ವ್ಯಾಸ ಮಹಾಭಾರತ – ಭಾಗ 31 – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 31

ಸರ್ಪಯಾಗ ಮಾಡಿದ ಜನಮೇಜಯನ ತಂದೆಯ ಹೆಸರು ಪರೀಕ್ಷಿತ ಅಂತ. ಕುರುವಂಶವೇ ಸಂಪೂರ್ಣವಾಗಿ ಪರಿಕ್ಷೀಣವಾಗಿ ಹೋಗುವುದರಲ್ಲಿದ್ದಾಗ ಅಭಿಮನ್ಯುವಿನ ಮಗನಾಗಿ ಹುಟ್ಟಿದ್ದರಿಂದಾಗಿ “ಪರೀಕ್ಷಿತ” ಎಂಬ ಹೆಸರು ಬಂತು.

ಸರ್ಪಯಾಗದಲ್ಲಿ ಭಾಗವಹಿಸಿದ್ದ ಶ್ರೇಷ್ಠರು: ಚ್ಯವನ ಮಹರ್ಷಿಯ ವಂಶದಲ್ಲಿ ಹುಟ್ಟಿದ್ದ ಚಂಡಭಾರ್ಗವನೆಂಬ ಬ್ರಾಹ್ಮಣನು ಸರ್ಪಯಾಗದ ಹೋತೃವಾಗಿದ್ದನು. ವಿದ್ವಾಂಶನಾದ ಕೌತ್ಸಜೈಮಿನಿಯು ಸರ್ಪಯಾಗದ ಉದ್ಗಾತೃವಾಗಿದ್ದನು. ಶಾರ್ಘಂಗರವನು ಬ್ರಹ್ಮನಾಗಿಯೂ, ಪಿಂಗಲನು ಅಧ್ವರ್ಯುವಾಗಿಯೂ ಇದ್ದರು. ಪುತ್ರರಿಂದಲೂ ಮತ್ತು ಶಿಷ್ಯರಿಂದಲೂ ಕೂಡಿದ್ದ ವ್ಯಾಸರೂ, ಉದ್ಧಾಲಕ, ಪ್ರಮತಕ, ಶ್ವೇತಕೇತು, ಅಸಿತ, ದೇವಲ, ನಾರದ, ಪರ್ವತ, ಆತ್ರೇಯ, ಕುಂಡ, ಜಠರ, ದ್ವಜಶ್ರೇಷ್ಠನಾದ ಕಾಲಘಟ ವಾತ್ಸ್ಯ, ಶ್ರುತಶ್ರವ, ಕೋಹಲ, ದೇವಶರ್ಮಾ, ಮೌದ್ಗಲ್ಯ ಮತ್ತು ಸಮಸೌರಭ ಇತ್ಯಾದಿ ಮಹಾನ್ ಋಷಿಗಳು ಭಾಗವಹಿಸಿದ್ದರು.

ಮಹಾನ್ ತೇಜಸ್ವೀ ಋಷಿಗಳ ಸಹಕಾರದೊಂದಿಗೆ ಸರ್ಪಯಾಗ ಆರಂಭವಾಯಿತು. ಋತ್ವಿಜರು ಸರ್ಪಗಳ ಹೆಸರನ್ನ ಕರೆದು ಅಗ್ನಿಯ ಬಳಿಗೆ ಆಹ್ವಾನಿಸಿ “ಸ್ವಾಹಾ” ಅನ್ನುತ್ತಿದ್ದಂತೆ…. ಆಯಾಯಾ ಸರ್ಪಗಳು ಮಂತ್ರ ಶಕ್ತಿಯಿಂದ ಸೆಳೆಯಲ್ಪಟ್ಟು ಯಜ್ಞಕುಂಡದೊಳಗೆ ಬಿದ್ದು ಸುಟ್ಟು ಭಸ್ಮವಾಗತೊಡಗಿತು… ಹೀಗೇಯೇ ಒಂದೊಂದಾಗಿ ಸರ್ಪಗಳನ್ನ ಋತ್ವಿಜರು ಆಹ್ವಾನಿಸತೊಡಗಿದರು. ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸರ್ಪಗಳು ಅಗ್ನಿಗಾಹುತಿಯಾಗುತ್ತಿದ್ದವು.

ಇತ್ತ ಜನಮೇಜಯ ಸರ್ಪಯಾಗ ಆರಂಭಿಸಿದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಕನು ತನ್ನ ಮಿತ್ರನಾದ ಇಂದ್ರನ ಮೊರೆ ಹೋದನು. ಇಂದ್ರ ತನ್ನ ಮಿತ್ರನಿಗೆ ತನ್ನ ಅರಮನೆಯಲ್ಲೇ ಆಶ್ರಯವನ್ನಿತ್ತನು. ಇಂದ್ರನ ಅರಮನೆಯಲ್ಲಿ ತಕ್ಷಕನು ನಿರಾಳವಾಗಿರತೊಡಗಿದನು ಆದರೆ ವಾಸುಕಿಗೆ ಮಾತ್ರ ತನ್ನವರ ವಿನಾಶವನ್ನ ನೋಡಲಾಗುತ್ತಿರಲಿಲ್ಲ. ಒಂದಷ್ಟು ಕಾಲ ಸುಮ್ಮನಿದ್ದ ವಾಸುಕಿ ನಂತರ ತಡೆಯಲಾಗದೇ ತನ್ನ ತಂಗಿಯನ್ನ ಕರೆದು. “ತಂಗೀ ನನ್ನ ಅನುಜರೆಲ್ಲಾ ಜನಮೇಜಯ ಯಾಗಕ್ಕೆ ಆಹುತಿಯಾಗುತ್ತಿರುವುದನ್ನ ನನಗೆ ನೋಡಲಾಗುತ್ತಿಲ್ಲ… ಈಗಲೋ ಆಮೇಲೋ ನಾನೂ ಕೂಡಾ ಅತ್ತ ಸೆಳೆಯಲ್ಪಟ್ಟು ಆ ಅಗ್ನಿಗಾಹುತಿಯಾಗುವೆನೇನೋ…. ಈಗಲಾದರೂ ನಿನ್ನ ಪುತ್ರನಿಗೆ ಹೇಳಿ ಈ ಯಾಗವನ್ನ ನಿಲ್ಲುವಂತೆ ಮಾಡು” ಎಂದು ಕೇಳಿಕೊಳ್ಳುತ್ತಾನೆ. ಕೂಡಲೇ ಜರತ್ಕಾರುವು ತನ್ನ ಮಗನನ್ನ ಕರೆಸಿ ಆತನಿಗೆ ತನ್ನ ಮಾತುಲರಿಗಾಗುತ್ತಿರೋ ಘೋರ ಶಿಕ್ಷೆಯ ವಿವರಗಳನ್ನೆಲ್ಲಾ ತಿಳಿಸಿ ಈ ಯಾಗವನ್ನ ನಿಲ್ಲುವಂತೆ ಮಾಡು ಎಂದು ಕೇಳುತ್ತಾಳೆ. ಆಗ ಆಸ್ತೀಕನು ತನ್ನ ತಾಯಿಗೂ ಮತ್ತು ಮಾವನಾದ ವಾಸುಕಿಗೆ ಅಭಯವನ್ನಿತ್ತು ಆ ಯಾಗವನ್ನ ನಿಲ್ಲಿಸುವ ಸಲುವಾಗಿ ಯಾಗ ನಡೆಯುತ್ತಿರುವಲ್ಲಿಗೆ ತೆರಳುತ್ತಾನೆ.

ಆಸ್ತೀಕನು ನೇರವಾಗಿ ಸರ್ಪಯಾಗದ ದ್ವಾರದ ಬಳಿ ಬಂದು ಒಳಹೋಗಲು ಅನುವಾದಾಗ ಅಲ್ಲಿನ ದ್ವಾರಪಾಲರು ಅವರನ್ನ ತಡೆಯುತ್ತಾರೆ. ರಾಜರ ಅನುಮತಿ ಇಲ್ಲದೆ ಯಾರನ್ನೂ ಒಳಬಿಡಲಾಗುವುದಿಲ್ಲ ಎಂದು ದ್ವಾರ ಪಾಲರು ಹೇಳುತ್ತಾರೆ. ಇದನ್ನ ಕೇಳಿಸಿದ ಆಸ್ತೀಕ ದ್ವಾರದ ಬಳಿಯೇ ನಿಂತು ಆ ಯಾಗದ ಕುರಿತಾಗಿ ಜೋರಾಗಿ ಹೊಗಳಲು ಪ್ರಾರಂಭಿಸುತ್ತಾನೆ. “ಹೇ ಜನಮೇಜಯ, ನಾನು ಅನೇಕ ಯಾಗಯಜ್ಞಾದಿಗಳನ್ನ ಕಂಡಿದ್ದೇನೆ ಹಲವು ಯಾಗಗಳ ಕುರಿತಾಗಿ ಹಿರಿಯರಿಂದ ಕೇಳಿ ತಿಳಿದಿದ್ದೇನೆ. ಅಂತಹ ಯಾಗಗಳಿಗೆ ಸಮಾನವಾದ ಯಾಗ, ನೀನು ಮಾಡುತ್ತಿರುವ ಈ ಯಾಗ.” ಎನ್ನುತ್ತಾ ಹಿಂದೆ ನಡೆದ ಹಲವು ಮಹಾಯಾಗಗಳನ್ನ ಹೆಸರಿಸುತ್ತಾನೆ. “ಸೋಮ, ವರುಣ, ಪ್ರಜಾಪತಿ, ಇಂದ್ರ, ಪುರು, ಹರಿಮೇಧ, ರಂತಿದೇವ, ಗಯ, ಶಶಬಿಂದು, ಕುಬೇರ, ನೃಗ, ಅಜಮೀಢ, ಶ್ರೀರಾಮಚಂದ್ರ, ಯುಧಿಷ್ಟಿರ, ವ್ಯಾಸ ಹೀಗೆ ಅವರೆಲ್ಲರೂ ಮಾಡಿದ ಯಾಗಗಳು ಜಗತ್ಪ್ರಸಿದ್ಧವಾಗಿದೆ. ಅದರಂತೆಯೇ ನಿನ್ನಯಾಗವೂ ಬಹಳ ಶ್ರೇಷ್ಠವಾದ ಯಾಗವಾಗಿದೆ.” ಎನ್ನುತ್ತಾನೆ. ಅದಾದ ಬಳಿಕ ಅಲ್ಲಿ ಭಾಗವಹಿಸಿದ್ದ ಋತ್ವಿಜರನ್ನೂ ಹೊಗಳಿ “ವೇದವೇದಾಂಗ ಪಾರಂಗತರಾದ ವಿದ್ವಾಂಸರು ಈ ಯಾಗದ ಋತ್ವಿಜರಾಗಿದ್ದಾರೆ ಹಾಗಾಗಿ ಈ ಯಾಗ ಫಲಕೊಡುವುದರಲ್ಲಿ ಸಂಶಯವೇ ಇಲ್ಲ ಎಂದೆನಿಸುತ್ತದೆ” ಎನ್ನುತ್ತಾನೆ.

ಆ ಬಳಿಕ ಜ್ವಾಜಲ್ಯಮಾನವಾದ ಅಗ್ನಿಯೇ ಈ ಯಾಗದಲ್ಲಿ ಪ್ರತಿಷ್ಟಿತವಾಗಿದೆ. ಆತ ಹೋಮದ್ರವ್ಯಗಳನ್ನು ಆಯಾಯ ದೇವತೆಗಳಿಗೆ ಒಪ್ಪಿಸುತ್ತಿದ್ದಾನೆ ಎನ್ನುತ್ತಾ ಯಜ್ಞೇಶ್ವರನನ್ನ ಹೊಗಳುತ್ತಾನೆ. ಅದಾದ ಬಳಿಕ ಕೊನೆಯಲ್ಲಿ ಜನಮೇಜಯನನ್ನ “ನೀನು ಇಂದ್ರನಿಗೆ ಸಮಾನವಾಗಿರುವೆ ಧರ್ಮಾಧರ್ಮಗಳ ವಿವೇಚನೆಯಲ್ಲಿ ಯಮಧರ್ಮನಿಗೆ ಸಮಾನನಾಗಿರುವೆ. ಸಕಲ ಗುಣ ಪರಿಪೂರ್ಣತೆಯಲ್ಲಿ ಶ್ರೀಕೃಷ್ಣನಿಗೆ ಸಮಾನನಾಗಿರುವೆ.” ಎಂದು ಉಚ್ಚ ಕಂಠದಿಂದ ಹಾಡಿಹೊಗಳತೊಡಗುತ್ತಾನೆ.
ಆತನ ಉಚ್ಚಕಂಠದ ಗುಣಗಾನ ಕೇಳಿ ಯಾಗದಲ್ಲಿ ಭಾಗವಹಿಸಿದ್ದ ಎಲ್ಲರೂ ಸುಪ್ರೀತರಾಗುತ್ತಾರೆ.

ಮುಂದೆ……

-ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!