ವ್ಯಾಸ ಮಹಾಭಾರತ - ಭಾಗ 26 |News Mirchi

ವ್ಯಾಸ ಮಹಾಭಾರತ – ಭಾಗ 26

[ಸಣ್ಣ ಮಾಹಿತಿ : ಸರ್ಪಯಾಗ ನಿಲ್ಲಿಸಿದ ಆಸ್ತೀಕ ಎಂಬ ಮಹಾವಿಪ್ರನ ತಂದೆಯ ಹೆಸರೂ ಜರತ್ಕಾರು ಮತ್ತು ತಾಯಿಯ ಹೆಸರೂ ಜರತ್ಕಾರು. ಇಲ್ಲಿ ‘ಜರಾ’ ಅನ್ನೋದು ಕ್ಷಯ ಸೂಚಕ ಶಬ್ದ; ‘ಕಾರು’ ಅಂದರೆ ಅತ್ಯಂತ ಸ್ಥೂಲವಾದದ್ದು. ಈ ಇಬ್ಬರದ್ದೂ ಸ್ಥೂಲವಾದ ದೇಹವಾಗಿತ್ತಂತೆ… ಆನಂತರ ಅವರು ತಮ್ಮ ಕಠಿಣ ವ್ರತ ಮತ್ತು ತಪಸ್ಸಿನಿಂದ ಸ್ಥೂಲ ಕಾಯ ಕಳೆದು ಕೃಶ ಶರೀರಿಗಳಾದ್ದರಿಂದ ಅವರಿಬ್ಬರೂ ‘ಜರತ್ಕಾರು’ ಎಂದು ಕರೆಯಲ್ಪಟ್ಟರಂತೆ.]

ಇತ್ತ ಯಾಯಾವರ ವಂಶದ ಜರತ್ಕಾರು ಮತ್ತು ವಾಸುಕಿಯ ತಂಗಿ ಜರತ್ಕಾರು ಇಬ್ಬರೂ ಪ್ರಾಯಕ್ಕೆ ಬಂದವರಾಗಿದ್ದರೂ ಯಾಯಾವರ ವಂಶಜ ಜರತ್ಕಾರು ತಪಸ್ಸಿನಲ್ಲಿಯೇ ಮಗ್ನನಾಗಿದ್ದನು. ಕಠೋರ ಬ್ರಹ್ಮಚರ್ಯ ವ್ರತನಿಷ್ಠನಾಗಿದ್ದ ಆತನಿಗೆ ಮದುವೆಯಾಗಬೇಕೆಂದು ಅನ್ನಿಸುತ್ತಿರಲಿಲ್ಲ. ಹಾಗಾಗಿ ಇವರಿಬ್ಬರ ಸಂಗಮ ಆಗಿರಲಿಲ್ಲ.

ಇದೇ ಕಾಲಮಾನದಲ್ಲಿ ಅಭಿಮನ್ಯುವಿನ ಮಗನಾದ ರಾಜಾ ‘ಪರೀಕ್ಷಿತನು’ ಹಸ್ತಿನಾವತಿಯನ್ನ ಆಳುತ್ತಿದ್ದನು. ಆತನೋ ಪಾಂಡುವಿನಂತೆ ಮಹಾ ಸಮರ್ಥ ಮತ್ತು ಬೇಟೆಯನ್ನ ಹವ್ಯಾಸವಾಗಿಸಿಕೊಂಡವ.

ಒಮ್ಮೆ ಹೀಗಿಯೇ ಬೇಟೆಗೆ ಹೋದಾಗ ಜಿಂಕೆಯೊಂದಕ್ಕೆ ಬಾಣ ಬಿಡುತ್ತಾನೆ. ಆದರೆ ಅಪರೂಪಕ್ಕೆ ಆತನ ಬಾಣವನ್ನ ಚುಚ್ಚಿಸಿಕೊಂಡರೂ ಸಾಯದೆ ಓಡತೊಡಗಿತು. ತನ್ನ ಬಾಣದ ಆಹಾರ, ಇನ್ನು ಸಾಯಲಿಲ್ಲ ಎನ್ನುವ ಆಕ್ರೋಶದೊಂದಿಗೆ ಆತ ಆ ಜಿಂಕೆಯ ಬೆನ್ನಟ್ಟುತ್ತಾನೆ. ಹೀಗೆ ಕಾಡಿನೊಳಗೆ ಹೋಗಿ ಹೋಗಿ ‘ಶಮೀಕ’ ಎನ್ನುವ ಮಹಾತಪಸ್ವಿಯ ಆಶ್ರಮ ಪ್ರವೇಶಿಸುತ್ತಾನೆ. ಈ ಶಮೀಕನೋ ದನದ ಹಾಲು ಕುಡಿವಾಗ ಕರುವಿನ ಬಾಯಿಗಂಟುವ ಹಾಲ ನೊರೆಯನ್ನೇ ಸೇವಿಸಿ ಬದುಕೋ ಮಹಾ ತಪಸ್ವಿ. ಅದೂ ಅಲ್ಲದೆ ಆ ದಿನ ಮೌನ ವ್ರತದಲ್ಲಿದ್ದಾತ..

ಈತನನ್ನು ಪರೀಕ್ಷಿತ, “ತನ್ನ ಬಾಣದ ಆಘಾತಕ್ಕೊಳಗಾದ ಜಿಂಕೆಯೊಂದು ಇತ್ತ ಬಂತೆ…?” ಎಂದು ಕೇಳುತ್ತಾನೆ. ಅದರೆ ಶಮೀಕ ಉತ್ತರಿಸೋದಿಲ್ಲ. ಮೊದಲೇ ಬೇಟೆಯ ಬೆನ್ನತ್ತಿ ಓಡಿ ಬಳಲಿ ಅಸಹನೆಯಲ್ಲಿದ್ದ ಪರೀಕ್ಷಿತ ಕೋಪಗೊಳ್ಳುತ್ತಾನೆ. ತಾನು ಮಾತಾಡಿಸಿಯೂ ಮಾತನಾಡಲಿಲ್ಲವಲ್ಲ ಅನ್ನೋ ಕೋಪಕ್ಕೆ ಅಲ್ಲೇ ಸತ್ತು ಬಿದ್ದಿದ್ದ ಹಾವೊಂದನ್ನು ಶಮೀಕನ ಕೊರಳಿಗೆ ಹಾಕುತ್ತಾನೆ…..

ಕ್ಷಮಾಶೀಲನಾದ ಶಮೀಕನು ಪರೀಕ್ಷಿತನ ಈ ಅಕಾರ್ಯವನ್ನ ಮನ್ನಿಸಿಬಿಟ್ಟನು. ಆದರೆ ಆತನಿಗೆ ಶೃಂಗಿ ಎನ್ನುವ ಮಹಾತೇಜಸ್ವಿ ಪುತ್ರನಿದ್ದನು. ಆತನು ಮಹಾತಪಸ್ವಿಯಾಗಿದ್ದರೂ ಮಹಾಕೋಪಿಷ್ಠನೂ ಆಗಿದ್ದನು. ಆತ ಎಂತಹಾ ತಪಸ್ವಿ ಅಂದರೆ ಸಾಕ್ಷಾತ್ ಬ್ರಹ್ಮದೇವರ ಸೃಷ್ಟಿಕಾರ್ಯದಲ್ಲಿ ಸಹಕರಿಸುತ್ತಾ ಅವರ ಸೇವೆಯನ್ನೇ ಕಾಲಕಾಲಕ್ಕೆ ಮಾಡುತ್ತಿದ್ದವ. ಇದೇ ಹೊತ್ತಿಗೆ ಆತನು ಬ್ರಹ್ಮನ ಅನುಮತಿ ಪಡೆದು ತನ್ನ ಆಶ್ರಮಕ್ಕೆ ಹಿಂತಿರುಗತೊಡಗಿದ್ದನು. ಆತ ಆಶ್ರಮ ಮುಟ್ಟುವುದರೊಳಗೆ ಶೃಂಗಿಯ ಗೆಳೆಯನಾದ ಕೃಶನು ಈತನ ತಂದೆಗಾದ ಅವಮಾನವನ್ನ ಹೇಳಿ ನಗತೊಡಗಿದನು. ನೀನು ಮಹಾತಪಸ್ವಿಯಾಗಿಯೂ ನಿನ್ನ ತಂದೆಗೆ ಇಂತಹಾ ದುರವಸ್ಥೆ ಬಂದಿತಲ್ಲ ಅದನ್ನು ನಿನ್ನಿಂದ ತಪ್ಪಿಸಲಾಗಲಿಲ್ಲವಲ್ಲ ಎಂದು ಅಪಹಾಸ್ಯ ಮಾಡಿದನು…

ಆಗ ಶೃಂಗಿಯು ತನ್ನ ತಂದೆಯ ಕೊರಳಲ್ಲಿ ಸತ್ತ ಹಾವು ಹೇಗೆ ಬಂದಿತೆಂದು ಕೃಶನಲ್ಲೇ ಕೇಳಿ ತಿಳಿದನು. ರಾಜ ಪರೀಕ್ಷಿತನ ಈ ಅಕಾರ್ಯದಿಂದ ಕ್ರೋಧಗೊಂಡ ಶೃಂಗಿಯು ….”ಹೇ ಕುರುವಂಶದ ಕುಲೋದ್ಧಾರಕನೇ ನಿನ್ನ ಈ ಅಕಾರ್ಯಕ್ಕೆ ಇಗೋ ನಾನು ಶಾಪವನ್ನ ಕೊಡುತ್ತಿದ್ದೇನೆ ಇನ್ನು ಏಳು ರಾತ್ರಿಗಳೊಳಗೆ, ತೀಕ್ಷ್ಣವಾದ ವಿಷವುಳ್ಳ ತಕ್ಷಕನು ನನ್ನ ಶಾಪದಿಂದ ಪ್ರಚೋದಿತನಾಗಿ ನಿನ್ನನ್ನ ಕಚ್ಚಿ ಸಾಯಿಸಲಿ…” ಎಂದು ಶಪಿಸಿ ನೇರವಾಗಿ ತನ್ನ ತಂದೆಯ ಆಶ್ರಮಕ್ಕೆ ತೆರಳಿದನು.

ಮುಂದುವರಿಯುತ್ತದೆ

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!