ವ್ಯಾಸ ಮಹಾಭಾರತ - ಭಾಗ 25 |News Mirchi

ವ್ಯಾಸ ಮಹಾಭಾರತ – ಭಾಗ 25

ಹೀಗೆ ವಾಸುಕಿಯು ತನ್ನ ಅನುಜರ ರಕ್ಷಣೆಗೆ ಸರಿಯಾದ ಉಪಾಯ ತೋಚದೆ ಚಿಂತೆಯಲ್ಲಿದ್ದಾಗ, ಏಲಾಪತ್ರನೆಂಬ ಸರ್ಪಶ್ರೇಷ್ಠನು ಸಭೆಯ ನಡುವೆ ಬಂದು “ಅಣ್ಣಾ, ಈ ಕುರಿತಾಗಿ ನಾನೊಂದಿಷ್ಟು ವಿಚಾರ ನಿನ್ನ ಮುಂದಿಡುತ್ತೇನೆ. ದೈವ ಸಂಕಲ್ಪದಿಂದ ಬಂದ ಈ ಆಪತ್ತನ್ನು ನಾವೇ ಪರಿಹರಿಸಿಕೊಳ್ಳುವುದು ಅಸಾಧ್ಯವೇ ಸರಿ. ನಮ್ಮನ್ನು ಉಳಿಸುವುದಿದ್ದರೆ ಅದು ದೈವನಿರ್ಣಯದಿಂದ ಮಾತ್ರ ಸಾಧ್ಯ. ಈ ಕುರಿತಾದ ರಹಸ್ಯವೊಂದನ್ನ ನಾನು ನಿಮಗೆ ತಿಳಿಸಬೇಕಾಗಿದೆ. ತಾಯಿ ಕದ್ರುವು ನಮಗೆ ಶಾಪವಿತ್ತ ಘಳಿಗೆಯಲ್ಲಿ, ಬ್ರಹ್ಮದೇವ ತಥಾಸ್ತು ಅಂತ ಹೇಳಿದ ಹೊತ್ತಿಗೆ ನಾನು ಅಲ್ಲೇ ನಮ್ಮ ತಾಯಿಯ ಪಾದದ ಬಳಿ ಹೊರಳಾಡುತ್ತಿದ್ದಾಗ ದೇವತೆಗಳು ಮತ್ತು ಬ್ರಹ್ಮ ದೇವರ ಮಾತುಗಳನ್ನ ಕೇಳಿಸಿಕೊಂಡಿದ್ದೆ. ಬ್ರಹ್ಮ ದೇವರು ತಥಾಸ್ತು ಅಂದಾಗ ದೇವತೆಗಳೆಲ್ಲಾ ಸೇರಿ; ಕೋಪದಿಂದ ತಾಯಿಯೊಬ್ಬಳು ತನ್ನ ಮಕ್ಕಳಿಗೇ ಕೊಟ್ಟ ಶಾಪಕ್ಕೆ ನಿಮ್ಮದೂ ಸಮ್ಮತಿ ಇದೆಯೇ ಬ್ರಹ್ಮದೇವ ಎಂದು ಬ್ರಹ್ಮನನ್ನ ಪ್ರಶ್ನಿಸಿದ್ದರು. ಆಗ ಬ್ರಹ್ಮನು…. ಹೌದು, ಕದ್ರುವಿನ ಹಲವು ಸಂತತಿಗಳು ತಮ್ಮ ವಿಷದ ಹಲ್ಲಿನ ದುರುಪಯೋಗ ಪಡಿಸಿಕೊಂಡು ಅದೆಷ್ಟೋ ಅಮಾಯಕರನ್ನ ಯಮಪುರಿಗೆ ಅಟ್ಟುತ್ತಿದ್ದವು. ಅದಕ್ಕಾಗಿ ನಾನೇ ಕದ್ರುವಿನ ಬಾಯಲ್ಲಿ ಈ ರೀತಿಯ ಶಾಪ ಬರುವಂತೆ ಮಾಡಿಸಿದೆ. ಆದರೆ ಜನಮೇಜಯನ ಸರ್ಪಯಾಗದಲ್ಲಿ ಕೇವಲ ದುಷ್ಟ ಸರ್ಪಗಳಷ್ಟೇ ವಿನಾಶವಾಗಲಿವೆ. ಕದ್ರುವಿನ ಮಗಳಾದ ಜರತ್ಕಾರುವಿಗೆ ಯಾಯಾವರ ವಂಶದ ಜರತ್ಕಾರುವಿನಿಂದ ಜನಿಸಲಿರುವ ಆಸ್ತೀಕ ಎಂಬ ಮಹಾ ಬ್ರಾಹ್ಮಣ ನಿಂದಾಗಿ ಈ ಸರ್ಪಯಾಗ ಅರ್ಧಕ್ಕೆ ನಿಲ್ಲುತ್ತದೆ, ಎಂದು ಹೇಳಿದ್ದನ್ನ ನಾನು ಕೇಳಿಸಿಕೊಂಡಿದ್ದೆ. ಹಾಗಾಗಿ ನಾವೀಗ ನಮ್ಮ ತಂಗಿಯಾದ ಜರತ್ಕಾರುವಿನ ವಿವಾಹ ಮಾಡಿಸುವುದೇ ಸರಿಯಾದ ನಿರ್ಣಯವಾಗಿದೆ.” ಎಂದು ಹೇಳಿ ತನ್ನ ಸ್ಥಾನಕ್ಕೆ ತೆರಳುತ್ತಾನೆ.

ಏಲಾಪತ್ರನ ಮಾತುಗಳನ್ನ ಕೇಳತ್ತಿದ್ದಂತೆ ಸಭೆಯಲ್ಲಿ ಎಲ್ಲರೂ… ಇದೇ ಉಚಿತವಾದದ್ದು ಎನ್ನತೊಡಗಿದರು. ವಾಸುಕಿಗೂ ಇದುವೇ ಸರಿಯಾದ ಮಾರ್ಗ ಅಂತನಿಸಿತು. ಅದಾದ ಬಳಿಕ ಆತ ತನ್ನ ತಂಗಿಯಾದ ಜರತ್ಕಾರುವನ್ನ ಬಹಳ ಆಸ್ಥೆಯಿಂದ ಬೆಳೆಸತೊಡಗಿದನು.

  • No items.

ಇದಾದ ಸ್ವಲ್ಪ ಸಮಯದಲ್ಲೇ ಸಮುದ್ರ ಮಥನ ನಡೆಯಿತು. ಆಗ ಮಂದಾರ ಪರ್ವತದ ಕಡೆಗೋಲಿಗೆ ವಾಸುಕಿಯೇ ಹಗ್ಗವಾಗಬೇಕಾಯಿತು. ಆತನ ಕಾರ್ಯವನ್ನ ಮೆಚ್ಚಿದ ದೇವತೆಗಳು ಆತನ ಸಹಿತ ಬ್ರಹ್ಮನ ಬಳಿ ಸಾಗಿ “ಬ್ರಹ್ಮ ದೇವ ಈತನ ತಾಯಿಯಾದ ಕದ್ರುವಿನ ಶಾಪದ ಕುರಿತಾದ ಈತನ ಚಿಂತೆಯನ್ನ ನೀವೇ ಪರಿಹರಿಸಬೇಕು” ಎಂದು ಕೇಳಿ ಕೊಳ್ಳುತ್ತಾರೆ.

ಆಗ ಬ್ರಹ್ಮ “ಈತನ ತಾಯಿಯ ಶಾಪದಲ್ಲಿ ಕೇವಲ ಅಧರ್ಮಿಗಳಷ್ಟೇ ನಾಶವಾಗೋದು. ಧರ್ಮಾತ್ಮರು ನಿಶ್ಚಿಂತೆಯಿಂದಿರಿ. ಈತನ ಅನುಜ ಏಲಾಪತ್ರನ ಮೂಲಕ ಈ ಸಮಸ್ಯೆ ಗೆ ಪರಿಹಾರವನ್ನು ಸೂಚಿಸಿದ್ದೇನೆ. ಅದಾಗಲೇ ಯಾಯಾವರ ವಂಶದಲ್ಲಿ ಜರತ್ಕಾರು ಜನಿಸಿ ತಪಸ್ಸನ್ನು ಮಾಡುತ್ತಿದ್ದಾನೆ. ಅವನಿಗೆ ನಿನ್ನ ತಂಗಿ ಜರತ್ಕಾರುವಿನಲ್ಲಿ ಹುಟ್ಟುವ ಮಗುವಿನಿಂದ ಶಾಪ ವಿಮೋಚನೆಯಾಗಲಿದೆ. ಇನ್ನು ಇದರ ಕುರಿತಾದ ಭಯ ಅನಗತ್ಯ” ಎಂದು ವಾಸುಕಿಯನ್ನು ಸಂತೈಸಿದನು.

ಸ್ವತಃ ಬ್ರಹ್ಮನೇ ಸಮಾಧಾನ ಪಡಿಸಿದುದರಿಂದಾಗಿ ವಾಸುಕಿಯು ನಿರಾಳನಾದನು. ಅಲ್ಲದೆ ಜಗತ್ತಿನಾದ್ಯಂತ ತನ್ನ ಜನರನ್ನು ಕಳುಹಿಸಿ “ಯಾಯಾವರ ವಂಶದ ಜರತ್ಕಾರು ಕಲ್ಯಾಣಾರ್ಥವಾಗಿ ಹೆಣ್ಣು ಕೇಳತೊಡಗಿದರೆ ನನಗೆ ಸೂಚನೆ ನೀಡಿ” ಎಂದು ಹೇಳುತ್ತಾನೆ.

ಮುಂದುವರಿಯುತ್ತದೆ…..

-ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!