ವ್ಯಾಸ ಮಹಾಭಾರತ – ಭಾಗ 35 ಆದಿಪರ್ವ – News Mirchi

ವ್ಯಾಸ ಮಹಾಭಾರತ – ಭಾಗ 35 ಆದಿಪರ್ವ

ಈ ಮತ್ಸ್ಯಗಂಧಾ ಬೆಳೆದು ದೊಡ್ಡವಳಾಗುತ್ತಾಳೆ. ಆಕೆ ತನ್ನ ತಂದೆಯಾದ ಬೆಸ್ತರಾಜನಿಗೆ ಸಹಾಯ ಮಾಡುವ ಸಲುವಾಗಿ ಪ್ರಯಾಣಿಕರನ್ನ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಸೇರಿಸುವ ಕಾಯಕವನ್ನ ಮಾಡತೊಡಗುತ್ತಾಳೆ. ಹೀಗಿರಲು ಒಮ್ಮೆ ತೀರ್ಥಯಾತ್ರೆಯಲ್ಲಿದ್ದ ಮಹರ್ಷಿಗಳಾದ ಪರಾಶರರು ಆಕೆಯ ದೋಣಿಯಲ್ಲಿ ನದಿ ದಾಟಬೇಕಾದ ಪ್ರಸಂಗ ಒದಗಿಬರುತ್ತದೆ. ಆಕೆಯ ಅದ್ಭುತ ರೂಪಕ್ಕೆ ಮನಸೋತು, ದಿವ್ಯಕನ್ಯೆಯೇ ಈಕೆ ಎನ್ನುವುದನ್ನ ಅರಿತು ಪರಾಶರರು ಆಕೆಯ ಜೊತೆ ಸಮಾಗಮವನ್ನ ಬಯಸುತ್ತಾರೆ. ಆಗ ಸತ್ಯವತಿಯು “ನದಿಯ ಎರಡೂ ದಂಡೆಯಲ್ಲಿ ಋಷಿ ಮುನಿಗಳಿದ್ದಾರೆ ಹೀಗಿರುವಾಗ ನಾನು ಹೇಗೆ ನಿಮ್ಮನ್ನ ಕೂಡಲಿ…?” ಎನ್ನುತ್ತಾಳೆ. ಆಗ ಪರಾಶರರು ತಮ್ಮ ತಪಶ್ಶಕ್ತಿಯಿಂದ ಆ ದೋಣಿಯ ಸುತ್ತಲೂ ಮಂಜು ಕವಿಯುವಂತೆ ಮಾಡುತ್ತಾರೆ.

ಆಗ ಸತ್ಯವತಿಯು ನಾಚಿ, “ನಿಮ್ಮ ತಪಶ್ಶಕ್ತಿಗೆ ಸಾಟಿಯಿಲ್ಲ. ಆದರೂ ನಾನೀಗ ಕನ್ಯಾವಸ್ಥೆಯಲ್ಲಿದ್ದೇನೆ ಮತ್ತು ನಾನಿನ್ನೂ ನನ್ನ ತಂದೆಯ ಅಧೀನದಲ್ಲೇ ಇದ್ದೇನೆ. ಹೀಗಿರುವಾಗ ನಾನು ನನ್ನ ಕನ್ಯತ್ವವನ್ನ ಕಳೆದು ಮತ್ತೆ ಹೇಗೆ ನನ್ನ ಮನೆ ಸೇರಲಿ…? ಎಂದು ಪ್ರಶ್ನಿಸುತ್ತಾಳೆ. ಆಗ ಪರಾಶರರು, “ನನ್ನೊಡನೆ ಸಮಾಗಮವಾದ ಬಳಿಕ ಮತ್ತೆ ನಿನಗೆ ನಿನ್ನ ಕನ್ಯತ್ವವನ್ನ ಮರಳಿ ಕೊಡುತ್ತೇನೆ. ಸಾಮಾನ್ಯ ಮಾನವಿಯಂತೆ ನೀನು ಗರ್ಭಧಾರಣೆ ಮಾಡಬೇಕಾಗುವುದಿಲ್ಲ. ತೇಜಸ್ವಿಯಾದ ಮಹಾತಪಸ್ವಿಯಾದ ಮಗನನ್ನ ಈಗಲೇ ಪಡೆಯುವೆ ಮತ್ತು ಒಡನೆಯೇ ನಿನಗೆ ಪುನಃ ಕನ್ಯತ್ವ ಪ್ರಾಪ್ತಿಯಾಗುವುದು. ಅಷ್ಟು ಮಾತ್ರವಲ್ಲದೇ ನಿನಗೆ ಬೇಕಾದ ವರವೊಂದನ್ನೂ ಬೇಡು. ಅದನ್ನೂ ದಯಪಾಲಿಸುತ್ತೇನೆ” ಎನ್ನುತ್ತಾನೆ. ಆಗ ಸತ್ಯವತಿಯು ಚೆನ್ನಾಗಿ ಯೋಚಿಸಿ “ಹುಟ್ಟಿನಿಂದ ಬಂದ ಮೀನಿನ ಶರೀರ ಸಂಬಂಧವಾದ ದುರ್ಗಂಧವು ನನ್ನನ್ನ ಬಿಟ್ಟು ಹೋಗಲಿ.” ಎಂದು ಕೇಳಿಕೊಂಡಳು. ಪರಾಶರರು “ಅಸ್ತು” ಎಂದರು ಆ ಕೂಡಲೇ ಆಕೆಯ ಮೈಯ ದುರ್ಗಂಧ ದೂರವಾಗಿ ಒಂದು ಯೋಜನ ದೂರದಷ್ಟು ಹರಡುವ ಸುಗಂಧವು ಅವಳ ಮೈಯಿಂದ ಹೊರಹೊಮ್ಮಲು ತೊಡಗಿತು. ಈ ಕಾರಣದಿಂದ ಮುಂದೆ ಆಕೆಗೆ ಯೋಜನಗಂಧಾ ಅನ್ನುವ ಹೆಸರು ಬಂದಿತು.

ಹೀಗೆ ಪರಾಶರರು ಮತ್ತು ಸತ್ಯವತಿಯ ಸಂಯೋಗದಿಂದಾಗಿ ಆ ಕ್ಷಣದಲ್ಲೇ ಮುಗುವೊಂದರ ಜನನವಾಯಿತು. ಹುಟ್ಟಿದೊಡನೆಯೇ ಆ ಬಾಲಕ ತನ್ನ ತಾಯಿಯ ಆಜ್ಞೆ ಪಡೆದು, ನೆನೆದಾಗ ಬರುವೆನೆಂದು, ಹೇಳಿ ತಪಸ್ಸಿಗಾಗಿ ಹೊರಟು ಹೋದನು. ಸತ್ಯವತಿಯು ಅವನನ್ನು ನದಿಯ ಮಧ್ಯದಲ್ಲಿದ್ದ ದ್ವೀಪದಲ್ಲಿ ಹೆತ್ತ ಕಾರಣ ಅವನಿಗೆ ದ್ವೈಪಾಯನ ಅನ್ನುವ ಹೆಸರು ಬಂತು. ಕೃಷ್ಣ ಅನ್ನುವುದು ಅವನ ಹೆಸರಾದ್ದರಿಂದ ಆತನನ್ನ ಕೃಷ್ಣದ್ವೈಪಾಯನ ಅಂತಲೂ ಕರೆಯಲಾಯಿತು. ಮುಂದೆ ಆತನೇ ವೇದಗಳನ್ನು ವಿಭಾಗಿಸಿದ್ದರಿಂದ ವ್ಯಾಸ ಎನ್ನುವ ಹೆಸರು ಬಂತು.

ವ್ಯಾಸರ ಜನನದ ಕತೆ ಕೇಳಿದ ಬಳಿಕ ಜನಮೇಜಯನು ವೈಶಂಪಾಯರ ಬಳಿ ಸಮಸ್ತ ರಾಜರ ಇತಿಹಾಸವನ್ನ ತಿಳಿದುಕೊಳ್ಳಬೇಕೆನ್ನುವ ತನ್ನ ಆಸೆಯನ್ನ ವ್ಯಕ್ತಪಡಿಸಲು ವೈಶಂಪಾಯನರು ಆ ಕತೆಯನ್ನ ಹೇಳಲು ಪ್ರಾರಂಭಿಸುತ್ತಾರೆ.

ಜನಮೇಜಯ, ಹಿಂದೆ ಭಗವಾನ್ ಪರಶುರಾಮನು ಭೂಮಿಯ ಮೇಲಿದ್ದ ಕ್ಷತ್ರಿಯರ ಮೇಲೆ ಇಪ್ಪತ್ತೊಂದು ಬಾರಿ ದಾಳಿ ನಡೆಸಿ ದುಷ್ಟರಾದ ಮತ್ತು ಮದಾಂಧರಾದ ಕ್ಷತ್ರಿಯರನ್ನೆಲ್ಲಾ ಸಂಹರಿಸಿ ತಪಸ್ಸು ಮಾಡಲು ಹೊರಟು ಹೋದರು. ಆ ಹೊತ್ತಿಗೆ ಕ್ಷತ್ರಿಯ ವಂಶದ ಉಳಿಯುವಿಕೆ ಮತ್ತು ಬೆಳೆಯುವಿಕೆಗಾಗಿ ಕ್ಷತ್ರಿಯ ಸ್ತ್ರೀಯರು ಆಪದ್ಧರ್ಮವನ್ನನುಸರಿಸಿ ಬ್ರಾಹ್ಮಣರ ಬಳಿ ಪುತ್ರಾರ್ಥಿಗಳಾಗಿ ಹೋದರು. ಈ ರೀತಿಯಾಗಿ ತೇಜಸ್ವಿ ಬ್ರಾಹ್ಮಣರಿಂದ ಉಂಟಾದ ಕ್ಷತ್ರಿಯ ಸಂತಾನವು ಧರ್ಮದ ಪರಿಪಾಲನೆಯನ್ನ ನಿಷ್ಠೆಯಿಂದ ಮಾಡತೊಡಗಿತು. ಈ ರೀತಿಯ ಧರ್ಮಿಷ್ಟ ರಾಜರುಗಳಿಂದಾಗಿ ಪ್ರಜೆಗಳು ಧರ್ಮಿಷ್ಟರಾಗತೊಡಗಿದರು. ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಶೂದ್ರ ಎಲ್ಲರೂ ತಮ್ಮ ತಮ್ಮ ಧರ್ಮದ ಪರಿಪಾಲನೆಯನ್ನ ನಿಷ್ಠೆಯಿಂದ ಮಾಡುತ್ತಿದ್ದರು. ಇಡಿಯ ಭೂಮಿಯು ಧರ್ಮದ ಬೀಡಾಗಿತ್ತು.

ಹೀಗಿರುವ ಹೊತ್ತಲ್ಲೇ ಹಲವಾರು ದೇವಾಸುರ ಸಂಗ್ರಾಮಗಳಾಗುತ್ತಿದ್ದವು. ದೇವತೆಗಳು ಹಲವು ಬಾರಿ ಅಸುರರನ್ನ ಸೋಲಿಸಿದರು. ಹೀಗೆ ದೇವಾಸುರ ಸಂಗ್ರಾಮದಲ್ಲಿ ಸೋತು ಸ್ವರ್ಗದ ಸುಖೋಪಭೋಗಗಳಿಂದ ವಂಚಿತರಾದ ಅಸುರರು ಭೂಮಿಯ ಮೇಲೆ ತಮ್ಮ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ ಭೂಮಿಯ ಮೇಲೆ ಮಾನವ ರೂಪದಲ್ಲಿ ಹುಟ್ಟಿ ಬರಲು ಪ್ರಾರಂಭಿಸಿದರು. ಇಂತಹಾ ಮಾನವರೂಪಿ ಅಸುರರ ಸಂಖ್ಯೆ ಹೆಚ್ಚಾಗತೊಡಗಿದಂತೆ…. ಅಧರ್ಮ ಭೂಮಿಯ ಮೇಲೆ ತಾಂಡವವಾಡತೊಡಗಿತು. ಇದು ಮುಂದುವರಿಯುತ್ತಿದ್ದಂತೆ ಭೂಮಿಯ ಭಾರ ಹೆಚ್ಚಾಗತೊಡಗಿತು. ದಿನೇ ದಿನೇ ಹೆಚ್ಚುತ್ತಿದ್ದ ಈ ಭಾರವನ್ನ ತಡೆಯಲಾಗದೆ ಒಮ್ಮೆ ಭೂದೇವಿ ನೇರವಾಗಿ ಬ್ರಹ್ಮನನ್ನ “ಈ ಭಾರದಿಂದ ನನಗೆ ಮುಕ್ತಿಕೊಡು” ಎಂದು ಪ್ರಾರ್ಥಿಸುತ್ತಾಳೆ. ಆಗ ಬ್ರಹ್ಮನು ಅವಳ ಮನದಿಂಗಿತವನ್ನ ಅರಿತು ದೇವತೆಗಳನ್ನ ಕರೆದು “ನೀವು ಭೂಮಿಯಲ್ಲಿ ಧರ್ಮಪರಿಪಾಲನೆಗಾಗಿ ಮಾನವರೂಪದಲ್ಲಿ ಅವತರಿಸಿ” ಎಂದು ಆದೇಶಿಸುತ್ತಾನೆ. ಇದಕ್ಕೆ ಒಪ್ಪಿದ ದೇವತೆಗಳು ಶ್ರೀಮನ್ನಾರಾಯಣನ ಬಳಿ ಹೋಗಿ “ಭೂಭಾರಹರಣಕ್ಕಾಗಿ ನೀನೂ ಭೂಮಿಯಲ್ಲಿ ಅವತರಿಸು” ಎಂದು ಕೇಳಿಕೊಳ್ಳುತ್ತಾರೆ. ಆಗ ನಾರಾಯಣನು ಹಸನ್ಮುಖನಾಗಿ ತಥಾಸ್ತು ಅನ್ನುತ್ತಾನೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.