ವ್ಯಾಸ ಮಹಾಭಾರತ – ಭಾಗ 28

ಮಂತ್ರಜ್ಞನಾದ ಕಾಶ್ಯಪ ಬ್ರಾಹ್ಮಣನು ರಾಜನೆಡೆಗೆ ಹೋಗುತ್ತಿರುವುದನ್ನ ತಕ್ಷಕನು ನೋಡಿದನು. ಕಾಶ್ಯಪನ ತೇಜಸ್ಸಿನಿಂದಲೇ ಆತ ರಾಜನ ಜೀವ ಉಳಿಸಬಲ್ಲನೇನೋ ಎನ್ನುವ ಅನುಮಾನ ತಕ್ಷಕನಿಗುಂಟಾಯಿತು. ಆಗ ಆತ ಒಬ್ಬ ಬ್ರಾಹ್ಮಣನ ವೇಷ ಧರಿಸಿ ಕಾಶ್ಯಪನನ್ನ ತಡೆದು “ದೂರ ಹೋಗುತ್ತಿರುವೆ …?” ಎಂದು ಪ್ರಶ್ನಿಸುತ್ತಾನೆ..

“ನೀನೆತ್ತ ಹೋಗುತ್ತಿರುವೆ …?” ಎನ್ನುವ ಬ್ರಾಹ್ಮಣ ರೂಪಿ ತಕ್ಷಕನ ಪ್ರಶ್ನೆಗೆ ಉತ್ತರಿಸುತ್ತಾ ಕಾಶ್ಯಪನು “ಶಾಪ ಭಯದಲ್ಲಿರುವ ಪರೀಕ್ಷಿತ ರಾಜನನ್ನ ತಕ್ಷಕನ ವಿಷದಿಂದ ಉಳಿಸುವ ಸಲುವಾಗಿ ಹಸ್ತಿನಾವತಿಯತ್ತ ತೆರಳುತ್ತಿದ್ದೇನೆ.” ಎನ್ನುತ್ತಾನೆ.

ಆಗ ತಕ್ಷಕನು “ಅಯ್ಯಾ ಬ್ರಾಹ್ಮಣ ನಿನ್ನಿಂದ ಅದು ಸಾಧ್ಯವಾಗಲಾರದು. ಯಾಕೆಂದರೆ ನಾನು ತಕ್ಷಕನೇ ಆಗಿದ್ದೇನೆ. ನನ್ನ ವಿಷ ಅತ್ಯಂತ ಭಯಾನಕವಾಗಿದ್ದು, ನನ್ನಿಂದ ಕಚ್ಚಿಸಿಕೊಂಡವರು ಆ ವಿಷದಿಂದಾಗಿ ಸುಟ್ಟು ಭಸ್ಮರಾಗುತ್ತಾರೆ.” ಎನ್ನುತ್ತಾನೆ.

ಆಗ ಕಾಶ್ಯಪನು “ಹೇ ತಕ್ಷಕ, ನಿನ್ನ ಕೆಲಸ ನೀನು ಮಾಡು. ನನಗೆ ನನ್ನ ಮಂತ್ರಸಿದ್ಧಿಯಲ್ಲಿ ಸಂಪೂರ್ಣ ನಂಬಿಕೆಯಿದೆ. ಹಾಗಾಗಿ ನಾನು ರಾಜನ ಜೀವ ಉಳಿಸಬಲ್ಲೆ. ಬೇಕಿದ್ದರೆ ಇಗೋ ಈ ವಿಶಾಲ ವಟವೃಕ್ಷವನ್ನ ನೀನು ಕಚ್ಚಿ ಸಾಯಿಸಿಬಿಡು. ನಾನದನ್ನ ಮತ್ತೆ ಪುನಶ್ಚೇತನಗೊಳಿಸಿ ತೋರಿಸುತ್ತೇನೆ.” ಎನ್ನುತ್ತಾನೆ. ತಕ್ಷಕನಿಗೂ ಅದೇ ಬೇಕಾಗಿರುತ್ತದೆ.

“ಸರಿ ಹಾಗಾದರೆ ಇಗೋ ಈ ವಟವೃಕ್ಷವನ್ನ ಕಚ್ಚಿ ಭಸ್ಮ ಮಾಡುತ್ತೇನೆ” ಎಂದು ಪಕ್ಕದಲ್ಲಿದ್ದ ವಿಶಾಲ ವಟವೃಕ್ಷವನ್ನ ಕಚ್ಚಿಬಿಡುತ್ತಾನೆ. ಆ ಕೂಡಲೇ ತಕ್ಷಕನ ವಿಷಜ್ವಾಲೆಯಲ್ಲಿ ಆ ದೊಡ್ಡ ವಟವೃಕ್ಷವು ಪೂರ್ತಿಯಾಗಿ ಸುಟ್ಟು ಭಸ್ಮವಾಗಿ ಬಿಡುತ್ತದೆ.

ಆಗ ಕಾಶ್ಯಪನು ಆಚಮನಾದಿಗಳನ್ನ ಪೂರೈಸಿ, ತಾನು ಕಲಿತ ಸಂಜೀವಿನಿ ವಿದ್ಯೆಯ ಮಂತ್ರ ಪ್ರಯೋಗವನ್ನು ಆ ಭಸ್ಮದ ರಾಶಿಯ ಮೇಲೆ ನಡೆಸುತ್ತಾನೆ. ನೋಡು ನೋಡುತ್ತ ಇದ್ದಂತೆ ಮೊದಲು ಬೀಜಾಂಕುರವಾಗಿ ಅದು ಮೆಲ್ಲನೆ ಬೆಳೆಯತೊಡಗಿ ಹೆಮ್ಮರವಾಗಿ ಮತ್ತೆ ಮೊದಲಿನ ಸ್ವರೂಪವನ್ನು ಪಡೆಯುತ್ತದೆ.

ಇದನ್ನ ಕಂಡ ತಕ್ಷಕ ಆಶ್ಚರ್ಯಚಕಿತನಾಗಿ ಆತನ ವಿದ್ಯೆಗೆ ತಲೆಬಾಗುತ್ತಾ… “ಹೇ ಬ್ರಾಹ್ಮಣೋತ್ತಮಾ, ನಿಜ ನೀನು ನನ್ನ ವಿಷದ ಜ್ವಾಲೆಯನ್ನು ಶಮನಗೊಳಿಸಬಲ್ಲೆ. ನಿನ್ನ ಸಾಮರ್ಥ್ಯದ ಅರಿವಾಯಿತು. ಆದರೆ ನೀನು ಮಾಡಹೊರಟಿರುವ ಕಾರ್ಯದ ಕುರಿತು ಇನ್ನೊಮ್ಮೆ ವಿವೇಚಿಸು. ರಾಜನಿಗೆ ಶಾಪ ಸಿಕ್ಕಿರುವುದು ಒಬ್ಬ ತೇಜಸ್ವೀ ಋಷಿಯಿಂದ, ಅದೂ ಅಲ್ಲದೆ ಆತನ ಆಯಸ್ಸೂ ಮುಗಿದಿದೆ. ಹೀಗಿರುವಾಗ ನೀನು ಆತನನ್ನು ಬದುಕಿಸೋದು ನ್ಯಾಯವೇ…? ಯಾವ ಆಕಾಂಕ್ಷೆಯನ್ನಿಟ್ಟುಕೊಂಡು ನೀನು ರಾಜನ ಬಳಿ ಹೋಗುತ್ತಿರುವೆ..? ನಿನ್ನ ಆ ಆಕಾಂಕ್ಷೆಯನ್ನ ನಾನೇ ನೆರವೇರಿಸುತ್ತೇನೆ. ನಿನ್ನ ಯೋಜನೆಯನ್ನು ಇಲ್ಲೇ ಕೈ ಬಿಡು” ಎನ್ನುತ್ತಾನೆ. ಕಾಶ್ಯಪನು ಮನದಲ್ಲೇ ಲೆಕ್ಕಾಚಾರ ಹಾಕಿ ಆಯಸ್ಸು ಮುಗಿದಿರುವ ರಾಜನನ್ನು ಉಳಿಸಿ ಧನ ಪಡೆಯುವುದಕ್ಕಿಂತ ತಕ್ಷಕನ ಬಳಿ ಹಣ ಪಡೆಯುವುದೇ ಲೇಸು ಎಂದು ತಕ್ಷಕನಿಂದ ಹಣವನ್ನು ಪಡೆದು ಅಲ್ಲಿಂದ ಮರಳುತ್ತಾನೆ.

ಕಾಶ್ಯಪನು ಹೊರಟು ಹೋದ ನಂತರ ತಕ್ಷಕನು ಹಸ್ತಿನಾವತಿಗೆ ಹೋದನು. ಅಲ್ಲಿ ರಾಜನು ಮಾಡಿಕೊಂಡಿದ್ದ ಸುರಕ್ಷತಾ ವ್ಯವಸ್ಥೆಯನ್ನ ನೋಡಿ… ವಂಚನೆ ಮಾಡಿಯೇ ರಾಜನ ಬಳಿ ತೆರಳುವುದು ಸಾಧ್ಯ ಎಂದರಿತು… ತನ್ನ ಅನುಯಾಯಿಗಳಿಗೆ ತಪಸ್ವಿಯ ವೇಷವನ್ನ ಧರಿಸುವಂತೆ ಹೇಳಿ ಅವರೆಲ್ಲರೂ ಫಲ ದರ್ಭೆ ಮತ್ತು ಶುದ್ಧೋದಕಗಳನ್ನ ತೆಗೆದುಕೊಂಡು ಅಳುಕಿಲ್ಲದ ಮನಸ್ಸಿನಿಂದ ಈ ಫಲವಸ್ತುಗಳನ್ನ ರಾಜನಿಗೆ ಕೊಟ್ಟು ಬರಲು ಸೂಚನೆ ಕೊಟ್ಟನು. ಆಮೇಲೆ ತಾನು ಅಣುರೂಪದಲ್ಲಿ ಆ ಫಲದ ನಡುವೆ ಅಡಗಿ ಕುಳಿತನು. ಅದೇ ಫಲವಸ್ತುಗಳನ್ನ ಕಪಟ ತಪಸ್ವಿಗಳು ರಾಜನಿಗೆ ಕೊಟ್ಟು ಅವನನ್ನ ಹರಸುವ ನಾಟಕ ಮಾಡಿ ಅಲ್ಲಿಂದ ತೆರಳಿದರು.

ಅವರೆಲ್ಲಾ ತೆರಳಿದ ಬಳಿಕ ರಾಜನು ಸಚಿವರನ್ನ ಉದ್ದೇಶಿಸಿ…”ಮಂತ್ರಿಗಳೇ ತಾಪಸಿಗಳು ಅತ್ಯಂತ ಶ್ರೇಷ್ಠವಾದ ಹಣ್ಣುಗಳನ್ನ ತಂದಿದ್ದಾರೆ ನೀವು ತೆಗೆದುಕೊಳ್ಳಿ” ಎಂದು ಹಣ್ಣೊಂದನ್ನ ತಾನು ತಿನ್ನಲು ಕೈಗೆತ್ತಿಕೊಂಡನು. ಅದೇ ಹಣ್ಣಿನಲ್ಲಿ ಅಣುರೂಪವಾಗಿದ್ದ ತಕ್ಷಕನು ಆ ಕೂಡಲೇ ಸಣ್ಣ ಕ್ರಿಮಿಯ ರೂಪ ತಾಳಿದನು. ಆ ಕ್ರಿಮಿಯ ಕಣ್ಣು ಕಪ್ಪಾಗಿಯೂ ಶರೀರ ಕೆಂಪಾಗಿಯೂ ಇತ್ತು. ಆ ಕ್ರಿಮಿಯನ್ನೇ ಕೈಗೆತ್ತಿಕೊಂಡ ಪರೀಕ್ಷಿತನು “ಸಚಿವೋತ್ತಮರೇ ಶೃಂಗಿಯ ಶಾಪ ಸಿಕ್ಕಿ ಇವತ್ತಿಗೆ ಏಳನೆಯ ದಿನ, ಸೂರ್ಯಾಸ್ತವಾಗುತ್ತಿದೆ… ಇನ್ನೆಲ್ಲಿಯ ಸರ್ಪವಿಷದ ಭಯ…. ಆದರೂ ನನಗೇಕೋ ಇದು ಸರಿಯೆಂದಿನಿಸುತ್ತಿಲ್ಲ… ನಾನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಸಿಗದಂತಾಗುತ್ತದೆ. ಮತ್ತು ಮಹಾತಪಸ್ವಿಯ ನುಡಿಯು ಸುಳ್ಳಾದ ಹಾಗಾಗುತ್ತದೆ. ಅದಕ್ಕಾಗಿ ಈ ಸಣ್ಣ ಕ್ರಿಮಿಯೇ ತಕ್ಷಕನಾಗಿ ನನ್ನನ್ನ ಕಚ್ಚಿ ಸಾಯಿಸಲಿ. ಹಾಗಾದರೂ ನಾನು ದೋಷದಿಂದ ಮುಕ್ತನಾಗುತ್ತೇನೆ” ಎಂದು ಆ ಕ್ರಿಮಿಯನ್ನ ಕುತ್ತಿಗೆ ಬಳಿ ಬಿಟ್ಟು ತನಗೆ ಸಿಕ್ಕ ಶಾಪಕ್ಕೆ ಅಪಹಾಸ್ಯ ಮಾಡುತ್ತಾ ಗಹಗಹನೆ ನಗತೊಡಗಿದನು.

ಸಾವು ಸಮೀಪವಾಗುವ ಹೊತ್ತಿಗೆ ಆತನ ಬುದ್ಧಿ ವಿಕಾರವಾಗತೊಡಗಿತ್ತು. ವಾಸ್ತವದಲ್ಲಿ ಅವನ ಮಾತೇ ನಿಜವಾಗುವುದರಲ್ಲಿತ್ತು…. ಸೂರ್ಯನಿನ್ನೇನು ಮುಳುಗಿಯೇ ಬಿಟ್ಟ ಅನ್ನುವುದರೊಳಗಾಗಿ ಆ ಕ್ರಿಮಿರೂಪದಲ್ಲಿದ್ದ ತಕ್ಷಕನು ತನ್ನ ನಿಜ ರೂಪ ಧರಿಸಿ ರಾಜನ ಕುತ್ತಿಗೆಯನ್ನ ಸುತ್ತಿಕೊಂಡು ಘೋರ ಸದ್ದು ಮಾಡುತ್ತಾ ಕಚ್ಚಿಯೇ ಬಿಟ್ಟನು. ಕ್ಷಣಮಾತ್ರದಲ್ಲಿ ಅಭಿಮನ್ಯು ಪುತ್ರನಾದ ಪರೀಕ್ಷಿತ ಮಹಾರಾಜ ಸಾವನಪ್ಪಿದ್ದನು.

ಕಥೆ ಇನ್ನೂ ಇದೆ…

– ಗುರುಪ್ರಸಾದ್ ಆಚಾರ್ಯ