ವ್ಯಾಸ ಮಹಾಭಾರತ – ಭಾಗ 24

ಆದಿಶೇಷನ ಕಥೆ

ಕದ್ರುವಿನ ಹೊಟ್ಟೆಯಲ್ಲಿ ಹುಟ್ಟಿದ ಹೆಚ್ಚಿನ ಸರ್ಪಗಳು ಕ್ರೂರಿಗಳಾಗಿದ್ದವು. ಆದರೆ ಅವುಗಳೆಲ್ಲದರ ಹಿರಿಯಣ್ಣನಾದ ಶೇಷ ಇದಕ್ಕೆ ವ್ಯತಿರಿಕ್ತವಾಗಿದ್ದನಂತೆ. ತನ್ನ ಅನುಜರ ಈ ದುರ್ವರ್ತನೆ ನೋಡಿ ಬೇಸತ್ತ ಶೇಷ ಎಲ್ಲರಿಂದಲೂ ದೂರ ಸರಿದು ಹಿಮವತ್ಪರ್ವತದಲ್ಲಿ ಘೋರ ತಪಸ್ಸು ಮಾಡತೊಡುಗುತ್ತಾನೆ. ಹೀಗೆ ಕೇವಲ ವಾಯು ಭಕ್ಷಣ ಮಾಡಿ ತಪವನ್ನಾಚರಿಸುತ್ತಾ ಕೃಶಕಾಯನಾಗುತ್ತಾನೆ ಆದರೂ ಆತನ ತಪಸ್ಸಿನ ಜ್ವಾಲೆಯಿಂದ ಲೋಕದ ಜನರಿಗೆ ಸಂಕಟವಾಗತೊಡುತ್ತದೆ. ಆಗ ಬ್ರಹ್ಮ ದೇವ ಪ್ರತ್ಯಕ್ಷನಾಗಿ “ಹೇ ಶೇಷ ನಿನ್ನ ಘೋರ ತಪಸ್ಸಿಗೆ ಮೆಚ್ಚಿದ್ದೇನೆ. ನಿನಗೇನು ವರ ಬೇಕೋ ಕೇಳಿಕೋ” ಅನ್ನುತ್ತಾನೆ.

ಆಗ ಶೇಷ “ಹೇ ಬ್ರಹ್ಮ ದೇವ ನನ್ನ ಅನುಜರ ದುರ್ವರ್ತನೆಯಿಂದ ಬೇಸತ್ತು ತಪಸ್ಸಿನ ಮೊರೆ ಹೋದೆನೇ ಹೊರತು ಯಾವುದೋ ಆಕಾಂಕ್ಷೆಗಳಿಗಾಗಿ ತಪಸ್ಸಾಚರಿಸುತ್ತಿಲ್ಲ. ಅನುಜರ ಜೊತೆ ಸಂಬಂಧ ಇಟ್ಟುಕೊಂಡಿರುವ ಈ ಶರೀರದ ಬಗ್ಗೆಯೇ ನನಗೆ ಜಿಗುಪ್ಸೆ ಇದೆ. ಹಾಗಾಗಿ ನನಗೇನೂ ವರ ಬೇಕಾಗಿಲ್ಲ ಕೊಡುವುದಾದರೆ ನನ್ನ ಬುದ್ದಿ ಸದಾ ಧರ್ಮದಲ್ಲಿ ನೆಲೆಗೊಳ್ಳುವಂತೆ ಮಾಡು” ಅನ್ನುತ್ತಾನೆ.

ಇದರಿಂದ ಅತ್ಯಂತ ಪ್ರಸನ್ನನಾದ ಬ್ರಹ್ಮ “ತಥಾಸ್ತು” ಎನ್ನುತ್ತಾ… “ಹೇ ಶೇಷ ನಿನ್ನಿಂದ ನನ್ನ ಸೃಷ್ಟಿ ಕಾರ್ಯಕ್ಕೊಂದು ಸಹಾಯವಾಗಬೇಕಾಗಿದೆ. ಅನಂತವಾದ ಭಾರವನ್ನ ಹೊತ್ತಿರುವ ಭೂದೇವಿಯನ್ನ ನೀನು ಹೊರಬೇಕು.” ಎನ್ನುತ್ತಾನೆ. ತನ್ನ ಕೃಶ ಶರೀರವನ್ನು ಕಂಡೂ ಬ್ರಹ್ಮ ಸಹಾಯ ಕೇಳಿದ್ದಾನೆ ಅಂತಂದರೆ ಆ ಶಕ್ತಿಯನ್ನ ದೇಹವನ್ನು ಆತ ದಯಪಾಲಿಸುತ್ತಾನೆ ಎಂದು ಮನಸ್ಸಿನಲ್ಲಿಯೇ ಆಲೋಚಿಸಿ “ಆದೀತು, ಭೂದೇವಿಯನ್ನ ನನ್ನ ಹೆಡೆಯ ಮೇಲಿರಿಸಿ ಬ್ರಹ್ಮದೇವ”ಅನ್ನುತ್ತಾನೆ. ಹೀಗೆ ಶೇಷ ಭೂಮಿಯನ್ನ ಹೊತ್ತು ಬ್ರಹ್ಮನ ಸೃಷ್ಟಿಗೆ ಆಧಾರವಾಗುತ್ತಾನೆ..

ಸರ್ಪಸಂತಾನದಲ್ಲಿ ಅಗ್ರಜನಾದ ಶೇಷನೇನೋ ತಪಸ್ಸಿನ ಮೂಲಕ ಬ್ರಹ್ಮನನ್ನ ಒಲಿಸಿ, ಬ್ರಹ್ಮನದೇ ಆದೇಶದಂತೆ ಸೃಷ್ಟಿ ಕಾರ್ಯದಲ್ಲಿ ಸಹಾಯಕನಾಗುವ ಕಾಯಕದಲ್ಲಿ ನಿರತನಾದ. ಆತ ತನ್ನ ಅನುಜರನ್ನ ತೊರೆದ ಬಳಿಕ ಎರಡನೆಯವನಾದ ವಾಸುಕಿಯು ಅಣ್ಣ ಶೇಷನ ಜವಾಬ್ದಾರಿಗಳನ್ನು ವಹಿಸಿಕೊಂಡ. ಆತನಿಗೂ ತಮಗೊದಗಿ ಬರಲಿರುವ ತಾಯಿ ಕದ್ರುವಿನ ಶಾಪದ್ದೇ ಚಿಂತೆ ಕಾಡುತ್ತಿತ್ತು.

ಈ ಶಾಪದಿಂದ ಹೇಗೆ ವಿಮೋಚನೆ ಪಡೆಯೋದು…? ಅನ್ನುವುದರ ಕುರಿತು ಚರ್ಚಿಸಲು ವಾಸುಕಿ ಒಮ್ಮೆ ತನ್ನ ಎಲ್ಲಾ ಅನುಜರನ್ನ ಒಂದೆಡೆ ಸೇರಿಸುತ್ತಾನೆ. ಎಲ್ಲರೂ ಸೇರಿದ ಬಳಿಕ ತಮ್ಮಂದಿರನ್ನ ಉದ್ದೇಶಿಸಿ ಹೇಳುತ್ತಾನೆ…. “ತಮ್ಮಂದಿರಾ ನಮ್ಮ ತಾಯಿ ನಮಗಿತ್ತ ಶಾಪದ ವಿಮೋಚನೆಯ ಕುರಿತು ಚರ್ಚಿಸಲು ನಾವಿಂದು ಸೇರಿದ್ದೇವೆ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಒಂದಷ್ಟು ಜನರ ಸಲಹೆ ಪಡೆದರೆ ಅದು ಉತ್ತಮ ಎಂದು ಹಿರಿಯರು ಹೇಳುತ್ತಾರೆ. ಈ ನಿಟ್ಟಿನಲ್ಲಿ ನೀವೆಲ್ಲಾ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ…”

ಆಗ ಒಬ್ಬೊಬ್ಬರಾಗಿ ಒಂದೊಂದು ಸಲಹೆ ಕೊಡತೊಡುತ್ತಾರೆ. ನಾವು ಬ್ರಾಹ್ಮಣ ವೇಷ ಧರಿಸಿ ಯಾಗವನ್ನ ನಿಲ್ಲಿಸುವಂತೆ ಕೇಳೋಣ, ಕುರುವಂಶಜರು ಬ್ರಾಹ್ಮಣರ ಯಾಚನೆಯನ್ನು ತಿರಸ್ಕರಿಸಲಾರರು; ನಮ್ಮಲ್ಲಿ ಸಮರ್ಥರು ಹೋಗಿ ಯಜ್ಞ ನಡೆಸಿಕೊಡುವ ಪುರೋಹಿತ, ಋತ್ವಿಜರನ್ನೇ ಕಚ್ಚಿ ಸಾಯಿಸೋಣ; ರಾಜ ಜನಮೇಜಯನನ್ನೇ ಕಚ್ಚಿ ಸಾಯಿಸೋಣ; ನಾವು ಮೆಲ್ಲಗೆ ತೆರಳಿ ಹೋಮ ಪಾತ್ರೆಯನ್ನೇ ಅಪಹರಿಸೋಣ; ನಾವೆಲ್ಲರೂ ಯಾಗ ನಡೆಯುವಾಗಲೇ ಏಕಕಾಲಕ್ಕೆ ದಾಳಿ ಮಾಡಿ ಎಲ್ಲರನ್ನು ಕಚ್ಚಿ ಕಚ್ಚಿ ಸಾಯಿಸೋಣ….ಹೀಗೆ ಒಬ್ಬೊಬ್ಬರು ಒಂದೊಂದು ಸಲಹೆ ಕೊಡತೊಡಗಿದರು. ಆದರೆ ಇದಾವುದೂ ವಾಸುಕಿಯ ಮನಸ್ಸಿಗೆ ರುಚಿಸಲಿಲ್ಲ. ಹಾಗಾಗಿ ಕೊನೆಯಲ್ಲಿ ಆತ ತಮ್ಮಂದಿರ ಬಳಿ ಹೇಳುತ್ತಾನೆ… ” ನಿಮ್ಮ ಸಲಹೆಗಳನ್ನ ಕೇಳಿ ತೀರ್ಮಾನ ಕೈಗೊಳ್ಳಲಾಗುತ್ತಿಲ್ಲ. ಇದಾವುದೂ ಸರಿಯಾದ ಉಪಾಯವಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ. ನಿಮಗೆ ಹಿತವಾದುದನ್ನೆ ನಾನು ತೀರ್ಮಾನಿಸಬೇಕಾಗಿದೆ. ಒಂದು ವೇಳೆ ಅವಿವೇಕದ ನಿರ್ಣಯ ಕೈಗೊಂಡರೆ ಅದರ ಪೂರ್ಣ ದೋಷ ಹಿರಿಯವನಾದ ನನ್ನದೇ ಆಗಿರಲಿದೆ…” ಎಂದು ಚಿಂತಾಕ್ರಾಂತನಾಗುತ್ತಾನೆ.

ಮುಂದುವರೆಯುತ್ತದೆ…

-ಗುರುಪ್ರಸಾದ್ ಆಚಾರ್ಯ

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache