ವ್ಯಾಸ ಮಹಾಭಾರತ – ಭಾಗ 29 – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 29

​ಪರೀಕ್ಷಿತರಾಜ ಸತ್ತು ಹೋದ ಬಳಿಕ ಆತನ ಪುತ್ರ ಜನಮೇಜಯನಿಗೆ ಪಟ್ಟಾಭಿಷೇಕವಾಗುತ್ತದೆ. ಆತ ಸಣ್ಣ ಪ್ರಾಯದವನಾಗಿದ್ದರೂ ಆತನ ಮುತ್ತಾತ ಧರ್ಮಜನಂತೆಯೇ ಉತ್ತಮವಾಗಿ ರಾಜ್ಯಭಾರ ಮಾಡತೊಡಗುತ್ತಾನೆ. ಆತ ಪ್ರಾಯಕ್ಕೆ ಬಂದಂತೆ ಕಾಶೀರಾಜ ಸುವರ್ಣವರ್ಮನ ಮಗಳಾದ “ವಪುಷ್ಟಮೆ”ಯನ್ನ ವಿವಾಹವಾಗುತ್ತಾನೆ. ಇವರಿಬ್ಬರೂ ಅನ್ಯೋನ್ಯವಾದ ದಾಂಪತ್ಯ ಜೀವನ ಸಾಗಿಸುತ್ತಾ, ರಾಜ್ಯದ ಪ್ರಜೆಗಳನ್ನ ಉತ್ತಮರೀತಿಯಲ್ಲಿ ಪರಿಪಾಲನೆ ಮಾಡುತ್ತಾ ಕಾಲಕಳೆಯುತ್ತಿರುತ್ತಾರೆ.

ಈ ಕಾಲಮಾನದಲ್ಲೇ ಯಾಯಾವರ ವಂಶಜನಾದ ಜರತ್ಕಾರುವು ವಾಸುಕಿಯ ತಂಗಿಯಾದ ಜರತ್ಕಾರುವನ್ನ ಮದುವೆಯಾಗಿದ್ದು. ತನ್ನದೇ ಹೆಸರಿರುವವಳನ್ನ ಮದುವೆಯಾಗುತ್ತೇನೆ ಎನ್ನುವ ನಿಬಂಧನೆ ಹಾಕಿದ್ದ ಯಾಯಾವರ ವಂಶಜ ಜರತ್ಕಾರುವು ಮದುವೆಯಾಗಲು ಇನ್ನೆರಡು ಶರತ್ತುಗಳನ್ನ ವಿಧಿಸಿರುತ್ತಾನೆ. ಆತನು ವಧುವನ್ನ ಭಿಕ್ಷಾರೂಪವಾಗಿ ಪಡೆಯುತ್ತಾನೆ ಎನ್ನುವುದು ಮತ್ತು ಆಕೆಯನ್ನ ಪೋಷಿಸುವ ಸಾಕಿಸಲಹುವ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎನ್ನುವುದು. ಈ ಮೂರು ನಿಬಂಧನೆಯನ್ನ ಒಪ್ಪಿಯೇ ವಾಸುಕಿಯು ತನ್ನ ತಂಗಿಯನ್ನ ಯಾಯಾವರ ವಂಶಜ ಜರತ್ಕಾರುವಿಗೆ ಧಾರೆ ಎರೆದುಕೊಟ್ಟು ಅವರಿಬ್ಬರನ್ನ ತನ್ನದೇ ಅರಮನೆಯಲ್ಲಿ ಸಾಕತೊಡಗಿರುತ್ತಾನೆ. ಮದುವೆಯಾದ ಬಳಿಕ ಆತನು ತನ್ನ ಪತ್ನಿಯೊಡನೆಯೂ ಅದೇ ನಿಬಂಧನೆಗಳನ್ನ ಹೇಳಿ ಅವಳಿಗೆ ಇನ್ನೊಂದು ನಿಬಂಧನೆ ವಿಧಿಸುತ್ತಾನೆ. ಅದೆಂದರೆ ಆಕೆ ಯಾವತ್ತೂ ತನಗೆ ಅಪ್ರಿಯವಾದ ಕೆಲಸವನ್ನ ಮಾಡಬಾರದು. ಒಂದು ವೇಳೆ ಮಾಡಿದೆಯೆಂದಾದರೆ  ಆ ಕೂಡಲೇ ನಿನ್ನನ್ನ ಪರಿತ್ಯಜಿಸುತ್ತೇನೆ ಎಂದನು.

ಮಹಾಭಾರತದಲ್ಲಿ ಶ್ವೇತಕಾಕೀಯೋಪಾಯ ಅಥವಾ ಶ್ವೇತಕಾಕೀಯ ನ್ಯಾಯ ಎನ್ನುವ ಪದ ಬರುತ್ತದೆ. ಪತಿಯ ಸೇವೆಯ ಕುರಿತಾದ ಉಲ್ಲೇಖ. ಇದನ್ನ ಭಾಷ್ಯಕಾರರು ಎರಡು ರೀತಿಯಲ್ಲಿ ವಿವರಿಸುತ್ತಾರಂತೆ.

೧. ಇಲ್ಲಿ ಶ್ವೇತಕಾಕೀಯ ವನ್ನ ಮೂರು ವಿಭಾಗ ಮಾಡುತ್ತಾರೆ…. ‘ಶ್ವಾ’ ‘ಏತ’ ‘ಕಾಕ’. ಶ್ವಾ ಅಂದರೆ ನಾಯಿ. ನಾಯಿಯಂತೆ ಪತಿಯ ಸೇವೆಯಲ್ಲಿ ಸದಾ ಜಾಗರೂಕರಾಗಿರುವುದು. ಏತ ಅಂದರೆ ಜಿಂಕೆ. ಸಾಮಿಪ್ಯದಲ್ಲಿರುವಾಗ ಜಿಂಕೆಯಂತೆ ಭೀತರಾಗಿರುವುದು, ಕಾಕ ಕಾಗೆಗೆ ಮುಂದೇನಾಗುವುದು ಎನ್ನುವ ಅರಿವು ಇರುತ್ತದೆಯಂತೆ. ಹಾಗಾಗಿ ಕಾಗೆಯಂತೆ ಪತಿಯ ಮನಸ್ಸಿನ ಆಶಯವನ್ನ ಮೊದಲೇ ಅರಿತು ಅದಕ್ಕೆ ಬೇಕಾಗಿರುವುದನ್ನ ಸಿದ್ಧಪಡಿಸುವುದು.

೨. ಶ್ವೇತ ಕಾಕ ಎಂದರೆ ಬಿಳಿಯ ಕಾಗೆ. ಕಾಗೆಯು ಬೆಳ್ಳಗಿದೆ ಎಂದರೂ ಇಲ್ಲವೆನ್ನದೆ ನಿಜ ನಿಜ ಎನ್ನುತ್ತಾ ಅನುಸರಿಸಿಕೊಂಡು ಹೋಗುವುದು.

ಅಂತೂ ಯಾಯಾವರ ವಂಶಜನಾದ ಜರತ್ಕಾರುವಿನ ಎಲ್ಲಾ ನಿಬಂಧನೆಗಳಿಗೆ ಒಪ್ಪಿ ವಾಸುಕಿಯು ತನ್ನ ತಂಗಿಯನ್ನ ಧಾರೆ ಎರೆದುಕೊಡುತ್ತಾನೆ. ವಾಸುಕಿಯ ತಂಗಿಯು ಭಯಭಕ್ತಿಯಿಂದ ತನ್ನ ಪತಿಯ ಸೇವೆ ಮಾಡುತ್ತಿರುತ್ತಾಳೆ. ತನ್ನ ಗಂಡನಿಗೆ ಯಾವುದೇ ರೀತಿಯ ತಪ್ಪು ಕಾಣಿಸದ ರೀತಿಯಲ್ಲಿ ಪತ್ನೀಧರ್ಮವನ್ನ ನಿಭಾಯಿಸುತ್ತಿರುತ್ತಾಳೆ.

ಹೀಗೆ ಕಾಲ ಕಳೆಯುತ್ತಿರಲು ಸುಮುಹೂರ್ತದಲ್ಲಿ ಇಬ್ಬರ ಸಮಾಗಮವಾಗಿ ವಾಸುಕಿಯ ತಂಗಿಯು ಗರ್ಭದಾರಣೆ ಮಾಡುತ್ತಾಳೆ. ಹೀಗಿರಲು ಒಂದು ದಿನ ಜರತ್ಕಾರು(ಗಂಡ) ಮಧ್ಯಾಹ್ನದ ಬಳಿಕ ಬಸವಳಿದು ತನ್ನ ಪತ್ನಿಯ ತೊಡೆಯ ಮೇಲೆ ವಿಶ್ರಾಂತಿಗಾಗಿ ಮಲಗುತ್ತಾನೆ. ಆತ ಮಲಗಿದಲ್ಲಿಯೇ ಗಾಢನಿದ್ರೆಗೆ ಜಾರುತ್ತಾನೆ.

ಇತ್ತ ಸೂರ್ಯಾಸ್ತದ ಸಮಯ ಹತ್ತಿರ ಬರುತ್ತಿರಲು ಪತ್ನಿ ಇಕ್ಕಟ್ಟಿನಲ್ಲಿ ಸಿಕ್ಕಿಹಾಕುತ್ತಾಳೆ. ಸುಖವಾದ ನಿದ್ರೆಯಲ್ಲಿದ್ದವನನ್ನ ಎಚ್ಚರಿಸಿದರೆ ಗಂಡ ಕೋಪಗೊಳ್ಳುತ್ತಾನೆ. ಎಬ್ಬಿಸದೆ ಸಾಯಂಕಾಲದ ಸಂಧ್ಯಾಕರ್ಮದ ಕಾಲವು ಮೀರಿ ಹೋದರೆ ಪತಿಯಿಂದ ಧರ್ಮಲೋಪವಾಗುತ್ತದೆ. ಈ ತೊಳಲಾಟದಲ್ಲಿ ಒದ್ದಾಡಿ ಒದ್ದಾಡಿ ಕೊನೆಗೆ ಆಕೆ ಒಂದು ನಿರ್ಣಯಕ್ಕೆ ಬರುತ್ತಾಳೆ, ಪತಿಯು ಕೋಪಗೊಂಡರೂ ಪರವಾಗಿಲ್ಲ ತನ್ನಿಂದಾಗಿ ಪತಿಯ ಕೈಯಿಂದ ಧರ್ಮಲೋಪವಾಗಬಾರದು ಎಂದು ಆಕೆ ಮೆಲ್ಲನೆ ತನ್ನ ಪತಿಯನ್ನ ಎಬ್ಬಿಸುತ್ತಾಳೆ. ಕೂಡಲೇ ಎದ್ದ ಗಂಡನು ಕೋಪದಿಂದ ಕೆಂಡಾಮಂಡಲವಾಗಿ “ಹೇ ಭಾರ್ಯೆ ನೀನು ನನಗಿಂದು ಘೋರ ಅಪಮಾನ ಮಾಡಿದ್ದಿ. ನಾನು ಏಳದೆ ಸೂರ್ಯನಿಗೂ ಅಸ್ತಂಗತವಾಗೋ ಧೈರ್ಯ ಇಲ್ಲ. ಹಾಗಿದ್ದರೂ ನನ್ನನ್ನ ಎಬ್ಬಿಸಿ ನೀನು ಅಪಮಾನ ಮಾಡಿರುವೆ. ನಾನು ವಿಧಿಸಿದ ನಿಬಂಧನೆಯನ್ನ ನೀನು ಮುರಿದಿರುವೆ. ಹಾಗಾಗಿ ನಿನ್ನ ಜೊತೆ ನಾನಿನ್ನು ಇರಲಾರೆ. ನಾನು ಹೊರಟು ಹೋಗುತ್ತೇನೆ” ಎಂದು ಹೊರಡಲನುವಾಗುತ್ತಾನೆ.

ಆಗ ಪತ್ನಿಯು ಕಾಡಿ ಬೇಡಿ ಕಣ್ಣೀರ ಧಾರೆಯನ್ನ ಹರಿಸಿದರೂ ಆತ ಮನಸ್ಸನ್ನ ಬದಲಾಯಿಸುವುದಿಲ್ಲ ಕೊನೆಗೆ ಆಕೆ ಗಂಡನಲ್ಲಿ ವಿನಂತಿಸುತ್ತಾ ಹೇಳುತ್ತಾಳೆ “ಸ್ವಾಮೀ, ನನ್ನ ಅಣ್ಣಂದಿರು ನಿಮಗೆ ನನ್ನನ್ನ ವಿವಾಹ ಮಾಡಿಕೊಟ್ಟದ್ದೇ…. ನನ್ನ ಸಂತಾನ ಸರ್ಪಕುಲದ ನಾಶವನ್ನ ತಡೆಯುತ್ತದೆ ಎನ್ನುವ ಕಾರಣದಿಂದ. ನಾನು ಗರ್ಭ ಧರಿಸಿದ್ದು ನಿಜವಾದರೂ ಅದು ಅವ್ಯಕ್ತವಾಗಿದೆ. ನನ್ನ ಅಣ್ಣಂದಿರ ಉದ್ದೇಶ ಪೂರ್ಣವಾಗುವವರೆಗಾದರೂ ನನ್ನ ತೊರೆಯದಿರಿ” ಅನ್ನುತ್ತಾಳೆ. ಆಗ ಪತಿಯು “ಭಾರ್ಯೆ, ನಾನೆಂದಿಗೂ ಸುಳ್ಳಾಡಿದವನಲ್ಲ. ಹಾಗಾಗಿ ನಾನಾಡಿದ ಮಾತು ಸುಳ್ಳಾಗುವುದೂ ಇಲ್ಲ. ಹಾಗಾಗಿ ನಾನು ಕಾಡಿಗೆ ತಪಸ್ಸಿಗಾಗಿ ಹೋಗುವುದು ನಿಶ್ಚಿತ ಆದರೆ ನಿನ್ನ ಆಸೆಯು ನ್ಯಾಯಸಮ್ಮತವಾದದ್ದು. ನಿನ್ನ ಗರ್ಭದಲ್ಲಿ ಗರ್ಭಾಂಕುರವಾಗಿದೆ… ಅದು ಸಾಮಾನ್ಯ ಗರ್ಭವಲ್ಲ. ಅದರಿಂದ ಅತ್ಯುತ್ತಮ ಮಗುವಿನ ಜನನವಾಗುತ್ತದೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಆತ ಮಹಾನ್ ತೇಜಸ್ವೀಯಾಗಿ ವೇದವೇದಾಂಗ ಪಾರಂಗತನಾಗಿ ಮಹಾನ್ ಮಹರ್ಷಿಯಾಗುತ್ತಾನೆ.” ಎಂದು ಹರಸಿ ಹೊರಟು ಹೋಗುತ್ತಾನೆ.

ಹೀಗೆ ಅವರಿಬ್ಬರಲ್ಲಿ ಹುಟ್ಟಿದ ಮಗುವೇ ಆಸ್ತೀಕ (ಜರತ್ಕಾರು (ಪತಿ) ಹೆಂಡತಿಯ ಬಳಿ “ಅಸ್ತಿ…. ನಿನ್ನ ಗರ್ಭದಲ್ಲಿ ಮಗುವಿದೆ.” ಎಂದ ಕಾರಣ ಆತ ಆಸ್ತೀಕನಾದ )
ಮುಂದುವರೆಯುತ್ತದೆ..

-ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!