ವ್ಯಾಸ ಮಹಾಭಾರತ – ಭಾಗ 30

​ಇದುವರೆಗೆ ಹಲವರ ಕಥೆಯನ್ನು ಕೇಳಿದೆವು. ಉತ್ತಂಕನ ಕಥೆ ಕೇಳಿದೆವು. ಸರ್ಪಗಳ ಜನನದ ಕಥೆ ಕೇಳಿದೆವು. ಗರುಡ ಮತ್ತು ಅರುಣನ ಜನನದ ಕಥೆ ಕೇಳಿದೆವು . ಇಲ್ಲಿ ಹೇಳಿದ ಎಲ್ಲಾ ಕಥೆಗಳೂ ಜನಮೇಜಯನ ಸರ್ಪಯಾಗದ ಜೊತೆ ಸಂಬಂಧ ಇರುವವರ ಬಗೆಗಿನ ಕಥೆ. ಅದು ಆಸ್ತೀಕನ ಜನನದ್ದೂ ಆಗಿರಬಹುದು. ಸರ್ಪಗಳಿಗೆ ತಾಯಿಯಿಂದಲೇ ಸಿಕ್ಕ ಶಾಪದ ಕತೆಯೂ ಇದಕ್ಕೆ ಸಂಬಂಧ ಹೊಂದಿದವಾಗಿದೆ. ಈ ಹಿಂದೆ ಉತ್ತಂಕ ಋಷಿಯು ತನ್ನ ಗುರುಗಳಿಗೆ ಗುರುದಕ್ಷಿಣೆ ಕೊಡುವ ಹೊತ್ತಿನಲ್ಲಿ ತಕ್ಷಕನು ಕಾಡಿದ್ದರಿಂದ ಅವನ ಮೇಲೆ ಮುನಿಸಿಕೊಂಡಿದ್ದು ಜನಮೇಜಯನಲ್ಲಿಗೆ ಬಂದು ನಿನ್ನ ತಂದೆಯ ಸಾವಿನ ಪ್ರತೀಕಾರವಾಗಿ ಸರ್ಪಯಾಗ ಮಾಡುವಂತೆ ಕೇಳಿಕೊಂಡ ಕಥೆ ಹೇಳಿಯಾಗಿದೆ. ಈಗ ಅಲ್ಲಿಂದ ಮುಂದುವರಿಯೋಣ.

ಜನಮೇಜಯನಲ್ಲಿಗೆ ಉತ್ತಂಕನು ಬಂದು “ನಿನ್ನ ತಂದೆಯ ಸಾವಿನ ರಹಸ್ಯವನ್ನ ನಿನ್ನ ಮಂತ್ರಿಗಳು ಹೇಳಲಿಲ್ಲವೆ…?” ಎಂದು ಕೇಳುತ್ತಾನೆ. ಆಗ ಜನಮೇಜಯನು ತನ್ನ ಮಂತ್ರಿಗಳ ಜೊತೆ ತನ್ನ ತಂದೆಯ ಮರಣದ ಕುರಿತಾದ ವಿಚಾರ ಹೇಳುವಂತೆ ಒತ್ತಾಯಿಸುತ್ತಾನೆ. ಆಗ ಅವರು ಒಂದೊಂದಾಗೇ ವಿವರಿಸುತ್ತಾರೆ. ಪರೀಕ್ಷಿತ ಮಹಾರಾಜ ಬೇಟೆಗೆ ಹೋಗಿದ್ದು ಅಲ್ಲಿ ಜಿಂಕೆ ತಪ್ಪಿಸಿಕೊಂಡು ಹೋಗಿದ್ದು, ಅದನ್ನ ಬೆನ್ನಟ್ಟಿ ಶಮೀಕನ ಆಶ್ರಮ ತಲುಪಿದ್ದು, ಶಮೀಕನ ಕೊರಳಿಗೆ ಸತ್ತ ಹಾವು ಹಾಕಿದ್ದು, ತಂದೆಗಾದ ಅವಮಾನಕ್ಕೆ ಶಮೀಕನ ಮಗ ಶೃಂಗಿ ರಾಜನನ್ನ ಶಪಿಸಿದ್ದು, ಶಮೀಕನಿಂದ ರಾಜನಿಗೆ ಎಚ್ಚರಿಕೆ ಸಂದೇಶ ಸಿಕ್ಕಿದ್ದು, ಪರೀಕ್ಷಿತ ಸುರಕ್ಷಾ ವ್ಯವಸ್ಥೆ ಮಾಡಿಕೊಂಡದ್ದು. ರಾಜನನ್ನು ಉಳಿಸಲು ಬರುತ್ತಿದ್ದ ಕಾಶ್ಯಪನನ್ನ ತಕ್ಷಕ ಯಥೇಚ್ಛವಾಗಿ ಹಣ ಕೊಟ್ಟು ಹಿಂದೆ ಕಳುಹಿಸಿದ್ದು. ಮಾಯಾ ವೇಷದಲ್ಲಿ ತಕ್ಷಕನ ಅನುಯಾಯಿಗಳು ಫಲವಸ್ತು ಕೊಟ್ಟಿದ್ದು ಅದರಲ್ಲಿ ಅಡಗಿದ್ದ ತಕ್ಷಕ ರಾಜನನ್ನು ಕೊಂದಿದ್ದು. ಹೀಗೆ ಎಲ್ಲವನ್ನೂ ವಿಸ್ತಾರವಾಗಿ ಹೇಳುತ್ತಾರೆ.

ಆಗ ಜನಮೇಜಯನು “ತಕ್ಷಕ ಮತ್ತು ಕಾಶ್ಯಪರ ಪ್ರಕರಣ ನಿಮಗೆ ಹೇಗೆ ಗೊತ್ತಾಯಿತು…?” ಎಂದು ಪ್ರಶ್ನಿಸುತ್ತಾನೆ. ಆಗ ಮಂತ್ರಿಗಳು ಅದನ್ನೂ ವಿವರಿಸುತ್ತಾರೆ. ತಕ್ಷಕ ಕಚ್ಚಿ ಸುಟ್ಟ ಹಾಕಿದ್ದ ವಟವೃಕ್ಷದಲ್ಲಿ ಮೊದಲೇ ಏರಿ ಕುಳಿತಿದ್ದ ಕಟ್ಟಿಗೆ ಮಾಡುವವನೊಬ್ಬನೂ ಸತ್ತು ಕಾಶ್ಯಪನಿಂದಾಗಿ ಬದುಕಿದಾತ ಅವರಿಬ್ಬರ ಕತೆಯನ್ನೂ ಮಂತ್ರಿಗಳಿಗೆ ತಿಳಿಸಿದ್ದನಂತೆ.

ಹೀಗೆ ಎಲ್ಲವನ್ನೂ ಕೇಳಿದ ಮೇಲೆ ಜನಮೇಜಯನಿಗೆ ತಕ್ಷಕನ ಮೇಲೆ ಅಸಾಧ್ಯವಾದ ಸಿಟ್ಟು ಬರುತ್ತದೆ. ಕಾಶ್ಯಪನಿಗೆ ಹಣದ ಆಮಿಷ ತೋರಿಸಿ ಹಿಂದೆ ಕಳುಹಿಸದೇ ಇದ್ದಲ್ಲಿ ತನ್ನ ತಂದೆ ಬದುಕುತ್ತಿದ್ದರು. ತಕ್ಷಕನ ಮೋಸದಿಂದಾಗಿ ತನ್ನ ತಂದೆ ಸಾಯಬೇಕಾಯಿತೆಂದು ನಿರ್ಣಯಿಸಿ ಉತ್ತಂಕ ಹೇಳಿದ ರೀತಿಯಲ್ಲಿ ಸರ್ಪಯಾಗ ಮಾಡಲು ನಿರ್ಧರಿಸುತ್ತಾನೆ.

ತನ್ನ ತಂದೆಯನ್ನ ಕೊಂದ ತಕ್ಷಕನ ವಿರುದ್ಧ ಸೇಡುತೀರಿಸುವುದಾಗಿ ನಿರ್ಣಯಿಸಿದ ಜನಮೇಜಯ, ಪುರೋಹಿತರನ್ನೂ, ಋತ್ವಿಜರನ್ನೂ ಕರೆದು ತನ್ನ ಮನದ ಅಭೀಷ್ಟೆಯನ್ನ ಹೇಳತೊಡಗುತ್ತಾನೆ “ಹೇ ಪಂಡಿತೋತ್ತಮರೇ ನನ್ನ ತಂದೆಯಾದ ಪರೀಕ್ಷಿತ ಮಹಾರಾಜನನ್ನ ತಕ್ಷಕನು ಯಾವ ರೀತಿ ವಿಷದಜ್ವಾಲೆಯಲ್ಲಿ ಸುಟ್ಟು ಕೊಂದನೋ ಅದೇ ರೀತಿಯಲ್ಲಿ ಅವನನ್ನ ಸುಟ್ಟು ಬಿಡಬೇಕೆಂದಿರುವೆ. ಇದಕ್ಕೇನಾದರೂ ಶಾಸ್ತ್ರೀಯವಾದ ವಿಧಿವಿಧಾನಗಳಿವೆಯೇ…?” ಆಗ ಅವರು “ಹೇ ರಾಜನ್ ಕೇವಲ ನಿನಗಾಗಿಯೇ ಮತ್ತು ನಿನ್ನಿಂದ ಮಾತ್ರವೇ ಮಾಡಬಹುದಾದ ಸರ್ಪಸತ್ರ ಎನ್ನುವ ಮಹಾಯಾಗವೊಂದಿದೆ. ಜನಮೇಜಯನನ್ನ ಬಿಟ್ಟರೆ ಇನ್ಯಾರಿಗೂ ಈ ಯಾಗ ಮಾಡಲಾಗುವುದಿಲ್ಲ. ಅದರ ವಿಧಿ ವಿಧಾನಗಳೂ ನಮಗೆ ಗೊತ್ತಿದೆ.” ಎನ್ನುತ್ತಾರೆ.

ಆಗ ಜನಮೇಜಯನು ಅತ್ಯಂತ ಪ್ರಸನ್ನನಾಗಿ ಸರ್ಪಯಾಗದ ತಯಾರಿಯಲ್ಲಿ ತೊಡಗಿಕೊಳ್ಳುವಂತೆ ಅವರೆಲ್ಲರನ್ನ ಕೇಳಿಕೊಳ್ಳುತ್ತಾನೆ. ಅವರೆಲ್ಲರ ಮೇಲುಸ್ತುವಾರಿಯಲ್ಲಿ ಯಜ್ಞಶಾಲೆಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಶಾಸ್ತ್ರೀಯ ರೀತಿಯಲ್ಲಿ ಯಜ್ಞವೇದಿಕೆಯನ್ನ ನಿರ್ಮಿಸಲಾಯಿತು. ಯಜ್ಞಶಾಲೆಯ ತುಂಬಾ ಯಜ್ಞಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಲಾಯಿತು. ಇವೆಲ್ಲಾ ನಡೆಯುತ್ತಿರುವಾಗಲೇ ವಾಸ್ತುವಿಶಾರದರಾದ, ಶಿಲ್ಪಶಾಸ್ತ್ರ ಬಲ್ಲವರಾದ “ಸೂತ”ರು ಆಗಮಿಸಿ ಅಲ್ಲಿನ ಸಿದ್ಧತೆಗಳನ್ನ ಅವಲೋಕಿಸುತ್ತಾ ಜನಮೇಜಯನ ಬಳಿ “ರಾಜ.. ಶಾಸ್ತ್ರ ಬಲ್ಲವರೇ ಈ ಯಜ್ಞ ಶಾಲೆ, ವೇದಿಕೆ ಮಾಡಿದ್ದರೂ ಈ ಸ್ಥಳ ಮತ್ತು ಇದನ್ನ ನಿರ್ಮಿಸಲು ಪ್ರಾರಂಭಿಸಿದ ಮುಹೂರ್ತ ಇವನ್ನು ಶಾಸ್ತ್ರೀಯವಾಗಿ ನೋಡುವಾಗ ಒಬ್ಬ ತೇಜಸ್ವಿ ಬ್ರಾಹ್ಮಣ ನ ನಿಮಿತ್ತವಾಗಿ ಈ ಯಾಗವು ಅರ್ಧದಲ್ಲಿಯೇ ನಿಲ್ಲುವ ಲಕ್ಷಣಗಳು ಕಾಣಿಸುತ್ತಿವೆ” ಎನ್ನುತ್ತಾನೆ.

ಆ ಕೂಡಲೇ ರಾಜನು ತನ್ನ ಅಪ್ಪಣೆಯಿಲ್ಲದೆ ಯಾರೊಬ್ಬರನ್ನೂ ಯಜ್ಞ ಶಾಲೆಯೊಳಗೆ ಬಿಡಬಾರದೆಂಬ ಆಜ್ಞೆ ಹೊರಡಿಸುತ್ತಾನೆ. ಅದಾದ ಬಳಿಕೆ ಜನಮೇಜಯನಿಗೆ ಯಜ್ಞ ದೀಕ್ಷೆ ಕೊಡಿಸಲಾಗುತ್ತದೆ. ಅಷ್ಟಾಗಿಯೂ ಯಜ್ಞವಿನಾಶಕ ಲಕ್ಷಣಗಳು ತೋರಿಬರುತ್ತದೆ. ಅದರ ಹೊರತಾಗಿಯೂ ಪೂರ್ವನಿರ್ಧಾರಿತ ಸಮಯಕ್ಕೆ ಸರ್ಪಸತ್ರ ಮಹಾಯಾಗ ಆರಂಭವಾಗುತ್ತದೆ…

ಮುಂದೆ….???

– ಗುರುಪ್ರಸಾದ್ ಆಚಾರ್ಯ