Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ವ್ಯಾಸ ಮಹಾಭಾರತ – ಭಾಗ 33 ಆದಿಪರ್ವ – News Mirchi

ವ್ಯಾಸ ಮಹಾಭಾರತ – ಭಾಗ 33 ಆದಿಪರ್ವ

ಜನಮೇಜಯನ ಸರ್ಪಯಾಗಕ್ಕೆ ಸ್ವತಃ ವ್ಯಾಸರೇ ತಮ್ಮ ಶಿಷ್ಯವೃಂದದೊಂದಿಗೆ ಆಗಮಿಸಿದ್ದರು. ವ್ಯಾಸರು ಪಾಂಡವರ ಪಿತಾಮಹರು. ಪರಾಶರರಿಗೆ ಕನ್ಯೆಯಾದ ಕಾಲಿ (ಸತ್ಯವತಿ)ಯಲ್ಲಿ ಯಮುನಾನದಿಯ ಮಧ್ಯದ ದ್ವೀಪದಲ್ಲಿ ಹುಟ್ಟಿದವರೇ “ಕೃಷ್ಣದ್ವೈಪಾಯನರು” ಅಂದರೆ “ವ್ಯಾಸ”ರು. ಅವರು ಹುಟ್ಟಿದೊಡನೆಯೇ ಆತ್ಮಸಂಕಲ್ಪದಿಂದಲೇ ದೊಡ್ಡವರಾದರು. ಹುಟ್ಟಿನಿಂದಲೇ ಮಹಾತಾಪಸಿಯಾಗಿದ್ದರು. ವೇದವೇದಾಂಗಗಳನ್ನೆಲ್ಲಾ ಅರಿತಿದ್ದರು. ಒಂದೇ ಆಗಿದ್ದ ವೇದದ ರಾಶಿಯನ್ನು ಋಗ್, ಯಜುರ್, ಸಾಮ, ಅಥರ್ವಣ ಗಳೆಂಬ ನಾಲ್ಕುವೇದಗಳಾಗಿ ವಿಂಗಡಿಸಿದ ಬ್ರಹ್ಮರ್ಷಿಗಳಾಗಿದ್ದರು.

ಇಂಥಾ ವ್ಯಾಸರು ಜನಮೇಜಯನಲ್ಲಿಗೆ ಬಂದಾಗ ರಾಜನು ಅವರನ್ನು ಆದರಾತಿಥ್ಯಗಳಿಂದ ಸಮ್ಮಾನಿಸಿ ತನ್ನದೇ ವಂಶವಾದ ಕುರುವಂಶದ ಕಥೆಯನ್ನು ಅವರಲ್ಲಿ ಹೇಳುವಂತೆ ಬಿನ್ನವಿಸಿಕೊಳ್ಳುತ್ತಾನೆ. ಆಗ ವ್ಯಾಸರು ತಮ್ಮ ಸಮೀಪದಲ್ಲಿಯೇ ಇದ್ದ ವೈಶಂಪಾಯನರನ್ನುದ್ದೇಶಿಸಿ “ಕುರುವಂಶದ ಇತಿಹಾಸವನ್ನೆಲ್ಲಾ ನಿನಗೆ ಸ್ಥೂಲವಾಗಿ ವಿವರಿಸಿದ್ದೆ. ಈ ಸಂಪೂರ್ಣ ಚರಿತ್ರೆಯನ್ನು ಬಹಳ ಆಕಾಂಕ್ಷೆಯಿಂದ ಕೇಳುತ್ತಿರುವ ಜನಮೇಜಯನಿಗೆ ಹೇಳು” ಅನ್ನುತಾರೆ. ಅವರ ಆಜ್ಞೆಯಂತೆ ವೈಶಂಪಾಯನರು ಮಹಾಭಾರತದ ಕತೆಯನ್ನ ಹೇಳಲು ಪ್ರಾರಂಭಿಸುತ್ತಾರೆ.

ವೈಶಂಪಾಯನರು ಮನಸ್ಸಿನಲ್ಲಿ ಭಗವಂತನನ್ನು ಧ್ಯಾನಿಸಿ ಅಲ್ಲಿ ನೆರೆದಿದ್ದ ಗುರುಗಳಿಗೆ ಮತ್ತು ವಿದ್ವಾಂಸರಿಗೆ ವಂದಿಸಿ, ಬಹಳ ಸರಳವಾದ ರೀತಿಯಲ್ಲಿ ಪಾಂಡವರ ಕೌರವರ ಜನನ ,ಬಾಲ್ಯ ವಿದ್ಯಾಭ್ಯಾಸ, ಅರಗಿನರಮನೆಯ ಪ್ರಕರಣ ವನವಾಸ, ದ್ರೌಪದಿ ಸ್ವಯಂವರ, ರಾಜ್ಯದ ಹಂಚಿಕೆ. ಯಾಗ ಜೂಜು ವನವಾಸ ಅಜ಼್ಞಾತವಾಸ ಯುದ್ಧ ಹೀಗೆ ಪ್ರಾಮುಖ್ಯವಾದ ಘಟನೆಗಳನ್ನಷ್ಟೇ ವಿವರಿಸಿ ಕಥೆಯನ್ನು ಮುಗಿಸುತ್ತಾರೆ.

ಆಗ ಜನಮೇಜಯನು ಅಸಂತುಷ್ಟನಾಗಿ “ವೈಶಂಪಾಯನರೇ ತಾವು ಬಹಳ ಸೂಕ್ಷ್ಮವಾಗಿ ನನ್ನ ಪೂರ್ವಜರ ಕತೆಯನ್ನು ಹೇಳಿದಂತೆ ಭಾಸವಾಗುತ್ತಿದೆ. ಧರ್ಮಾತ್ಮರಾದ ಪಾಂಡವರು ಅವಧ್ಯರೆನಿಸಿದ್ದ ಭೀಷ್ಮ ದ್ರೋಣರನ್ನೇ ಕೊಂದರು ಅನ್ನುವುದರ ಹಿಂದೆ ಮಹತ್ತರವಾದ ಕಾರಣವೇ ಇದ್ದಿರಬೇಕು. ತಮ್ಮ ದಾಯಾದಿಗಳ ಎದುರೇ ಯುದ್ಧ ಮಾಡಬೇಕಾದದ್ದರ ಹಿಂದೆ ಬಲವಾದ ಕಾರಣವೇ ಇದ್ದಂತಿದೆ. ಹಾಗಾಗಿ ನನ್ನ ಪೂರ್ವಜರ ಕತೆಯನ್ನು ಸವಿಸ್ತಾರವಾಗಿ ಕೇಳುವ ಆಸೆಯಾಗಿದೆ. ಇದನ್ನ ಯಥಾವತ್ತಾಗಿ ವಿವರಿಸುತ್ತೀರಾ…” ಎಂದು ಕೇಳಿಕೊಳ್ಳುತ್ತಾನೆ.

ಆಗ ವೈಶಂಪಾಯನರು “ರಾಜ ಹಾಗಿದ್ದಲ್ಲಿ ಈ ಕಥಾಪ್ರವಚನಕ್ಕಾಗಿ ಒಂದು ಕಾಲವನ್ನು ನಿಗದಿಪಡಿಸು. ವ್ಯಾಸರು ಬರೆಸಿರೋ ರೀತಿಯಲ್ಲಿಯೇ ಹೇಳಬೇಕಾಗಿದೆ. ಈ ಮಹಾಭಾರತವು ವೇದಕ್ಕೆ ಸಮನಾದುದು. ಇದನ್ನ ಪಠಿಸೋ ಮನೆಯಲ್ಲಿ ಸದಾ ಸನ್ಮಂಗಳವಾಗುತ್ತದೆ. ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಮತ್ತು ಮೋಕ್ಷಶಾಸ್ತ್ರ ಎಲ್ಲವೂ ಇದರಲ್ಲಿ ಹೇಳಲ್ಪಟ್ಟಿದೆ. ಭರತನ ವಂಶದ ರಾಜರ ಮಹತ್ತರವಾದ ಜನ್ಮವೃತ್ತಾಂತವನ್ನು ವಿವರಿಸಿರುವುದರಿಂದ ಇದು “ಮಹಾಭಾರತ ” ಅಂತನಿಸಿಕೊಂಡಿದೆ.

ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ |
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ ||

ಧರ್ಮದ ವಿಷಯದಲ್ಲಿಯೇ ಆಗಲಿ, ಅರ್ಥದ ವಿಷಯದಲ್ಲಿಯೇ ಆಗಲಿ, ಕಾಮದ ವಿಷಯದಲ್ಲಿಯೇ ಆಗಲಿ ಮತ್ತು ಮೋಕ್ಷದ ವಿಷಯದಲ್ಲಿಯೇ ಆಗಲಿ ಮಹಾಭಾರತದಲ್ಲಿ ಹೇಳಿರುವುದು ಉಳಿದ ಗ್ರಂಥಗಳಲ್ಲಿದೆ. ಆದರೆ ಮಹಾಭಾರತದಲ್ಲಿಲ್ಲದಿರುವ ವಿಷಯಗಳು ಗ್ರಂಥಾಂತರಗಳಲ್ಲಿರುವ ಸಾಧ್ಯತೆಯೇ ಇಲ್ಲ.

ಹೀಗೆ ವೈಶಂಪಾಯನರು ಜನಮೇಜಯನಿಗೆ ಮಹಾಭಾರತದ ಕಥೆಯನ್ನ ಹೇಳಲು ಆರಂಭಿಸುತ್ತಾರೆ.

“ಜನಮೇಜಯ ಪೂರ್ವದಲ್ಲಿ ಧರ್ಮಿಷ್ಠನಾದ ಉಪರಿಚರನೆಂಬ ರಾಜನಿದ್ದನು. ಬೇಟೆ ಅವನ ನಿತ್ಯಕರ್ಮವಾಗಿದ್ದಿತ್ತು. ಅವನು ಇಂದ್ರ ಆದೇಶದಂತೆ ರಮಣೀಯವಾಗಿದ್ದ ಚೇದಿರಾಜ್ಯವನ್ನು ತನ್ನದನ್ನಾಗಿ ಮಾಡಿಕೊಂಡು ಆಳುತ್ತಿದ್ದನು.”

ಜನಮೇಜಯ : ಅವನಿಗೆ ಇಂದ್ರನಿಂದ ಚೇದಿರಾಜ್ಯ ಹೇಗೆ ದೊರೆಯಿತು…?

ವೈಶಂಪಾಯನರು : ಮಹಾರಾಜ, ಅನುದಿನವೂ ಬೇಟೆಯಾಡಿಯೇ ಕಾಲಕಳೆಯುತ್ತಿದ್ದ ಉಪರಿಚರನಿಗೆ ಕಾಲಾಂತರದಲ್ಲಿ ಬೇಟೆಯ ವಿಷಯವಾಗಿ ಜುಗುಪ್ಸೆಯುಂಟಾಗಿ, ತಾನಿನ್ನು ಬೇಟೆಯಾಡಕೂಡದೆಂದು ನಿರ್ಣಯಿಸಿ, ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಅಲ್ಲೇ ಅರಣ್ಯದಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಅವನ ತಪಸ್ಸು ದಿನದಿನವೂ ಉಗ್ರವಾಗಿ ಪರಿಣಮಿಸತೊಡಗುತ್ತದೆ. ಆಗ ಇಂದ್ರನು, ಉಪರಿಚರವಸುವು ತನ್ನ ಪದವಿಗಾಗಿಯೇ ತಪಸ್ಸನ್ನು ಮಾಡುತ್ತಿರುವನೆಂದು ತಿಳಿದು, ಅವನನ್ನ ತಪಸ್ಸಿನಿಂದ ವಿಮುಖನನ್ನಾಗಿಸುವ ಪ್ರಯತ್ನ ಮಾಡುತ್ತಾರೆ. ದೇವತೆಗಳೆಲ್ಲ ಬಂದು ರಾಜ್ಯವನ್ನ ತೊರೆದು ತಪಸ್ಸನ್ನಾಚರಿಸುವ ಮೂಲಕ ನೀನು ನಿನ್ನ ರಾಜಧರ್ಮಕ್ಕೆ ಅಪಚಾರವನ್ನೆಸಗುತ್ತಿದ್ದೀಯ. ರಾಜನಿಲ್ಲದಿರುವುದರಿಂದಾಗಿ ಪ್ರಜೆಗಳಲ್ಲಿ ಅರಾಜಕತೆ ಹೆಚ್ಚಬಹುದು. ಅವರು ಸ್ವೇಚ್ಛಾಚಾರಿಗಳಾಗಬಹುದು. ಆದುದರಿಂದ ನೀನು ಮತ್ತೆ ನಿನ್ನ ರಾಜ್ಯಕ್ಕೆ ತೆರಳಿ ರಾಜ್ಯವನ್ನಾಳು. ಎನ್ನುತ್ತಾರೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!