Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ವ್ಯಾಸ ಮಹಾಭಾರತ – ಭಾಗ 3 – News Mirchi

ವ್ಯಾಸ ಮಹಾಭಾರತ – ಭಾಗ 3

ವ್ಯಾಸ ಮಹರ್ಷಿಗಳು ಬ್ರಹ್ಮದೇವರಲ್ಲಿ ತಾವು ಮಹಾಭಾರತದ ಕಥೆಯನ್ನು ಬರೆಯುವ ಪ್ರಸ್ತಾಪ ಮಾಡಿ, ನಾನು ಹೇಳಿದ್ದನ್ನ ಬರೆಯೋಕೆ ಒಬ್ಬ ಸಮರ್ಥ ಲೇಖಕ ಬೇಕು, ಅಂದರಂತೆ. ಆಗ ಬ್ರಹ್ಮ ದೇವರು ವಿನಾಯಕನನ್ನು ಸ್ಮರಿಸಿಕೋ ಎಂದಾಗ ವ್ಯಾಸರು ವಿನಾಯಕನನ್ನ ಸ್ಮರಿಸಿದರಂತೆ. ಆ ಕೂಡಲೇ ಪ್ರತ್ಯಕ್ಷನಾದ ವಿನಾಯಕ…

ಬರೆಯೋದಕ್ಕೆ ನನ್ನದೇನೂ ಅಡ್ಡಿಯಿಲ್ಲ ಆದರೆ ನನ್ನ ಲೇಖನಿಗೆ ಎಲ್ಲಿಯೂ ವಿರಾಮ ಸಿಗದಂತೆ ಕಥೆಯನ್ನು ಹೇಳುತ್ತಾ ಹೋಗಬೇಕು ಅಂತ ಹೇಳಿದನಂತೆ. ಆಗ ವ್ಯಾಸ ಮಹರ್ಷಿಗಳು ತಾವೂ ಒಂದು ನಿಬಂಧನೆ ಹಾಕಿದರಂತೆ… ನಾನೇನೋ ಹೇಳುತ್ತೇನೆ. ಆದರೆ ನೀವು ಪ್ರಸಂಗವನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಾ ಬರೆಯಬೇಕು ಅಂತ. ಹೀಗೆ ವ್ಯಾಸರಿಗೆ ಯೋಚಿಸಲು ಸಮಯ ಬೇಕಾದಾಗಲೆಲ್ಲಾ ಕೂಟ ಶ್ಲೋಕಗಳನ್ನು ಹೇಳುತ್ತಿದ್ದರಂತೆ. ಈ ಕೂಟ ಶ್ಲೋಕಗಳನ್ನು ಬಿಡಿಸೋದಕ್ಕೆ ಗಣಪತಿಯೂ ಕೊಂಚ ಕಾಲ ವ್ಯಯಿಸುತ್ತಿದ್ದರಂತೆ. ಈ ಹೊತ್ತಿನಲ್ಲಿ ವ್ಯಾಸರು ಮುಂದಿನ ಶ್ಲೋಕಗಳನ್ನು ಹೆಣೆದಿರುತ್ತಿದ್ದರಂತೆ.

ಹೀಗೆ ಮಹಾಭಾರತದಲ್ಲಿ ಹಲವಾರು ಕೂಟ ಶ್ಲೋಕಗಳಿವೆ. ಅದರಲ್ಲಿ ಸುಮಾರು ಎಂಟು ಸಾವಿರದ ಎಂಟುನೂರು ಶ್ಲೋಕಗಳು ” ಶುಕ ಮಹರ್ಷಿ” ಗಳಿಗೆ ತಿಳಿದಿತ್ತು ಅನ್ನುವುದನ್ನ ಸ್ವತಃ ಶುಕ ಮುನಿಗಳೇ ಹೇಳಿದ್ದಾರೆ. ಈ ಕೂಟ ಶ್ಲೋಕಗಳು ಬಹಳ ಕ್ಲಿಷ್ಟಕರವಾಗಿಯೂ ನಿಗೂಢವಾಗಿಯೂ ಈಗಲೂ ಹಲವರ ಯೋಚನೆಗೆ ನಿಲುಕದ ಹಾಗಿದೆ ಅನ್ನುತ್ತಾರೆ.

ಮಹಾಭಾರತಕ್ಕೆ ಸಂಗ್ರಹಾಧ್ಯಾಯವೆಂಬುದೇ ಬೀಜಪ್ರಾಯವಾಗಿದೆ. ಪೌಲೋಮ ಮತ್ತು ಆಸ್ತೀಕಪರ್ವಗಳು ಮಹಾಭಾರತವೃಕ್ಷದ ಬೇರಿನಂತಿದೆ. ಸಂಭವಪರ್ವವು ಇದರ ನಡುಭಾಗ. ಸಭಾ ಮತ್ತು ಅರಣ್ಯ ಪರ್ವಗಳು ಈ ವೃಕ್ಷದ ಮೇಲೆ ಪಕ್ಷಿಗಳು ವಾಸಮಾಡಲು ಯೋಗ್ಯವಾದ ಪೊಟರೆಗಳ ರೂಪದಲ್ಲಿದೆ. ಅರಣೀಪರ್ವವು ಈ ಮಹಾಭಾರತವೃಕ್ಷದ ಗ್ರಂಥಿಸ್ಥಲವಾಗಿದೆ. ವಿರಾಟ ಮತ್ತು ಉದ್ಯೋಗಪರ್ವಗಳೇ ಈ ಮಹಾಭಾರತವೃಕ್ಷದ ಸಾರಭೂತವಾದ ಭಾಗಗಳು.

ಭೀಷ್ಮಪರ್ವವು ಮಹಾಭಾರತವೃಕ್ಷದ ದೊಡ್ಡ ಕೊಂಬೆಯಾಗಿದೆ. ದ್ರೋಣಪರ್ವವು ಇದರ ಎಲೆಗಳು. ಕರ್ಣಪರ್ವವು ಮಹಾಭಾರತ ವೃಕ್ಷದ ಶ್ವೇತಕುಸುಮಗಳು. ಶಲ್ಯಪರ್ವವು ಈ ಕುಸುಮಗಳ ಸುಗಂಧರೂಪದಲ್ಲಿದೆ. ಸ್ತ್ರೀ ಮತ್ತು ಐಷೀಕಪರ್ವಗಳು ಈ ವೃಕ್ಷದ ಛಾಯಾರೂಪದಲ್ಲಿದೆ. ಶಾಂತಿಪರ್ವವೇ ಈ ಮಹಾಭಾರತವೃಕ್ಷದ ಮಹಾಫಲ. ಅಶ್ವಮೇಧಪರ್ವವೇ ಈ ವೃಕ್ಷದ ಅಮೃತರಸ. ಆಶ್ರಮವಾಸಿಕಪರ್ವವು ವೃಕ್ಷದಡಿಯಲ್ಲಿ ಕುಳಿತುಕೊಳ್ಳಲು ಯೋಗ್ಯವಾದ ಒಂದು ನಿವಾಸಸ್ಥಾನದಂತಿದೆ. ಶ್ರುತಿರೂಪವಾಗಿರುವ ಮೌಸಲ ಪರ್ವವು ಎಲ್ಲ ಶಾಖೆಗಳ ಅಂತಿಮಭಾಗರೂಪದಲ್ಲಿದ್ದು ಶಿಷ್ಟರಿಂದಲೂ ದ್ವಿಜರಿಂದಲೂ ಸೇವಿಸಲ್ಪಡಲು ಯೋಗ್ಯವಾಗಿದೆ.

ಮೇಘವು ಯಾವ ರೀತಿಯಲ್ಲಿ ಸರ್ವಭೂತಗಳಿಗೂ ಆಶ್ರಯದಾಯಕವಾಗಿದೆಯೋ ಅದೇ ರೀತಿಯಲ್ಲಿ ಈ ಭಾರತಕಲ್ಪವೃಕ್ಷವು ಸರ್ವಕವಿಮುಖ್ಯರಿಗೂ ಆಶ್ರಯವಾಗಿದೆ. ಈ ಭಾರತವೃಕ್ಷದಲ್ಲಿ ರುಚಿಕರವಾದ ಪವಿತ್ರವಾದ ರಸಯುಕ್ತವಾದ, ಅವಿನಾಶಿಯಾದ ಪುಷ್ಪಗಳೂ ಮತ್ತು ಫಲಗಳೂ ಇವೆ. ಈ ವೃಕ್ಷವನ್ನು ದೇವತೆಗಳೂ ಛೇದನಮಾಡಲಾರರು.

– ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!