ನಿನ್ನ ಸಂತೃಪ್ತಿಗಾಗಿ ಕೇಳಿಕೊಳ್ಳುತ್ತೇನೆ. ನನ್ನನ್ನು ಸದಾ ಸರ್ಪಾಹಾರಿಯನ್ನಾಗಿ ಮಾಡು” ಅನ್ನುತ್ತಾನೆ.

ಅದಕ್ಕೊಪ್ಪಿ “ತಥಾಸ್ತು”ಎಂದ ಇಂದ್ರ ಮೆಲ್ಲನೆ ಗರುಡನ ಬಳಿ “ಹೇ ಪ್ರಿಯಸಖ, ಈ ಅಮೃತವು ಪಾಪಿಗಳ ಕೈ ಸೇರಿದರೆ ಲೋಕಕ್ಕೇ ಕಂಟಕ ಉಂಟಾಗೋ ಸಾಧ್ಯತೆ ಇಲ್ಲದ್ದಿಲ್ಲ. ನಿನಗೂ ಬೇಡವಾಗಿರೋ ಈ ಅಮೃತವನ್ನ ಹಿಂತಿರುಗಿಸಲಾರೆಯಾ….??” ಎಂದು ತನ್ನ ಆತಂಕವನ್ನ ತೋಡಿಕೊಳ್ಳುತ್ತಾನೆ.

ದೇವೇಂದ್ರನ ಮಾತಿಗೆ ಉತ್ತರ ಕೊಡುತ್ತಾ ಗರುಡ ಹೇಳುತ್ತಾನೆ. “ನಿಜ ಮಿತ್ರ, ನನಗೀ ಅಮೃತ ಬೇಕಾಗಿಲ್ಲ, ಹಾಗಂತ ನಾನಿದನ್ನ ನಿನಗೆ ಈಗಲೇ ಹಿಂತಿರುಗಿಸಲಾರೆ. ಇದರಿಂದ ನನ್ನದೊಂದು ಕಾರ್ಯ ನೆರವೇರಬೇಕಾಗಿದೆ. ಅದಾದ ಕೂಡಲೇ ನಾನು ನಿನಗೆ ಸೂಚನೆ ನೀಡುತ್ತೇನೆ. ಆಗ ನೀನೀ ಅಮೃತ ಕಲಶವನ್ನ ಕೊಂಡೊಯ್ದುಬಿಡು.” ಗರುಡನ ಮಾತಿಗೆ ಹರ್ಷ ಪಡುತ್ತಾ ಇಂದ್ರ “ಆದೀತು” ಎನ್ನುತ್ತಾನೆ.

ಇದಾದ ಬಳಿಕ ಗರುಡ ನೇರವಾಗಿ ತನ್ನ ತಾಯಿಯ ಬಳಿ ಹೋಗಿ ಸರ್ಪಗಳನ್ನೆಲ್ಲಾ ಕರೆಸಿ ಧರ್ಭೆಯ ಮೇಲೆ ಅಮೃತ ಕಲಶವನ್ನಿರಿಸಿ… “ಹೇ ಸರ್ಪಗಳಿರಾ ನಿಮಗಿತ್ತ ವಾಗ್ದಾನದಂತೆ ಅಮೃತ ಕಲಶವನ್ನ ತಂದಿದ್ದೇನೆ. ನನ್ನ ತಾಯಿಯ ದಾಸ್ಯವನ್ನ ಈಗ ನೀವೆಲ್ಲಾ ಕೊನೆಗೊಳಿಸಿ ನಮ್ಮನ್ನು ಮುಕ್ತರನ್ನಾಗಿ ಮಾಡಿ. ಆ ಬಳಿಕ ಸ್ನಾನ ಮುಗಿಸಿ ಶುಚಿರ್ಭೂತರಾಗಿ ಈ ಅಮೃತವನ್ನ ಸ್ವೀಕರಿಸಿ” ಅನ್ನುತ್ತಾನೆ. ಕೂಡಲೇ ಸರ್ಪಗಳು “ನೀನು ಮತ್ತು ನಿನ್ನ ತಾಯಿ ಇನ್ನು ನಮ್ಮ ದಾಸರಲ್ಲ. ನಿಮ್ಮನ್ನು ದಾಸ್ಯದಿಂದ ಮುಕ್ತರನ್ನಾಗಿಸಿದ್ದೇವೆ” ಎಂದು ಆತುರದಿಂದ ಸ್ನಾನ ಮಾಡಲು ತೆರಳುತ್ತಾರೆ.

ಇದೇ ಸಂಧರ್ಭದಲ್ಲಿ ಗರುಡನು ದೇವೇಂದ್ರನಿಗೆ ಸೂಚನೆ ನೀಡಲು ದೇವೇಂದ್ರ ಅಮೃತಕಲಶವನ್ನ ಅಪಹರಿಸಿ ಬಿಡುತ್ತಾನೆ. ಇತ್ತ ಸ್ನಾನ ಮುಗಿಸಿ ಬಂದ ಸರ್ಪಗಳಿಗೆ ತಾವು ಮೋಸ ಹೋದ ವಿಚಾರ ಅರಿವಾಗುತ್ತದೆ. ತಾವು ಮಾಡಿದ ಮೋಸಕ್ಕೆ ತಕ್ಕ ಪ್ರತಿಫಲ ಸಿಕ್ಕಿತೆಂದು ಬೇಸರಿಸಿದರೂ ಧರ್ಭೆಯ ಮೇಲೆ ಅಮೃತವೇನಾದರೂ ಬಿದ್ದಿರಬಹುದೆಂಬ ಭ್ರಮೆಯಲ್ಲಿ ಧರ್ಭೆಯನ್ನ ನೆಕ್ಕಿ ನೋಡಲನುವಾಗಿ ತಮ್ಮ ನಾಲಗೆಯನ್ನೇ ಸೀಳಿಸಿಕೊಂಡು ಬಿಡುತ್ತವೆ. ಆದರೂ ಅವುಗಳಿಗೆ ಅಮೃತತ್ವ ಸಿಗುವುದಿಲ್ಲ. ಆದರೆ ಒಂದಷ್ಟು ಹೊತ್ತು ಅಮೃತದ ಜೊತೆ ಇದ್ದ ಕಾರಣ ಧರ್ಭೆ ಪವಿತ್ರವಾಗಿ “ಪವಿತ್ರೀ” ಅಂತನಿಸಿಕೊಳ್ಳುತ್ತದೆ.

ಈ ಉಪಕಥೆ ಇಲ್ಲಿಗೆ ಮುಗಿಯುತ್ತದೆ. ಮುಂದೆ ಬೇರೇನು….? ಇನ್ನೊಮ್ಮೆ ನೋಡೋಣ

-ಗುರುಪ್ರಸಾದ್ ಆಚಾರ್ಯ