ವ್ಯಾಸ ಮಹಾಭಾರತ – ಭಾಗ 27 – News Mirchi

ವ್ಯಾಸ ಮಹಾಭಾರತ – ಭಾಗ 27

ರಾಜಾ ಪರೀಕ್ಷಿತನನ್ನು ಶಪಿಸಿದ ಬಳಿಕ ಶೃಂಗಿಯು ನೇರವಾಗಿ ತಂದೆಯ ಬಳಿ ಹೋಗಿ ತಾನು ಶಪಿಸಿದುದನ್ನ ವಿವರಿಸಿ ಹೇಳುತ್ತಾನೆ ಆಗ ಶಮೀಕ ಮಹರ್ಷಿ ಬಹಳ ನೊಂದುಕೊಳ್ಳುತ್ತಾನೆ.

ಮತ್ತೆ ಮಗನನ್ನು ಕರೆದು “ಮಗೂ ಈ ರೀತಿಯಾಗಿ ನೀನು ಒಂದು ರಾಜ್ಯದ ದೊರೆಯನ್ನ ಶಪಿಸಬಾರದಿತ್ತು. ನಿಜ…. ಆತನದು ಅಕಾರ್ಯವಾದರೂ, ನಾವೇ ಶಾಂತಿಯಿಂದ ವರ್ತಿಸಬೇಕಿತ್ತು. ಈ ರೀತಿಯಾಗಿ ಕೋಪಿಸಿಕೊಂಡು ಶಪಿಸುವುದು ನಮಗೆ ಶ್ರೇಯಸ್ಕರವಲ್ಲ. ಆ ಹೊತ್ತಿಗೆ ಆತ ಬಳಲಿದ್ದ, ಅದೂ ಅಲ್ಲದೆ ನಾನು ಮೌನ ವ್ರತದಲ್ಲಿದ್ದುದು ಆತನಿಗೆ ಗೊತ್ತಿರಲಿಲ್ಲವೋ ಏನೋ. ಮಗೂ ಅನ್ಯಾಯವಾಗಿ ಈ ರಾಜ್ಯಕ್ಕೆ ರಾಜ ವಿಯೋಗ ನೀಡಿದೆ. ರಾಜ್ಯವೊಂದರಲ್ಲಿ ಸಮರ್ಥನಾದ ರಾಜನಿರುವುದು ಅತ್ಯಂತ ಆವಶ್ಯಕ. ರಾಜನಿಂದಾಗಿಯೇ ರಾಜ್ಯದಲ್ಲಿ ಧರ್ಮವು ನೆಲೆಸುವುದು. ದುಷ್ಟರನ್ನ ಹಿಡಿದು ಅವರ ದುಷ್ಟತನಕ್ಕೆ ದಂಡನೆ ನೀಡುವುದರಿಂದಲೇ ಸಜ್ಜನರು ಬದುಕುವಂತಾಗುವುದು. ನಮಗೂ ಅಭಯವನ್ನಿತ್ತಿರುವುದರಿಂದಲೇ ಅಲ್ಲವೇ ನಾವು ಈ ಆಶ್ರಮದಲ್ಲಿ ನಿರಾಳರಾಗಿರೋದು. ರಾಜನಿಂದಲೇ ರಾಜ್ಯದಲ್ಲಿ ಯಜ್ಞಯಾಗಾದಿಗಳು ನಡೆಯೋದು.. ಯಜ್ಞ ಯಾಗಗಳು ನಡೆಯುವುದರಿಂದಲೇ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗೋದು. ಇದೀಗ ಇಡಿಯ ರಾಜ್ಯಕ್ಕೆ ವಿಪತ್ತು ಬಂದ ಹಾಗಾಯ್ತು. ಆತನಿಗೆ ಶಾಪವನ್ನಿತ್ತು ತಪ್ಪು ಮಾಡಿದೆ ಕಂದಾ” ಎಂದು ರಾಜ್ಯಕ್ಕೆ ರಾಜನ ಆವಶ್ಯಕತೆಯ ಕುರಿತು ತಿಳಿ ಹೇಳಿದನು.

ತನ್ನ ತಂದೆಯ ಮಾತುಗಳನ್ನ ತಾಳ್ಮೆಯಿಂದ ಕೇಳಿದ ಶೃಂಗಿ ಶಾಂತನಾಗಿ ಹೇಳುತ್ತಾನೆ. “ತಂದೆ, ನೀವು ಹೇಳುತ್ತಿರುವುದು ಸರಿ . ನಾನು ಮಾಡಿದ್ದು ನ್ಯಾಯವೋ ಅನ್ಯಾಯವೋ ಆದರೆ ನನ್ನ ಶಾಪ ಸುಳ್ಳಂತೂ ಆಗಲಾರದಲ್ಲವೇ. ನನ್ನ ಜೀವನದಲ್ಲಿ ವಿನೋದಕ್ಕಾಗಿಯೂ ಸುಳ್ಳನ್ನಾಡಿದವನಲ್ಲ. ಹಾಗಿರುವಾಗ ನನ್ನ ಈ ಮಾತುಗಳು ಸುಳ್ಳಾಗಲು ಹೇಗೆ ಸಾಧ್ಯ…?”

ಅದಕ್ಕೆ ಶಮೀಕನು ಉತ್ತರಿಸುತ್ತಾ … “ಹೌದು ಕಂದ ನೀನಾಡಿದ ಮಾತುಗಳು ಸುಳ್ಳಾಗಲು ಸಾಧ್ಯವಿಲ್ಲ. ಆ ಕ್ಷಣಕ್ಕೆ ಬಂದ ಕೋಪದಿಂದಾಗಿ ನೀನು ಶಪಿಸಿದ್ದಾದರೂ ಅದು ಫಲಿಸಿಯೇ ತೀರೀತು. ಅದಕ್ಕಾಗೇ ನಮ್ಮಂತವರು ಕೋಪಿಸಿಕೊಳ್ಳಬಾರದು ಎನ್ನುವುದು. ಕೋಪ ನಮ್ಮ ತಪಃಶ್ಶಕ್ತಿಯನ್ನ ನಾಶ ಮಾಡಿ ಬಿಡುತ್ತದೆ. ಕ್ಷಮಾಗುಣವನ್ನ ನೀನು ಬೆಳೆಸಿಕೊಳ್ಳ ಬೇಕು ಮಗೂ. ಕ್ಷಮಾಗುಣವುಳ್ಳವನಿಗೆ ಇಹದಲ್ಲೂ ಸುಖವಿದೆ ಪರದಲ್ಲೂ ಸುಖವಿದೆ. ಒಬ್ಬ ತಂದೆಯಾಗಿ ನಿನಗೀ ಮಾತು ಹೇಳುವುದು ನನ್ನ ಕರ್ತವ್ಯ. ಅಂತೆಯೇ ರಾಜನಿಗೆ ಈ ಶಾಪದ ಸೂಚನೆಯನ್ನೂ ಕೊಡುವುದೂ ನನ್ನ ಕರ್ತವ್ಯ” ಎಂದು ಗೌರಮುಖ ಎನ್ನುವ ತನ್ನ ಶಿಷ್ಯನನ್ನ ಕರೆಸಿ ರಾಜಾ ಪರೀಕ್ಷಿತನಲ್ಲಿಗೆ ಶಾಪದ ಸೂಚನೆ ನೀಡುವ ಸಲುವಾಗಿ ಕಳುಹಿಸುತ್ತಾನೆ.

ಗೌರಮುಖನು ಶೀಘ್ರವಾಗಿ ರಾಜನ ಬಳಿ ತೆರಳಿ ಕುಶಲೋಪಚಾರ ಕೇಳಿ ಶೃಂಗಿಯ ಶಾಪದ ಕುರಿತು ತಿಳಿಸುತ್ತಾನೆ. ರಾಜ ಪರೀಕ್ಷಿತನಿಗೆ ಈ ವಿಚಾರ ತಿಳಿದು ಅತ್ಯಂತ ಬೇಸರವಾಗುತ್ತದೆ. ತನ್ನ ಸಾವಿನ ಕುರಿತಾದ ಭಯಕ್ಕಿಂತಲೂ ಮೌನವ್ರತದಲ್ಲಿದ್ದ ಮುನಿಗೆ ಅಪಚಾರ ಮಾಡಿದೆನಲ್ಲ ಎನ್ನುವ ಭಾವ ಕಾಡುತ್ತದೆ. ಆ ನಂತರ ರಾಜನು ಗೌರಮುಖನನ್ನ ಸತ್ಕರಿಸಿ ಬೀಳ್ಕೊಡುತ್ತಾನೆ.

ಗೌರಮುಖನು ವಿಷಯ ತಿಳಿಸಿದ ಬಳಿಕ ರಾಜಾ ಪರೀಕ್ಷಿತನು ತಮ್ಮ ಮಂತ್ರಿಗಳೊಂದಿಗೆ ಸಮಾಲೋಚಿಸಿ… ಒಂದೇ ಕಂಬವಿರುವ ಅರಮನೆಯೊಂದನ್ನ ನಿರ್ಮಿಸಿ ಅದರಲ್ಲಿ ಮಂತ್ರಸಿದ್ಧಿ ಹೊಂದಿದ್ದ ಬ್ರಾಹ್ಮಣರನ್ನೂ ವಿಷ ವೈದ್ಯರನ್ನೂ ಆ ಅರಮನೆಯ ಸುತ್ತಲೂ ಸದಾ ಕಾಲದಲ್ಲೂ ಇರುವಂತೆ ವ್ಯವಸ್ಥೆ ಮಾಡಿ ಅತ್ಯಂತ ಕಟ್ಟುನಿಟ್ಟಿನ ರಕ್ಷಣಾ ವ್ಯವಸ್ಥೆ ಮಾಡಿ ಅದರಲ್ಲೇ ವಾಸಿಸ ತೊಡಗಿದನು.

ಈ ವಿಚಾರ ಎಲ್ಲೆಡೆ ಹಬ್ಬತೊಡಗಿತು. ಇದು ಕಾಶ್ಯಪನೆಂಬ ಮಂತ್ರಜ್ಞನಾದ ಬ್ರಾಹ್ಮಣನೊಬ್ಬನ ಕಿವಿಗೂ ಬಿತ್ತು. ಆತನು ತಕ್ಷಣ ಪರೀಕ್ಷಿತ ಮಹಾರಾಜನೆಡೆಗೆ ಪಯಣ ಬೆಳೆಸಿದನು. ಇತ್ತ ಶೃಂಗಿಯ ಶಾಪದ ಪ್ರಭಾವವಾಗಿ ತಕ್ಷಕನಲ್ಲೂ ಪರೀಕ್ಷಿತನನ್ನ ಕಚ್ಚಿ ಸಾಯಿಸಬೇಕೆನ್ನುವ ಭಾವ ಉಂಟಾಗಿತ್ತು…

ಮುಂದೇನು …? ಇನ್ನೊಮ್ಮೆ ನೋಡೋಣ

– ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.