ವ್ಯಾಸ ಮಹಾಭಾರತ – ಭಾಗ 32 – News Mirchi

ವ್ಯಾಸ ಮಹಾಭಾರತ – ಭಾಗ 32

ಆಸ್ತೀಕನ ಮಾತುಗಳನ್ನ ಕೇಳಿ ಪ್ರಭಾವಿತನಾದ ಜನಮೇಜಯ ಋತ್ವಿಜರನ್ನ ಪ್ರಶ್ನಿಸುತ್ತಾನೆ. “ಋತ್ವಿಜರೇ ಈ ಯಾಗವನ್ನೂ ನಿಮ್ಮನ್ನೂ ಯಾಗಾಗ್ನಿಯನ್ನು ಇಷ್ಟೊಂದು ಅದ್ಭುತವಾಗಿ ಸ್ತುತಿಸುತ್ತಿರುವ ಈ ಬಾಲಕನ ಮಾತುಗಳನ್ನ ಕೇಳುತ್ತಿದ್ದರೆ ಮನಕ್ಕೆ ಮುದವೆನಿಸುತ್ತಿದೆ. ಬಾಲಕನಾದರೂ ಈತ ಜ್ಞಾನದಲ್ಲಿ ಹಿರಿಯನಾಗಿದ್ದಾನೆ. ಇವನಿಗೆ ಇಚ್ಛಿತ ವರ ನೀಡುವ ಮನಸ್ಸಾಗುತ್ತಿದೆ. ಇದರ ಕುರಿತು ನಿಮ್ಮ ಅಭಿಪ್ರಾಯವೇನು…?”

ಆಗ ಋತ್ವಿಜರು “ಹೇ ರಾಜ ಬ್ರಾಹ್ಮಣನು ಬಾಲಕನಾದರೂ ರಾಜನು ಅವನಿಗೆ ಗೌರವಕೊಡತಕ್ಕದ್ದು ನ್ಯಾಯವೇ ಆಗಿದೆ. ಅದರಲ್ಲೂ ಈತ ವಿದ್ವಾಂಸನಂತೆ ಗೋಚರಿಸುತ್ತಿದ್ದಾನೆ. ಹಾಗಾಗಿ ಅವನಿಗೆ ವರ ಕೊಡುವುದು ಸಾಧುವೇ ಆಗಿದೆ. ಆದರೆ ಇನ್ನೂ ತಕ್ಷಕನ ಆಹುತಿ ಆಗಿಲ್ಲ. ಕೇವಲ ಅವನೊಬ್ಬನ ತಪ್ಪಿಗೆ ಇಡೀ ಸರ್ಪಕುಲವೇ ನಾಶವಾಗುತ್ತಿದೆ. ಹಾಗಾಗಿ ಅವನ ಆಹುತಿಯಾಗದೆ ಈತನಿಗೆ ವರ ಕೊಡುವುದು ಸಮಂಜಸವಲ್ಲ” ಎನ್ನುತ್ತಾರೆ. ಕೂಡಲೇ ಎಚ್ಚೆತ್ತುಕೊಂಡ ಜನಮೇಜಯ… “ಋತ್ವಿಜರೇ ಈ ಕೂಡಲೇ ಆ ತಕ್ಷಕನನ್ನೇ ಅವಾಹಿಸಿ” ಆಗ ಋತ್ವಿಜರು ತಮ್ಮ ದಿವ್ಯದೃಷ್ಟಿಯಿಂದ ತಕ್ಷಕನು ಇಂದ್ರನಲ್ಲಿ ಆಶ್ರಯ ಪಡೆದ ವಿಚಾರವಾಗಿ ತಿಳಿಸುತ್ತಾರೆ.

ಆ ಹೊತ್ತಿಗೆ ಇಂದ್ರನು ತಕ್ಷಕನನ್ನ ರಕ್ಷಿಸುವ ನಿಟ್ಟಿನಲ್ಲಿ ಯಜ್ಞವೇದಿಕೆಯ ಮೇಲ್ಭಾಗದಲ್ಲಿ ಬಂದು ನಿಂತಿದ್ದನು. ಹೋತೃಗಳು ತಕ್ಷಕಾಕರ್ಷಕ ಮಂತ್ರ ಪಠಿಸುತ್ತಿದ್ದಂತೆ ಯಾಗದ ಕಡೆ ಸೆಳೆಯಲ್ಪಟ್ಟಾಗ ತಕ್ಷಕನು ಇಂದ್ರನ ಉತ್ತರೀಯದಲ್ಲಿ ಅವಿತು ಕುಳಿತನು. ತಕ್ಷಕಾಕರ್ಷಕ ಮಂತ್ರಕ್ಕೂ ತಕ್ಷಕ ಬಾರದೆ ಇದ್ದುದನ್ನ ಕಂಡಾಗ ಜನಮೇಜಯನು ಹೋತೃಗಳ ಬಳಿ “ತಕ್ಷಕನು ಇಂದ್ರನಲ್ಲಿ ಆಶ್ರಯ ಪಡೆದಿರುವುದರಿಂದಾಗಿ ಬರುತ್ತಿಲ್ಲವೆಂದಾದರೆ ಇಂದ್ರನ ಸಹಿತ ತಕ್ಷಕನನ್ನ ಆವಾಹಿಸಿ ” ಎನ್ನುತ್ತಾನೆ.

ಕೂಡಲೇ ಋತ್ವಿಜರು
“ಸಹೇಂದ್ರಂ ತಕ್ಷಕಂ ಜುಹೋಮಿ – ಸ್ವಾಹಾ” ಎನ್ನುವ ಮಂತ್ರ ಪಠಿಸಲು ಪ್ರಾರಂಭಿಸುತ್ತಾರೆ… ಯಾವಾಗ ಹೋತೃಗಳು ಇಂದ್ರನ ಸಹಿತವಾಗಿ ತಕ್ಷಕನನ್ನ ಆವಾಹಿಸುತ್ತಾರೋ ಆಗ ಇಂದ್ರನಿಗೇ ಭಯವಾಗಿ ತಕ್ಷಕನನ್ನ ತನ್ನ ಉತ್ತರೀಯದಿಂದ ಕೊಡವಿ ತನ್ನ ಲೋಕಕ್ಕೆ ತೆರಳುತ್ತಾನೆ. ಇದರಿಂದಾಗಿ ತಕ್ಷಕನು ಯಜ್ಞವೇದಿಕೆಯ ಸಮೀಪಕ್ಕೆ ಸೆಳೆಯಲ್ಪಡುತ್ತಾನೆ. ಇದನ್ನ ಕಂಡ ಋತ್ವಿಜರು ಹರ್ಷವ್ಯಕ್ತಪಡಿಸುತ್ತಾ “ಹೇ ರಾಜನ್ ತಕ್ಷಕನು ಮಂತ್ರದ ಅಧೀನಕ್ಕೊಳಪಟ್ಟಿರುವುದು ಗೋಚರವಾಗುತ್ತಿದೆ. ಈಗ ನೀನು ಆ ಬ್ರಾಹ್ಮಣ ಬಾಲಕನಿಗೆ ವರವನ್ನು ಕೊಡಬಹುದಾಗಿದೆ.” ಎನ್ನುತ್ತಾರೆ. ಕೂಡಲೇ ಜನಮೇಜಯನು ಆಸ್ತೀಕನನ್ನು ಕರೆತರಿಸಿ “ನಿನ್ನ ವಿದ್ವತ್ತಿಗೆ ಮೆಚ್ಚಿ ನಿನಗೆ ವರವೊಂದನ್ನ ಕೊಡಲಿಚ್ಛಿಸಿದ್ದೇನೆ. ಯೋಗ್ಯವಾದ ವರವನ್ನೇ ಕೇಳು. ಅದು ಕೊಡಬಾರದಂತಹ ವರವಾಗಿದ್ದರೂ ನಾನು ಕೊಟ್ಟೇ ತೀರುವೆನು.” ಎನ್ನುತ್ತಾನೆ.

ಅದೇ ಹೊತ್ತಿಗೆ ತಕ್ಷಕನು ಅರಚುತ್ತಾ ಯಜ್ಞವೇದಿಕೆಯ ಸಮೀಪಕ್ಕೆ ಬಂದು ಪ್ರಜ್ಞಾಹೀನನಾಗುತ್ತಾನೆ. ಇದನ್ನ ಕಂಡ ಆಸ್ತೀಕ ಕೂಡಲೇ “ಹೇ ಮಹಾರಾಜ ವರವನ್ನು ಕೊಡುವ ಇಚ್ಛೆ ಇದ್ದರೆ ಇಗೋ ವರವೊಂದನ್ನ ಕೇಳುತ್ತೇನೆ. ಈ ಕೂಡಲೇ ಈ ಯಾಗವು ಪರಿಸಮಾಪ್ತಿಯಾಗಲಿ. ಇನ್ಯಾವ ಸರ್ಪಗಳೂ ಯಾಗಕ್ಕಾಹುತಿಯಾಗದಿರಲಿ.” ಎನ್ನುತ್ತಾನೆ. ಇದನ್ನ ಕೇಳಿದ ರಾಜನು ಬಹುವಾಗಿ ಬೇಸರಗೊಂಡು “ಇಂತಹ ಹೊತ್ತಲ್ಲಿ ಈ ಯಾಗ ನಿಲ್ಲಕೂಡದು. ನಿನಗೆ ಯೋಗ್ಯವಾದ ವರವನ್ನೇ ಕೇಳು. ಈಗ ಕೇಳಿದ ವರದಿಂದ ನಿನಗೇನೂ ಲಾಭವಿರದು.” ಎಂದು ಪರಿಪರಿಯಾಗಿ ಕೇಳಿ ಆತನ ನಿರ್ಣಯವನ್ನು ಬದಲಾಯಿಸುವಂತೆ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಆಸ್ತೀಕನು ರಾಜನ ಮಾತಿಗೆ ಒಪ್ಪುವುದಿಲ್ಲ. ಕೊನೆಗೂ ಜನಮೇಜಯ ಆಸ್ತೀಕನಿಗೆ ಅವನು ಬೇಡಿದ ವರವನ್ನು ಕೊಟ್ಟು ಯಾಗವನ್ನ ಅರ್ಧದಲ್ಲಿಯೇ ನಿಲ್ಲಿಸುತ್ತಾನೆ.

(ತಕ್ಷಕನ ಆವಾಹನೆಯಾಗಿದ್ದರೂ ಆತ ಯಜ್ಞಕುಂಡದಲ್ಲಿ ಬೀಳಲಿಲ್ಲ. ಇದಕ್ಕೆ ಕಾರಣ ಆ ಹೊತ್ತಿಗೆ ಆಸ್ತೀಕನು ಮೂರು ಬಾರಿ ತಿಷ್ಠ, ತಿಷ್ಠ, ತಿಷ್ಠ ಅರ್ಥಾತ್ ನಿಲ್ಲು, ನಿಲ್ಲು, ನಿಲ್ಲು ಅಂದಿದ್ದನಂತೆ ಅದಾಗಿ ಕ್ಷಣಮಾತ್ರದಲ್ಲಿ ಆಸ್ತೀಕನಿಗೆ ವರವು ಸಿದ್ದಿಸಿದ್ದರಿಂದ ತಕ್ಷಕನ ಜೀವ ಉಳಿಯುತ್ತದೆ. ಇದು ಆಸ್ತೀಕ ತಪಃಶಕ್ತಿಯನ್ನ ಪರಿಚಯಿಸುತ್ತದೆ.)

ಆ ನಂತರ ಜನಮೇಜಯನು ಋತ್ವಿಜರೆಲ್ಲರನ್ನೂ ಯಥಾಪ್ರಕಾರ ಸತ್ಕರಿಸಿ ಕಳುಹಿಸುತ್ತಾನೆ. ಆಸ್ತೀಕನಿಗೆ ಮುಂದೆ ನಡೆಯಲಿರುವ ಅಶ್ವಮೇಧಯಾಗಕ್ಕೆ ಆಗಲೇ ಆಹ್ವಾನವನ್ನಿತ್ತು ಕಳುಹಿಸಿ ಕೊಡುತ್ತಾನೆ.

ಜನಮೇಜಯನಿಂದ ಸತ್ಕಾರಗಳನ್ನ ಸ್ವೀಕರಿಸಿದ ಆಸ್ತೀಕ ನೇರವಾಗಿ ತನ್ನ ತಾಯಿ ಮತ್ತು ಮಾವನಾದ ವಾಸುಕಿಯ ಬಳಿ ಹೋಗಿ ತಾನು ಸರ್ಪಯಾಗವನ್ನು ಅರ್ಧಕ್ಕೆ ನಿಲ್ಲಿಸಿದ ಬಗೆಯನ್ನ ಸವಿವರವಾಗಿ ಹೇಳುತ್ತಾನೆ. ಇದರಿಂದ ಸುಪ್ರೀತನಾದ ವಾಸುಕಿ ಮತ್ತವನ ಅನುಜರು ಆಸ್ತೀಕನಿಗೆ “ವರವೊಂದನ್ನ ದಯಪಾಲಿಸುತ್ತೇವೆ, ಬೇಕಾದದ್ದನ್ನ ಕೇಳಿಕೋ ಅನ್ನುತ್ತಾರೆ.” ಆಗ ಆಸ್ತೀಕನು, “ಲೋಕದಲ್ಲಿ ಬ್ರಾಹ್ಮಣರೇ ಆಗಲೀ ಇತರ ಮಾನವರೇ ಆಗಲಿ ನನ್ನ ಈ ಧರ್ಮಾಖ್ಯಾನವನ್ನ ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಪ್ರಸನ್ನಾತ್ಮರಾಗಿ ಪಠನ ಮಾಡಿದರೆ ಅವರಿಗೆ ನಿಮ್ಮಿಂದ ಯಾವ ವಿಧವಾದ ವಿಪತ್ತೂ ಬಾರದಿರಲಿ.” ಎಂದು ಕೇಳುತ್ತಾನೆ. ಆಗ ವಾಸುಕಿಯು “ಖಂಡಿತವಾಗಿಯೂ ನಿನಗೀ ವರವನ್ನ ದಯಪಾಲಿಸುತ್ತೇವೆ. ಅಷ್ಟು ಮಾತ್ರವಲ್ಲ, ಅಸಿತ, ಅರ್ತಿಮಂತ ಮತ್ತು ಸುನೀಥ ಈ ನಾಮಗಳನ್ನ ಹಗಲಿನಲ್ಲಿಯೇ ಆಗಲಿ ರಾತ್ರಿಯಲ್ಲಿಯೇ ಆಗಲಿ ಯಾರು ಪುನಶ್ಚರಣೆ ಮಾಡುತ್ತಾರೆಯೋ ಅವರಿಗೂ ಸಹ ಸರ್ಪಗಳಿಂದ ಭಯವಿರುವುದಿಲ್ಲ.

ಯೋ ಜರತ್ಕಾರುಣಾ ಜಾತೋ ಜರತ್ಕಾರ್ವಾಂ ಮಹಾಯಶಾಃ |
ಆಸ್ತೀಕಃ ಸರ್ಪಸತ್ರೇ ವಃ ಪನ್ನಗಾನ್ಯೋಭ್ಯರಕ್ಷತ |
ತಂ ಸ್ಮರಂತಂ ಮಹಾಭಾಗಾ ನ ಮಾಂ ಹಿಂಸಿತುಮರ್ಹಥ ||

ಜರತ್ಕಾರುಮಹರ್ಷಿಯಿಂದ ಜರತ್ಕಾರು ನಾಗಕನ್ಯೆಯಲ್ಲಿ ಮಹಾಮಹಿಮನಾದ ಯಾವನು ಜನಿಸಿದನೋ ಯಾವನು ಸರ್ಪಯಾಗದಲ್ಲಿ ಭಸ್ಮೀಭೂತರಾಗುತ್ತಿದ್ದ ನಿಮ್ಮನ್ನು ಸಂರಕ್ಷಿಸಿದನೋ ಅಂತಹ ಮಹಾಮಹಿಮನಾದ ಆಸ್ತೀಕನನ್ನು ಸ್ಮರಿಸುತ್ತಿರುವ ನನ್ನನ್ನು ಮಹಾಭಾಗರಾದ ನೀವು ಹಿಂಸಿಸುವುದು ಯೋಗ್ಯವಲ್ಲ, ಹೀಗೆಂದು ಹೇಳಿಕೊಂಡರೂ; ಈ ಶ್ಲೋಕವನ್ನು ಒಂದೆರಡು ಬಾರಿ ಉಚ್ಚರಿಸಿದರೂ ಸರ್ಪಗಳು ಹತ್ತಿರವೂ ಸುಳಿಯುವುದಿಲ್ಲ. ಸರ್ಪವು ಕಣ್ಣಿಗೆ ಬಿದ್ದೊಡನೆ ಹೀಗೆ ಹೇಳಬೇಕು :

ಸರ್ಪಾಪಸರ್ಪ ಭದ್ರಂ ತೇ ಗಚ್ಛ ಸರ್ಪ ಮಹಾವಿಷ |
ಜನಮೇಜಯಯಜ್ಞಾಂತೇ ಆಸ್ತೀಕವಚನಂ ಸ್ಮರ ||

ಮಹಾವಿಷವುಳ್ಳ ಮಹಾಸರ್ಪವೇ ಅತ್ತ ಸರಿ. ಇಲ್ಲಿಂದ ಹೊರಟು ಹೋಗು. ನಿನಗೆ ಮಂಗಳವಾಗಲಿ ಜನಮೇಜಯನು ಮಾಡಿದ ಸರ್ಪಯಾಗದ ಅಂತ್ಯದಲ್ಲಿ ಮಹಾಮಹಿಮನಾದ ಆಸ್ತೀಕನು ನಿನ್ನ ಪೂರ್ವಜರನ್ನು ಕುರಿತು ಏನು ಹೇಳಿದ್ದನೆಂಬುದನ್ನು ಸ್ಮರಿಸು.- ಹೀಗೆಂದು ಹೇಳುವವನಿಗೆ ಸರ್ಪಗಳ ಭಯವಿರುವುದಿಲ್ಲ.

ಆಸ್ತೀಕನು ಹೇಳಿದ ಮಾತುಗಳನ್ನು ಜ್ಞಾಪಕಕ್ಕೆ ತಂದ ಮೇಲೂ ಯಾವ ಸರ್ಪವು ತನ್ನ ಪಾಡಿಗೆ ತಾನು ಹೊರಟು ಹೋಗುವುದಿಲ್ಲವೋ ಅಂತಹ ಸರ್ಪದ ತಲೆಯು ಶಿಂಶವೃಕ್ಷದ ಫಲದಂತೆ ನೂರಾರು ಹೋಳಾಗುತ್ತದೆ. ಸರ್ಪಶ್ರೇಷ್ಠನ ಮಾತುಗಳನ್ನ ಕೇಳಿ ಆಸ್ತೀಕನು ಅತ್ಯಂತ ಪ್ರಸನ್ನನಾಗುತ್ತಾನೆ.

ಇಲ್ಲಿಗೆ ಆದಿಪರ್ವದಲ್ಲಿನ ಉಪಪರ್ವ ಆಸ್ತೀಕ ಪರ್ವ ಮುಕ್ತಾಯವಾಗುತ್ತದೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.