ವ್ಯಾಸ ಮಹಾಭಾರತ - ಭಾಗ 34 ಆದಿಪರ್ವ |News Mirchi

ವ್ಯಾಸ ಮಹಾಭಾರತ – ಭಾಗ 34 ಆದಿಪರ್ವ

ದೇವತೆಗಳೆಲ್ಲಾ ಉಪರಿಚರವಸುವಿಗೆ ಹಿತನುಡಿ ಹೇಳಿದ ಬಳಿಕ ಸಾಕ್ಷಾತ್ ಇಂದ್ರನೇ ಉಪರಿಚರನ ಬಳಿಬಂದು “ನೀನು ಪುಣ್ಯಲೋಕಗಳ ಪ್ರಾಪ್ತಿಗಾಗಿ ಈ ತಪಸ್ಸನ್ನ ಮಾಡುತ್ತಿರುವಿಯಾದರೆ ಅದನ್ನ ತಪಸ್ಸಿನಿಂದಲೇ ಸಾಧಿಸಬೇಕಾಗಿಲ್ಲ. ಏಕಾಗ್ರಚಿತ್ತದಿಂದ ಲೋಕದಲ್ಲಿ ಧರ್ಮ ಪರಿಪಾಲನೆ ಮಾಡಿದರೆ ಸಾಕು. ಇದೋ ನಿನಗೆ ಚೇದಿ ರಾಜ್ಯವನ್ನ ಅನುಗ್ರಹಿಸುತ್ತಿದ್ದೇನೆ. ಅಲ್ಲಿನ ಜನರು ಧರ್ಮಪರಿಪಾಲಕರು. ಅದೊಂದು ಸಮೃದ್ಧ ರಾಜ್ಯ. ನೀನು ಇದುವರೆಗೆ ಮಾಡಿದ ತಪಸ್ಸು ವ್ಯರ್ಥವಾಗದಂತೆ ನಿನಗೆ ಅಮೋಘವಾದ ವರಗಳನ್ನ ಕೊಡುತ್ತಿದ್ದೇನೆ. ಸ್ವರ್ಗ ಮರ್ತ್ಯ ಪಾತಾಳ ಲೋಕಗಳಲ್ಲಿ ಏನೇ ನಡೆದರೂ ಅದು ನಿನಗೆ ತಿಳಿಯುತ್ತದೆ. ನಿನಗೆ ತಿಳಿಯದಿರುವ ವಿಷಯವೇ ಇರುವುದಿಲ್ಲ. ದೇವೋಪಭೋಗ್ಯವಾದ ದಿವ್ಯವಾದ ಸ್ಫಟಿಕ ಶಿಲಾನಿರ್ಮಿತವಾದ ವಿಮಾನವನ್ನು ನಿನಗೆ ಕೊಡುತ್ತಿದ್ದೇನೆ. ಅದು ಸದಾ ಆಕಾಶದಲ್ಲಿಯೇ ಉಪಸ್ಥಿತವಾಗಿರುತ್ತದೆ. ಆ ವಿಮಾನದಿಂದ ನೀನು ಎಲ್ಲಾ ಲೋಕಗಳಿಗೂ ಹೋಗಬಹುದು. ಇದರ ಜೊತೆಗೆ ವೈಜಯಂತೀ ಎಂಬ ಕಮಲಪುಷ್ಪದ ಹಾರವನ್ನೂ ಕೊಡುತ್ತೇನೆ. ಈ ಪುಷ್ಪಮಾಲೆಯು ಎಂದಿಗೂ ಬಾಡಿಹೋಗುವುದಿಲ್ಲ ಮತ್ತು ಸಂಗ್ರಾಮಕಾಲದಲ್ಲಿ ಇದನ್ನು ಧರಿಸುವುದರಿಂದ ಶಸ್ತ್ರಾಸ್ತ್ರಗಳ ಅಘಾತವಾಗುವುದಿಲ್ಲ. ಇಲೋಕದಲ್ಲಿ ಇಂದ್ರಮಾಲೆಯೆಂದೇ ಪ್ರಸಿದ್ಧವಾಗುತ್ತದೆ. ಇದರ ಹೊರತಾಗಿಯೂ ವೈಣವದಂಡ (ಬಿದಿರಿನಕೋಲು)ವನ್ನೂ ಕೊಡುತ್ತಿದ್ದೇನೆ. ಈ ದಂಡವು ಕೇಳಿದವರ ಇಷ್ಟಾರ್ಥಗಳನ್ನು ಪೂರೈಸುತ್ತದೆಯಲ್ಲದೇ ಶಿಷ್ಟರ ರಕ್ಷಣೆಯನ್ನೂ ಮಾಡುತ್ತದೆ” ಎಂದು ಹೇಳುತ್ತಾನೆ.

ಹೀಗೆ ಇಂದ್ರನಿಂದ ಪಡೆದ ಸುವಸ್ತುಗಳನ್ನ ಸ್ವೀಕರಿಸಿ ವೈಣವದಂಡವನ್ನ ಪೂಜಿಸಿ ಚೇದಿರಾಜ್ಯವನ್ನ ಆಳತೊಡಗುತ್ತಾನೆ. ಮುಂದೆ ಆತ ವಿವಾಹವಾಗಿ ಐವರು ಪುತ್ರರನ್ನ ಪಡೆಯುತ್ತಾನೆ.
ಬೃಹದ್ರಥ,
ಪ್ರತ್ಯಗ್ರಹ,
ಕುಶಾಂಬ ಅಥವಾ ಮಣಿವಾಹ,
ಮಾವೇಲ್ಲ,
ಯದು

ಅವರೆಲ್ಲರೂ ಪ್ರಾಪ್ತ ವಯಸ್ಕರಾದ ಮೇಲೆ, ಅವರಿಗೆ ರಾಜ್ಯವನ್ನು ಹಂಚಿ ಅವರದ್ದೇ ಹೆಸರನ್ನ ಆ ರಾಜ್ಯಕ್ಕಿಟ್ಟು ಅಲ್ಲಿನ ರಾಜನನ್ನಾಗಿ ಮಾಡುತ್ತಾನೆ. (ಮೊದಲಿನ ಮಗನ ರಾಜ್ಯ ಮಾತ್ರ ಮಗಧವಾಗಿತ್ತು) ಅವರಿಗೆಲ್ಲಾ ರಾಜ್ಯವನ್ನು ಹಂಚಿ ತಾನು ಮಾತ್ರ ಇಂದ್ರ ಕೊಟ್ಟ ವಿಮಾನದಲ್ಲೇ ಕಾಲಕಳೆಯುತ್ತಾ ತನ್ನ ಹೆಸರನ್ನ ಅನ್ವರ್ಥವನ್ನಾಗಿಸಿಕೊಳ್ಳುತ್ತಾನೆ (ಉಪರಿಚರ = ಯಾವಾಗಲೂ ಅಂತರಿಕ್ಷದಲ್ಲಿಯೇ ಸಂಚರಿಸತಕ್ಕವನು).

ಹೀಗಿರಲು ಒಮ್ಮೆ ಆತ ಆಕಾಶಮಾರ್ಗದಲ್ಲಿ ಸಂಚರಿಸುತ್ತಿರುವಾಗ ತನ್ನ ದೇಶದ ಒಂದೆಡೆಯಲ್ಲಿ “ಶುಕ್ತಿಮತಿ” ಎಂಬ ನದಿಯು ಸ್ತಬ್ಧವಾಗಿ ನಿಂತಿರುವುದನ್ನ ಕಾಣುತ್ತಾನೆ. ಹತ್ತಿರ ಹೋಗಿ ನೋಡಲು “ಕೋಲಾಹಲ” ಎಂಬ ಪರ್ವತರಾಜ ಆ ನದಿಯನ್ನ ಬಲಾತ್ಕಾರದಿಂದ ತಡೆದು ನಿಲ್ಲಿಸಿರುವುದು ಕಾಣಿಸುತ್ತದೆ. ಇದರಿಂದ ಆಕ್ರೋಶಗೊಂಡ ಉಪರಿಚರನು ಕೋಲಾಹಲನನ್ನು ಮೆಟ್ಟಿದನು, ಇದರಿಂದ ಆತನ ಎದೆಯು ಸೀಳಿಹೋಯಿತು. ಆ ಸೀಳಿಹೋದ ಭಾಗದಿಂದ ಶುಕ್ತಿಮತಿಯು ಹರಿಯತೊಡಗಿದಳು. ರಾಜನು ಮಾಡಿದ ಈ ಉಪಕಾರಕ್ಕಾಗಿ ಶುಕ್ತಿಮತಿಯು ಕೋಲಾಹಲನ ಬಲಾತ್ಕಾರದಿಂದಾಗಿ ಉಂಟಾದ ಸಂತಾನವಾದ ಪ್ರಾಪ್ತವಯಸ್ಕರಾದ ಒಂದು ಗಂಡುಮಗನನ್ನ ಮತ್ತು ಒಬ್ಬ ಹೆಣ್ಣುಮಗಳನ್ನ ರಾಜನಿಗೆ ಕೊಟ್ಟು ಹೊರಟು ಹೋಗುತ್ತಾಳೆ. ಹಾಗೆ ಸಿಕ್ಕ ಮಕ್ಕಳಲ್ಲಿ ಯುವಕನನ್ನ ಉಪರಿಚರನು ತನ್ನ ಸೇನೆಯ ನಾಯಕನನ್ನಾಗಿ ಮಾಡುತ್ತಾನೆ ಮತ್ತು ಸೌಂದರ್ಯವತಿಯಾದ “ಗಿರಿಕೆ”ಯನ್ನು ವಿವಾಹವಾಗುತ್ತಾನೆ.

ಶುಕ್ತಿಮತಿಯಿಂದ ಉಪರಿಚರನಿಗೆ ಸಿಕ್ಕ ಕನ್ಯೆ “ಗಿರಿಕೆ” ಅತ್ಯಂತ ರೂಪಸಿಯಾಗಿದ್ದಳು. ಹಾಗಾಗಿ ಉಪರಿಚರನು ಸದಾ ಅವಳಲ್ಲಿ ಅನುರಕ್ತನಾಗಿರುತ್ತಿದ್ದನು. ಹೀಗಿರಲು ಒಮ್ಮೆ ಆಕೆ ಋತುಸ್ನಾತೆಯಾಗಿ ಪರಿಶುದ್ಧಳಾಗಿ ಪುತ್ರಕಾಮನೆಯಿಂದ ಉಪರಿಚರನ ಬಳಿ ಬಂದು ಸಮಾಗಮವನ್ನ ಬಯಸಿದಳು. ಆದರೆ ಅದೇ ಸಮಯದಲ್ಲಿ ಉಪರಿಚರನ ಪಿತೃದೇವತೆಗಳು ಅವನಲ್ಲಿಗೆ ಬಂದು “ನಾವಿಂದು ಪ್ರತ್ಯಕ್ಷವಾಗಿಯೇ ಶ್ರಾದ್ಧಭೋಜನ ಸ್ವೀಕರಿಸುತ್ತೇವೆ. ಜಿಂಕೆಯನ್ನು ತಂದು ನಮ್ಮ ಭೋಜನಕ್ಕೆ ಬಡಿಸು” ಎನ್ನುತ್ತಾರೆ.

ಅವರ ಮಾತನ್ನೊಪ್ಪಿ ಒಲ್ಲದ ಮನಸ್ಸಿನಿಂದಲೇ ಗಿರಿಕೆಯನ್ನು ನೆನೆಸುತ್ತಾ ರಾಜನು ಕಾಡಿಗೆ ತೆರಳುತ್ತಾನೆ. ಆ ಸಮಯವು ವಸಂತಋತುವಾಗಿದ್ದಿತ್ತು. ಹಾಗಾಗಿ ಕಾಡಿಗೆ ಕಾಡೇ ಹೂವುಗಳಿಂದ ಶೋಭಿಸುತ್ತಿತ್ತು. ಆ ಹೂವಿನ ಸುಗಂಧವು ರಾಜನಲ್ಲಿ ರತಿಸುಖದ ಭಾವವನ್ನ ಕೆರಳಿಸಿತು. ಇಂದ್ರನ ವರಪ್ರಭಾವದಿಂದ ಗಿರಿಕೆಯನ್ನ ಆತ ತಾನಿದ್ದಲ್ಲಿಂದಲೇ ಕಾಣತೊಡಗಿದನು. ಆಕೆಯ ಹಾವ ಭಾವ ರೂಪವನ್ನ ನೋಡುತ್ತಾ ಹೋದಂತೆ ಆತನ ರೇತಸ್ಸು ಸ್ಖಲಿಸಿತು. ರಾಜನು ಮರುಕ್ಷಣದಲ್ಲಿಯೇ ತನ್ನ ರೇತಸ್ಸು ವ್ಯರ್ಥವಾಗಬಾರದೆಂದು ಅಲ್ಲಿನ ವೃಕ್ಷದ ಎಲೆಯೊಂದರಲ್ಲಿ ಆ ರೇತಸ್ಸನ್ನು ಸಂಗ್ರಹಿಸಿ ಅಭಿಮಂತ್ರಿಸಿ ಅಲ್ಲೇ ಇದ್ದ ಗಿಡುಗನ ಬಳಿಕೊಟ್ಟು “ಇದನ್ನ ಅರಮನೆಯಲ್ಲಿರುವ ರಾಣಿ ಗಿರಿಕೆಗೆ ಕೊಡು.” ಎಂದು ಕಳುಹಿಸಿಕೊಡುತ್ತಾನೆ.

ಆ ಗಿಡುಗ ಅರಮನೆಯತ್ತ ಹೋಗುತ್ತಿರಬೇಕಾದರೆ ಅದರ ಕಾಲಲ್ಲಿ ಅದೇನೋ ಮಾಂಸವಿದೆಯೆಂದು ಭ್ರಮಿಸಿದ ಇನ್ನೊಂದು ಗಿಡುಗ ಅದರ ಜೊತೆ ಕಾದಾಟಕ್ಕಿಳಿಯುತ್ತದೆ. ಈ ಕಾದಾಟದಲ್ಲಿ ಆ ರೇತಸ್ಸು ಕೆಳಕ್ಕೆ ಯಮುನಾನದಿಯಲ್ಲಿ ಬೀಳುತ್ತದೆ. ಆ ಹೊತ್ತಿಗೆ ಆ ಯಮುನನದಿಯಲ್ಲಿ ಶಾಪದಿಂದಾಗಿ ಮೀನಾಗಿದ್ದ “ಅದ್ರಿಕೆ ” ಎಂಬ ಅಪ್ಸರೆಯು ಆ ರೇತಸ್ಸನ್ನ ಗ್ರಹಿಸುತ್ತಾಳೆ. ಕಾಲಕಳೆದು ಆಕೆಯ ಗರ್ಭ ಪೂರ್ಣಾವಸ್ಥೆಯಾಗುವ ಹೊತ್ತಿಗೆ ಆಕೆ ಮೀನುಗಾರರ ಬಲೆಗೆ ಸಿಕ್ಕಿಬೀಳುತ್ತಾಳೆ. ಆಕೆಯ ವಿಚಿತ್ರಸ್ವರೂಪವನ್ನ ಕಂಡು ಆ ಬೆಸ್ತರು ಮೆಲ್ಲನೆ ಆ ಮೀನಿನ ಹೊಟ್ಟೆ ಸೀಳಿದಾಗ ಅಲ್ಲಿ ಒಂದು ಗಂಡುಮಗು ಮತ್ತೊಂದು ಹೆಣ್ಣುಮಗು ಇರುತ್ತದೆ. ಕೂಡಲೇ ಆ ವಿಷಯವನ್ನ ಬೆಸ್ತರು ಅಲ್ಲಿನ ರಾಜರಿಗೆ ತಿಳಿಸಿದಾಗ ಆ ರಾಜನು ಆ ಗಂಡು ಮಗುವನ್ನು ತಾನಿಟ್ಟುಕೊಂಡು ಹೆಣ್ಣುಮಗುವನ್ನ ಬೆಸ್ತರ ಪ್ರಮುಖನಿಗೆ ಇಟ್ಟುಕೊಳ್ಳಲು ಹೇಳುತ್ತಾನೆ. ಆ ಗಂಡು ಮಗುವೆ ಮುಂದೆ ಮತ್ಸ್ಯರಾಜ ಎಂದು ಪ್ರಸಿದ್ಧನಾಗುತ್ತಾನೆ. ಆ ಹೆಣ್ಣುಮಗುವೆ ಮತ್ಸ್ಯಗಂಧಾ ಎಂದು ಹೆಸರುವಾಸಿಯಾಗುತ್ತಾಳೆ. ಆಕೆಯೇ ಸತ್ಯವತಿ.

ಮುಂದುವರೆಯುತ್ತದೆ [ಕಾರಣಾಂತರಗಳಿಂದ ಈ ಭಾಗದ ಪ್ರಕಟಣೆ ತಡವಾಯಿತು ಕ್ಷಮೆಯಿರಲಿ, ಎಂದಿನಂತೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮುಂದಿನ ಭಾಗಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತೇವೆ]

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!